ಕರ್ನಾಟಕ ರಾಜ್ಯ ಇಡೀ ದೇಶದಲ್ಲಿ ತಲೆ ತಗ್ಗಿಸುವ ಕೆಲಸವನ್ನ ಬಿಜೆಪಿ ಸರ್ಕಾರ ಮಾಡಿದೆ. ಪತ್ರಕರ್ತರನ್ನೇ ಖರೀದಿಸಲು ಹೋಗಿದ್ದಾರಲ್ಲ ಇದು ದೊಡ್ಡ ಕಳಂಕ. ಸಿಎಂ ಬಸವರಾಜ ಬೊಮ್ಮಾಯಿ ಈ ಬಗ್ಗೆ ಸ್ಪಷ್ಟನೆ ನೀಡಬೇಕು ಎಂದು ಕೆಪಿಸಿಸಿ ವಕ್ತಾರ ಎಂ.ಲಕ್ಷ್ಮಣ್ ಆಗ್ರಹಿಸಿದರು.
ಮೈಸೂರಿನ ಕಾಂಗ್ರೆಸ್ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಸರ್ಕಾರದಿಂದ ಪತ್ರಕರ್ತರಿಗೆ ದೀಪಾವಳಿ ಗಿಪ್ಟ್ ವಿಚಾರಕ್ಕೆ ಸಂಬಂಧಿಸಿದಂತೆ ವಾಗ್ದಾಳಿ ನಡೆಸಿದ ಕೆಪಿಸಿಸಿ ವಕ್ತಾರ ಎಂ.ಲಕ್ಷ್ಮಣ್, ಬಿಜೆಪಿ ಸರ್ಕಾರದವರು ಪತ್ರಕರ್ತರಿಗೆ ಭ್ರಷ್ಟಾಚಾರದ ಕಳಂಕವನ್ನ ಅಂಟಿಸಿದ್ದಾರೆ ಅದನ್ನು ಯಾರು ತೊಳೆಯುತ್ತಾರೆ. ಪತ್ರಕರ್ತರ ಒಳ್ಳೆತನಕ್ಕೆ ಮಸಿ ಬಳಿಯುವ ಕೆಲಸ ಬಿಜೆಪಿಯವರು ಮಾಡಿದ್ದಾರೆ. ಪತ್ರಕರ್ತರನ್ನೇ ಖರೀದಿ ಮಾಡಲಿಕ್ಕೆ ಹೋಗಿದ್ದಾರಲ್ಲ ಇದು ದೊಡ್ಡ ಕಳಂಕ. ಸಿಎಂ ಇದಕ್ಕೆ ಸ್ಪಷ್ಟನೆ ಕೊಡಬೇಕು. ಆಯ್ದ ಪತ್ರಕರ್ತರಿಗೆ ಸ್ವೀಟ್ ಬಾಕ್ಸ್ ಮೂಲಕ ಹಣ ಹಂಚಿರುವುದು ಖಂಡನೀಯ. ಜನರ ದೃಷ್ಟಿಯಲ್ಲಿ ಪತ್ರಕರ್ತರಿಗೆ ಕೀಳು ಮಟ್ಟದ ಭಾವನೆ ಬರುವ ಹಾಗೆ ಮಾಡಿದ್ದೀರಿ. ಇದಕ್ಕೆ ಸ್ಪಷ್ಟನೆ ಕೊಡಿ ಎಂದು ಆಗ್ರಹಿಸಿದರು.
ಇದರಲ್ಲಿ ಸಿಎಂ ಬೊಮ್ಮಾಯಿ, ಮಂತ್ರಿಗಳಾದ ಆರ್.ಆಶೋಕ್, ಸುಧಾಕರ್, ಅಶ್ವಥ್ ನಾರಾಯಣ್ ಸೇರಿ ಮಾಡಿದ್ದಾರೆ . ಈ ಕುರಿತು ನ್ಯಾಯಾಂಗ ತನಿಖೆ ಮಾಡಲಿ. ಮಾಧ್ಯಮದವರಿಗೆ ಅವಮಾನ ಮಾಡಿದ್ದೀರಿ. ಆಯ್ದ ಪತ್ರಕರ್ತರಿಗೆ ಮಾತ್ರ ಗಿಫ್ಟ್ ಜೊತೆ ಹಣ ಹಂಚಿಕೆ ಮಾಡಿದ್ದೀರಿ. ಗಿಪ್ಟ್ ವಿಚಾರಕ್ಕೂ ಮಾರ್ಗಸೂಚಿ ಹೊರಡಿಸಿರುವ ಸರ್ಕಾರ. ಕೋವಿಡ್ ಮಾರ್ಗ ಸೂಚಿ ಕೇಳಿದ್ದೀವಿ. ಆದರೆ, ಉಡುಗೊರೆ ಕೊಡುವುದಕ್ಕೂ ಮಾರ್ಗಸೂಚಿ ಹೊರಡಿಸಿರೋದು ಬಿಜೆಪಿ ಯಾವ ಮಟ್ಟಕ್ಕೆ ಇಳಿದಿದೆ ಅನ್ನೋದಕ್ಕೆ ಒಂದು ಉದಾಹರಣೆ ಎಂದು ಕಿಡಿಕಾರಿದರು.
ಕರ್ನಾಟಕ ರಾಜ್ಯದ ಮಾಧ್ಯಮಗಳ ಬಗ್ಗೆ ತಪ್ಪು ಗ್ರಹಿಕೆ ಮಾಡಿರುವುದು ಸರಿಯಲ್ಲ. ತಮ್ಮ ತಪ್ಪುಗಳನ್ನ ಮುಚ್ಚಿಕೊಳ್ಳಲು ಮಾಧ್ಯಮಗಳನ್ನ ಖರೀದಿ ಮಾಡಲು ಹೊರಟಿರೋದು ಖಂಡನೀಯ. ಇಂಥ ಘಟನೆ ಎಲ್ಲೂ ಆಗಿರಲಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಹಾಗೆಯೇ ಬಿಜೆಪಿ ರಾಜ್ಯಾಧ್ಯಕ್ಷ ನಳಿನ ಕುಮಾರ್ ವಿರುದ್ಧ ಹರಿಹಾಯ್ದ ಎಂ.ಲಕ್ಷ್ಮಣ್ , ನಳೀನ್ ಕುಮಾರ್ ಕಟೀಲ್ ಒಬ್ಬ ಜೋಕರ್ ಗೂ ಲಾಯಕ್ ಇಲ್ಲ. ಜೋಕರ್ ಗೂ ಒಂದು ಮೌಲ್ಯ ಇದೆ. ಮೈಸೂರಿನಲ್ಲಿ ಸಿದ್ದರಾಮಯ್ಯ ನವರನ್ನ ವಜ್ರಮುನಿ ಎಂದು ಕರೆಯುತ್ತಾನೆ. ವಜ್ರಮುನಿ ಒಬ್ಬ ಅಧ್ಬುತ ನಟ ಅವರಿಗೆ ಅವಮಾನ ಮಾಡ್ತಾ ಇದಿಯಾಪ್ಪಾ…? ನಾಲಿಗೆ ಬಿಗಿ ಹಿಡಿದು ಮಾತನಾಡಬೇಕು. ನಿನ್ನ ಬಂಡವಾಳ ನಮಗೂ ಗೊತ್ತು ನೀ ಎಂಥ ವ್ಯಕ್ತಿ ಅಂಥ ಸಾಕ್ಷಿ ಸಮೇತ ನಮಗೆ ಗೊತ್ತು. ನೀ ಏನ್ ಮಾಡಿದ್ದೀಯಾ ಅಂತ ಗೊತ್ತು ಎಂದು ವಾಗ್ದಾಳಿ ನಡೆಸಿದರು.
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy


