ತುಮಕೂರು: ಈಡಿಗರಲ್ಲಿ ನಾವೆಲ್ಲ ಒಂದು ಎಂಬ ಏಕತಾ ಮನೋಭಾವ ಮೂಡಬೇಕು. ಒಳ ಪಂಗಡದ ಹೆಸರಿನಲ್ಲಿ ವಿಘಟನೆಯಾಗಬಾರದು ಎಂದು ಸೋಲೂರಿನ ಆರ್ಯ ಈಡಿಗರ ಮಹಾಸಂಸ್ಥಾನ ಮಠದ ವಿಖ್ಯಾತನಂದ ಸ್ವಾಮೀಜಿ ಸಲಹೆ ಮಾಡಿದರು.
ನಗರದಲ್ಲಿ ಭಾನುವಾರ ಜಿಲ್ಲಾ ಆರ್ಯ ಈಡಿಗರ ಸಂಘ, ಬ್ರಹ್ಮಶ್ರೀ ನಾರಾಯಣ ಗುರು ಜಯಂತ್ಯುತ್ಸವ ಸಮಿತಿ, ಜೆ.ಪಿ.ನಾರಾಯಣ ಸ್ವಾಮಿ ಪ್ರತಿಷ್ಠಾನ, ನಾರಾಯಣ ಗುರು ಸಮಾಜ ಟ್ರಸ್ಟ್, ಜಿಲ್ಲಾ ಹಿಂದುಳಿದ ವರ್ಗಗಳ ಒಕ್ಕೂಟದಿಂದ ಆಯೋಜಿಸಿದ್ದ ನಾರಾಯಣ ಗುರು ಜಯಂತಿ, ಪ್ರತಿಭಾ ಪುರಸ್ಕಾರ ವಿತರಣೆ, ಸಾಧಕರಿಗೆ ಸನ್ಮಾನ ಸಮಾರಂಭದಲ್ಲಿ ಮಾತನಾಡಿದರು.
ನಮ್ಮಲ್ಲಿ ಸಂಕುಚಿತ ಮನೋಭಾವ ಬಿಟ್ಟು ಹೋದರೆ ಮಾತ್ರ ಸದೃಢ ಸಮಾಜ ಕಟ್ಟಲು ಸಾಧ್ಯ. ಎಲ್ಲರು ಸ್ವಾವಲಂಬಿ, ಸುಸಂಸ್ಕೃತರಾಗಬೇಕು ಎಂಬುವುದು ನಾರಾಯಣ ಗುರು ಆಶಯವಾಗಿತ್ತು. ಅವರ ವಿಚಾರ ಎಷ್ಟು ಅಳವಡಿಸಿಕೊಂಡಿದ್ದೇವೆ ಎಂಬುವುದನ್ನು ಆತ್ಮಾವಲೋಕನ ಮಾಡಿಕೊಳ್ಳಬೇಕು ಎಂದರು.
ಮಾಜಿ ಸಚಿವ ಕುಮಾರ್ ಬಂಗಾರಪ್ಪ ಮಾತನಾಡಿ ‘ನಾವೆಲ್ಲ ಒಳ ಪಂಗಡಗಳ ಜತೆಗೆ ಹೋರಾಟ ಮಾಡದೆ, ಒಗ್ಗಟ್ಟಾಗಿರಬೇಕು. ಎಲ್ಲರನ್ನು ಜತೆಯಲ್ಲಿ ಕರೆದುಕೊಂಡು ಹೋದರೆ ಮುಂದುವರಿಯಲು ಸಾಧ್ಯ. ಈಗಾಗಲೇ ನಮ್ಮ ಕುಲಕಸಬು ಕಳೆದುಕೊಂಡಿದ್ದೇವೆ. ಇಂತಹ ಸಮಯದಲ್ಲಿ ಎಲ್ಲರು ಒಂದಾಗಿ, ಸಮಾಜ ಕಟ್ಟುವ ಕೆಲಸ ಮಾಡಬೇಕು’ ಎಂದು ಹೇಳಿದರು.
ಶಾಸಕ ಕೆ.ಎನ್.ರಾಜಣ್ಣ ಮಾತನಾಡಿ, ತುಳಿತಕ್ಕೆ, ಶೋಷಣೆಗೆ ಒಳಗಾದ ಸಮುದಾಯಗಳು ಒಗ್ಗಟ್ಟಾಗಿರಬೇಕು ಎಂದರು.
ನಿಟ್ಟೂರು ನಾರಾಯಣ ಗುರು ಮಹಾಸಂಸ್ಥಾನ ಮಠದ ರೇಣುಕಾನಂದ ಸ್ವಾಮೀಜಿ, ಶಾಸಕರಾದ ಬಿ.ಸುರೇಶ್ ಗೌಡ, ಜಿ.ಬಿ.ಜ್ಯೋತಿಗಣೇಶ್, ಕರ್ನಾಟಕ ಪ್ರದೇಶ ಆರ್ಯ ಈಡಿಗರ ಸಂಘದ ಅಧ್ಯಕ್ಷ ಎಂ.ತಿಮ್ಮೇಗೌಡ, ಜಿಲ್ಲಾ ಆರ್ಯ ಈಡಿಗರ ಸಂಘದ ಅಧ್ಯಕ್ಷ ಎಂ.ನಾಗರಾಜ್, ಜಯಂತ್ಯುತ್ಸವ ಸಮಿತಿ ಅಧ್ಯಕ್ಷ ಜೆ.ಪಿ.ಶಿವಣ್ಣ, ಮುಖಂಡರಾದ ಎಚ್.ಮಹದೇವ್, ಮಾದವನ್, ಭಾಗ್ಯವತಿ ವೆಂಕಟಸ್ವಾಮಿ, ಸದಾಶಿವ ಅಮೀನ್, ಕೆ.ಪಿ.ಮಂಜುನಾಥ್, ಎಚ್.ಎಂ.ಮಾಧು ಸಾಹುಕಾ ಇದ್ದರು.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC



