ಕೊರಟಗೆರೆ : ಸಮಾಜದಲ್ಲಿ ಪ್ರತಿಯೊಬ್ಬರು ಸಮಾನತೆಯಿಂದ ಬಾಳಿದರೆ ದೇಶ ಹಾಗೂ ರಾಜ್ಯ ಪ್ರಗತಿ ಹೊಂದುವುದರ ಜೊತೆಗೆ ಮಾದರಿಯಾಗಲಿದೆ. ಈ ನಿಟ್ಟಿನಲ್ಲಿ ಎಲ್ಲರೂ ಸಾಗೋಣ ಎಂದು ನಟ, ಸಾಮಾಜಿಕ ಹೋರಾಟಗಾರ ಚೇತನ್ ಅಹಿಂಸಾ ತಿಳಿಸಿದರು.
ಕೊರಟಗೆರೆ ಪಟ್ಟಣದ ಕೆಎಸ್ ಆರ್ ಟಿಸಿ ಬಸ್ ನಿಲ್ದಾಣದ ಖಾಸಗಿ ವಾಹಿನಿಯ ಕಚೇರಿಯಲ್ಲಿ ಆಯೋಜಿಸಲಾದ ಸಮಾನತೆ ಹಾದಿಯ ಪಯಣ ಕುರಿತು ಪ್ರೋಜೆಕ್ಟರ್ ಮೂಲಕ ಸಮಾಜದ ಬದಲಾವಣೆ ಹಾಗೂ ಸಮಾನತೆ ಕುರಿತು ಹಲವು ಮಾಹಿತಿ ನೀಡಿದ ಅವರು, ವಿವಿಧ ಸಂಘಟನೆಯ ಪದಾಧಿಕಾರಿಗಳಿಗೆ ಮಾಹಿತಿ ನೀಡಿ ಭವಿಷ್ಯದ ಕರ್ನಾಟಕ ನಿರ್ಮಾಣ ಮಾಡಬೇಕು, ಉತ್ತಮ ಸಮಾಜ ನಿರ್ಮಾಣವಾಗಬೇಕು ಎಂದು ಹೇಳಿದರು.
ಪೆರಿಯಾರ್ ಮತ್ತು ಅಂಬೇಡ್ಕರ್ ಅವರು ನಾವು ಅಧಿಕಾರದಲ್ಲಿ ಬರಬೇಕು ಎಂದು ಹೇಳುತ್ತಾರೆ. ನಾವು ಎಂದರೆ ಸಮಾನತಾವಾದಿಗಳು ಅಧಿಕಾರಕ್ಕೆ ಬರಬೇಕು. ಅಸಮಾನತೆ ವ್ಯವಸ್ಥೆಯೇ ನಮ್ಮ ಶತ್ರು. ಈ ವ್ಯವಸ್ಥೆಯಲ್ಲಿ ಆದಿವಾಸಿ, ದಲಿತ, ಮಹಿಳೆಯರನ್ನು ವಿರೋಧಿಸಲಾಗುತ್ತದೆ. ಇದನ್ನು ನಾವು ಗುರುತಿಸಿಕೊಂಡು ಒಂದು ಪರ್ಯಾಯವಾದ ಶಕ್ತಿ ಕಟ್ಟಬೇಕು ಎಂದು ಹೇಳಿದರು.
ಬಾಬಾ ಸಾಹೇಬರಿಗೆ ಮೂರ್ತಿ, ವ್ಯಕ್ತಿ ಆರಾಧನೆ ಇಷ್ಟ ಇರಲಿಲ್ಲ. ವ್ಯಕ್ತಿ ಆರಾಧನೆ ಮಾಡಿದಷ್ಟು ಪ್ರಜಾಪ್ರಭುತ್ವಕ್ಕೆ ಕಷ್ಟ ಆಗುತ್ತದೆ. ನನ್ನನ್ನು ಪೂಜಿಸಬೇಡಿ, ನನ್ನನ್ನು ಓದಿ ಎಂದು ಹೇಳುತ್ತಿದ್ದರು. ನಾವು ಅವರನ್ನು ಪೂಜಿಸುತ್ತೇವೆ ಆದರೆ ಅವರ ವಿಚಾರಗಳನ್ನು ಅರ್ಥ ಮಾಡಿಕೊಳ್ಳಲ್ಲ.. ಬುದ್ಧ, ಬಸವ, ಅಂಬೇಡ್ಕರ್‌ರವರ ಆದರ್ಶ ಜೀವನವನ್ನು ಅರ್ಥ ಮಾಡಿಕೊಂಡು ನಾವೆಲ್ಲರೂ ಮುನ್ನಡೆಯಬೇಕಿದೆ ಎಂದು ಹೇಳಿದರು.
ಮತ್ತೋರ್ವ ಸಾಮಾಜಿಕ ಹೋರಾಟಗಾರ ಜೆಟ್ಟಿ ಅಗ್ರಹಾರ ನಾಗರಾಜು ಮಾತನಾಡಿ, ಉತ್ತಮ ಸಮಾಜ ಎಂದರೆ ಅದೆಷ್ಟು ಜ್ಞಾನಪೀಠ ಪ್ರಶಸ್ತಿ ಪಡೆಯುತ್ತೇವೆ, ಅದೆಷ್ಟು ದೊಡ್ಡ ಬಜೆಟ್ ಸಿನಿಮಾ ಮಾಡುತ್ತೇವೆ ಎಂದಲ್ಲ. ಉತ್ತಮ ಸಮಾಜ ಎಂದರೆ ಅಂಬೇಡ್ಕರ್ ಕಂಡಂತಹ ಸಮ-ಸಮಾಜ, ಸಮಾನತೆಯ ಸಮಾಜವಾಗಿದೆ ಎಂದು ಹೇಳಿದರು.
ಕರ್ನಾಟಕ ಕಾರ್ಯ ನಿರತ ಪತ್ರಕರ್ತರ ಸಂಘದ ತಾ.ಅಧ್ಯಕ್ಷ ಕೆ.ವಿ ಪುರುಷೋತ್ತಮ್ ಮಾತನಾಡಿ, ಸಾಮಾಜಿಕ, ಆರ್ಥಿಕ ಹಾಗೂ ರಾಜಕೀಯ ಸ್ಥಾನಮಾನದಲ್ಲಿ ಎಲ್ಲರಿಗೂ ಸಮಾನ ಅವಕಾಶ ದಕ್ಕಬೇಕಿದೆ. ಶೈಕ್ಷಣ ಕ, ಆರೋಗ್ಯ ಹಾಗೂ ಪರಿಸರ ಜೊತೆಗೆ ಅಭಿವೃದ್ಧಿ ಕುರಿತು ಚಿಂತನೆಗಳನ್ನು ಮೈಗೂಡಿಸಿಕೊಂಡು ಮುನ್ನಡೆದು ಸಂವಿಧಾನ ಆಶಯ ಈಡೇರಿಸಬೇಕಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ನಿವೃತ್ತ ಶಿಕ್ಷಕಿ ತಿಮ್ಮಾಜಮ್ಮ, ಕೆಯುಡಬ್ಲ್ಯುಜೆ ಉಪಾಧ್ಯಕ್ಷ ಹೆಚ್.ಎನ್.ನಾಗರಾಜು, ಅಗ್ರಹಾರ ಗ್ರಾ.ಪಂ ಅಧ್ಯಕ್ಷ ಪ್ರಭಾಕರ್, ದಲಿತ ಮುಖಂಡ ದಾಡಿ ವೆಂಕಟೇಶ್, ದೊಡ್ಡಯ್ಯ, ವೀರಕ್ಯಾತರಾಯ, ಬಸವರಾಜು, ನಯಾಜ್ ಅಹಮದ್, ಮಹಮ್ಮದ್ ಗೌಸ್ ಫೀರ್, ಫಾರೂಕ್, ನವೀನ್, ರಾಕೇಶ್, ಉಮೇಶ್, ರಿಜ್ವಾನ್ ಪಾಷ, ಸುರೇಶ್, ರಿಜ್ವಾನ್‌ಅಹಮದ್, ಚಿಕ್ಕಿರಪ್ಪ ಸೇರಿದಂತೆ ಇತರರು ಇದ್ದರು.
ವರದಿ: ಮಂಜುಸ್ವಾಮಿ ಎಂ.ಎನ್.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC