ಪ್ರಿಯಕರನೊಬ್ಬ ಪ್ರೇಯಸಿ ಜತೆ ಏಕಾಂತದಲ್ಲಿದ್ದಾಗ ದಿಢೀರನೇ ಬಂದ ಆಕೆಯ ಪತಿಯಿಂದ ತಪ್ಪಿಸಿಕೊಳ್ಳಲು ಸಾರ್ವಜನಿಕ ಪ್ರವೇಶ ನಿಷೇಧಿತ ಎಚ್‌ಎಎಲ್ ವಿಮಾನ ನಿಲ್ದಾಣ ಆವರಣಕ್ಕೆ ನುಗ್ಗಿ ಈಗ ಪರಪ್ಪನ ಅಗ್ರಹಾರ ಜೈಲು ಸೇರಿದ್ದಾನೆ.
ಅಸ್ಸಾಂ ಮೂಲದ ಮುಕುಂದ ಖೌಂದ್ (36) ಬಂಧಿತನಾಗಿದ್ದು, ಕೆಂಪೇಗೌಡ ಪ್ರತಿಮೆ ಅನಾವರಣಕ್ಕೆ ಪ್ರಧಾನಿ ಆಗಮನದ ಹಿಂದಿನ ದಿನ ಈ ಘಟನೆ ನಡೆದಿದ್ದು, ಪ್ರಧಾನಿ ಕಾರ್ಯಕ್ರಮದ ವೇಳೆ ಯಾವುದೇ ಭದ್ರತಾ ಲೋಪವಾಗಿಲ್ಲ ಎಂದು ವೈಟ್‌ಫೀಲ್ಡ್ ಡಿಸಿಪಿ ಎಸ್.ಗಿರೀಶ್ ತಿಳಿಸಿದ್ದಾರೆ.
ಎಚ್‌ಎಎಲ್ ಸಮೀಪದ ಯಮಲೂರಿನಲ್ಲಿ ಬಿಪುಲ್ ದೌಲಿ ಹಾಗೂ ಪೂರ್ವಿ ದೌಲಿ ದಂಪತಿ ವಾಸವಾಗಿದ್ದರು. ಆರೋಪಿಯು ಪ್ರಿಯತಮೆ ಪೂರ್ವಿ ಭೇಟಿಗೆ ನ.9ರಂದು ಅಸ್ಸಾಂ ನಿಂದ ಆಗಮಿಸಿ ಆಕೆಯ ಮನೆಯಲ್ಲಿದ್ದ. ಆ ಸಮಯದಲ್ಲೇ ಆಕೆಯ ಪತಿ ಮನೆಗೆ ಬಂದಿದ್ದಾನೆ. ಭಯಗೊಂಡ ಪ್ರಿಯಕರ ತಪ್ಪಿಸಿಕೊಳ್ಳಲು ಯತ್ನಿಸಿದ್ದಾನೆ. ಕುಡಿದ ಮತ್ತಿನಲ್ಲಿದ್ದ ಇಬ್ಬರ ಮಧ್ಯೆ ಜಗಳವಾಗಿದೆ. ಕೊನೆಗೆ ಆರೋಪಿ ಅಲ್ಲಿಂದ ತಪ್ಪಿಸಿಕೊಂಡು ಯಮಲೂರಿನ ಹತ್ತಿರದ ಎಚ್‌ಎಎಲ್ ವಿಮಾನ ನಿಲ್ದಾಣದ ಆವರಣದ ಗೋಡೆ ಜಿಗಿದು ನುಗ್ಗಿದ್ದಾನೆ.
ಎಚ್‌ಎಎಲ್ ವಿಮಾನ ನಿಲ್ದಾಣದ ಸೇವಾ ಕೇಂದ್ರದೊಳಗೆ ರಾತ್ರಿ ಅತಿಕ್ರಮ ಪ್ರವೇಶಿಸಿ ಟ್ರಾಲಿಗೇಟ್ ಬಳಿ ಅಳವಡಿಸಲಾಗಿರುವ ಸೌರ ಫಲಕಗಳ ಅಡಿಯಲ್ಲಿ ಅಡಗಿಕೊಳ್ಳಲು ಯತ್ನಿಸುತ್ತಿದ್ದ. ನಿಲ್ದಾಣದ ಭದ್ರತಾ ಸಿಬ್ಬಂದಿ ವಶಕ್ಕೆ ಪಡೆದಿದ್ದಾರೆ. ಸಿಸಿಟಿವಿ ಕ್ಯಾಮೆರಾಗಳನ್ನು ಪರಿಶೀಲಿಸಿದಾಗ ಕೆಂಪಾಪುರ ರಸ್ತೆಯ ಶಿವ ದೇವಸ್ಥಾನದ ಎದುರಿನ ವಾಚ್ ಟವರ್ ಸಂಖ್ಯೆ 3ರ ಬಳಿ ವಿಮಾನ ನಿಲ್ದಾಣದ ಕಾಂಪೌಂಡ್ ಜಿಗಿಯಲು ಯತ್ನಿಸಿ ವಿಫಲನಾಗಿದ್ದ. ಬಳಿಕ ಟ್ರಾಲಿ ಗೇಟ್ ಬಳಿ ಸುತ್ತುವರೆದ ಗೋಡೆಯನ್ನೇರಿ ಎಎಚ್‌ಎಎಲ್ ಆವರಣ ಪ್ರವೇಶಿಸಿದ್ದ. ಪೊಲೀಸ್ ವಿಚಾರಣೆ ವೇಳೆ ನಡೆದ ವಿಚಾರ ಬಾಯ್ಬಿಟ್ಟಿದ್ದಾನೆ.
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy