ಇಂದು ಜಗತ್ತಿನಾದ್ಯಂತ ಕ್ರೈಸ್ತರು ಕ್ರಿಸ್ತನ ಸಂಕಟದ ನೆನಪಿಗಾಗಿ ಶುಭ ಶುಕ್ರವಾರವನ್ನು ಆಚರಿಸುತ್ತಾರೆ. ದೇವಾಲಯಗಳಲ್ಲಿ ಬೆಳಗಿನ ಪ್ರಾರ್ಥನೆ ಮತ್ತು ವಿಶೇಷ ಸೇವೆಗಳು ನಡೆಯಲಿವೆ. ಇಡೀ ಪ್ರಪಂಚದ ಪಾಪಗಳನ್ನು ಕಳೆದುಕೊಳ್ಳಲು ಶಿಲುಬೆಗೇರಿಸಿದ ದೇವರ ಮಗನಾದ ಕ್ರಿಸ್ತನ ಸ್ಮರಣೆಯೊಂದಿಗೆ ವಿವಿಧ ಚರ್ಚ್‌ಗಳಲ್ಲಿ ವೇ ಆಫ್ ದಿ ಕ್ರಾಸ್ ಇರುತ್ತದೆ.
ಯೊವಾನ್ನನು ಬರೆದ ಯೇಸು ಕ್ರಿಸ್ತರ ಪೂಜ್ಯ ಯಾತನೆಗಳ ವೃತ್ತಾಂತ 18:1–19:42
ನಿರೂಪಕ ಯೇಸು ತಮ್ಮ ಶಿಷ್ಯರೊಡನೆ ಹೊರಟು, ಕೆದ್ರೋನ್ ಹಳ್ಳವನ್ನು ದಾಟಿ, ಅಲ್ಲೇ ಇದ್ದ ತೋಟವನ್ನು ಹೊಕ್ಕರು. ಅವರು ತಮ್ಮ ಶಿಷ್ಯರೊಡನೆ ಆಗಾಗ ಬರುವುದು ವಾಡಿಕೆ. ಅವರನ್ನು ಹಿಡಿದುಕೊಡಲಿದ್ದ ಯೂದನಿಗೆ ಆ ಸ್ಥಳ ಚೆನ್ನಾಗಿ ಗೊತ್ತಿತ್ತು. ಆದುದರಿಂದ ಯೂದನು ಸೈನಿಕರ ಒಂದು ತಂಡವನ್ನೂ ಮುಖ್ಯ ಯಾಜಕರು ಮತ್ತು ಫರಿಸಾಯರು ಕಳುಹಿಸಿದ ಕಾವಲಾಳುಗಳನ್ನು ಕರೆದುಕೊಂಡು ದೀವಟಿಗೆ, ಪಂಜು ಮತ್ತು ಆಯುಧಗಳ ಸಮೇತ ಅಲ್ಲಿಗೆ ಬಂದನು. ಯೇಸುವಿಗೆ ತಮಗೆ ಸಂಭವಿಸಲಿರುವುದೆಲ್ಲವೂ ತಿಳಿದಿತ್ತು. ಎಂದೇ ಮುಂದೆ ಬಂದು,
ಯೇಸು: ನೀವು ಯಾರನ್ನು ಹುಡುಕುತ್ತಿದ್ದೀರಿ ?
ನಿರೂಪಕ: ಎಂದು ಕೇಳಿದರು, ಅವರು,
ಜನರು: ನಜರೇತಿನ ಯೇಸುವನ್ನು
ನಿರೂಪಕ: ಎಂದರು. ಯೇಸು,
ಯೇಸು: ನಾನೇ ಆತನು
ನಿರೂಪಕ: ಎಂದು ಉತ್ತರ ಕೊಟ್ಟರು. ಅವರನ್ನು ಹಿಡಿದುಕೊಡಲಿದ್ದ ಗುರುದ್ರೋಹಿ ಯೂದನು ಅವರ ಸಂಗಡವೇ ನಿಂತುಕೊಂಡಿದ್ದನು. ” ನಾನೇ ಆತನು” ಎಂದು ಯೇಸು ನುಡಿಯುತ್ತಲೇ ಅವರೆಲ್ಲರೂ ಹಿಂದೆ ಸರಿದು ನೆಲದ ಮೇಲೆ ಬಿದ್ದರು. ಯೇಸು ಮತ್ತೊಮ್ಮೆ
ಯೇಸು: ನೀವು ಯಾರನ್ನು ಹುಡುಕುತ್ತಿದ್ದೀರಿ ?
ನಿರೂಪಕ: ಎಂದು ಕೇಳಲು
ಜನರು: ನಜರೇತಿನ ಯೇಸುವನ್ನು
ನಿರೂಪಕ: ಎಂದು ಉತ್ತರ ಬಂದಿತು. ಅದಕ್ಕೆ ಯೇಸು,
ಯೇಸು: ನಾನೇ ಆತನೆಂದು ನಿಮಗೆ ಆಗಲೇ ಹೇಳಿದೆ. ನೀವು ಹುಡುಕುತ್ತಾ ಇರುವುದು ನನ್ನನ್ನಾದರೆ ಮಿಕ್ಕ ಇವರನ್ನು ಹೋಗಬಿಡಿ.
ನಿರೂಪಕ: ಎಂದು ನುಡಿದರು. ( “ನೀವು ನನಗೆ ಕೊಟ್ಟವರಲ್ಲಿ ಒಬ್ಬನನ್ನಾದರೂ ಕಳೆದುಕೊಳ್ಳಲಿಲ್ಲ” ಎಂದು ತಾವೇ ನುಡಿದ ಮಾತು ನೆರವೇರುವಂತೆ ಯೇಸು ಹೀಗೆಂದರು.) ಅಷ್ಟರೊಳಗೆ ಸಿಮೋನ್ ಪೇತ್ರನು ತನ್ನಲ್ಲಿದ್ದ ಖಡ್ಗವನ್ನು ಹಿಡಿದು ಪ್ರಧಾನ ಯಾಜಕರ ಸೇವಕನಾದ ಮಾಲ್ಕನ ಬಲಕಿವಿಯನ್ನು ಕತ್ತರಿಸಿಬಿಟ್ಟನು. ಆಗ, ಯೇಸು ಪೇತ್ರನಿಗೆ,
ಯೇಸು: ನಿನ್ನ ಖಡ್ಗವನ್ನು ಒರೆಯಲ್ಲಿ ಹಾಕು. ನನ್ನ ಪಿತನೇ ಕೊಟ್ಟಿರುವ ಕಷ್ಟದ ಕೊಡವಿದು. ಇದರಲ್ಲಿರುವುದನ್ನು ನಾನು ಕುಡಿಯದೆ ಹೋದರೆ ಹೇಗೆ ?
ನಿರೂಪಕ: ಎಂದು ನುಡಿದರು. ಅನಂತರ ಸೈನಿಕರೂ ಸಹಸ್ರಾಧಿಪತಿಯೂ ಯೆಹೂದ್ಯರು ಕಳುಹಿಸಿದ್ದ ಕಾವಾಲಾಳುಗಳೂ ಯೇಸುವನ್ನು ಹಿಡಿದು ಕಟ್ಟಿ ಮೊದಲು ಅನ್ನನ ಬಳಿಗೆ ಕೊಂಡೊಯ್ದರು. ಅನ್ನನು ಆ ವರ್ಷ ಪ್ರಧಾನ ಯಾಜಕನಾಗಿದ್ದ ಕಾಯಫನ ಮಾವ. ಸಮಸ್ತ ಜನತೆಗಾಗಿ ಒಬ್ಬನು ಸತ್ತರೆ ವಿಹಿತವೆಂದು ಸಲಹೆ ಕೊಟವನು ಈ ಕಾಯಫನೇ.
ಸಿಮೋನ್ ಪೇತ್ರನು ಹಾಗೂ ಪ್ರಧಾನ ಯಾಜಕನಿಗೆ ಪರಿಚಿತನಾಗಿದ್ದ ಇನ್ನೊಬ್ಬ ಶಿಷ್ಯನು ಯೇಸುವನ್ನು ಹಿಂಬಾಲಿಸುತ್ತಾ ಹೋದರು. ಪರಿಚಿತನಾಗಿದ್ದ ಶಿಷ್ಯನು ಯೇಸುವಿನೊಡನೆ ಪ್ರಧಾನ ಯಾಜಕನ ಮನೆಯ ಅಂಗಳವನ್ನು ಹೊಕ್ಕನು. ಪೇತ್ರನು ಹೊರಗಡೆ ಬಾಗಿಲ ಬಲಿಯಲ್ಲೇ ನಿಂತನು. ಪರಿಚಿತನಾಗಿದ್ದವನು ಅನಂತರ ಹೊರಗೆ ಬಂದು ದ್ವಾರಪಾಲಕಿಗೆ ಹೇಳಿ ಪೇತ್ರನನ್ನು ಒಳಗೆ ಕರೆದುಕೊಂಡು ಹೋದನು. ಆ ದ್ವಾರಪಾಲಕಿಯು ಪೇತ್ರನನ್ನು ನೋಡಿ,
ದ್ವಾರಪಾಲಕಿ: ನೀನು ಯೇಸುವಿನ ಶಿಷ್ಯರಲ್ಲಿ ಒಬ್ಬನಲ್ಲವೇ ?
ನಿರೂಪಕ: ಎಂದು ಕೇಳಿದಳು. ಅದಕ್ಕೆ ಪೇತ್ರನು,
ಪೇತ್ರ: ಇಲ್ಲ, ನಾನಲ್ಲ
ನಿರೂಪಕ: ಎಂದುಬಿಟ್ಟನು. ಆಗ ಚಳಿಯಿದ್ದುದ್ದರಿಂದ ಸೇವಕರೂ ಕಾವಲಾಳುಗಳು ಇದ್ದಲಿನ ಬೆಂಕಿ ಮಾಡಿ, ಸುತ್ತಲೂ ನಿಂತು ಚಳಿಕಾಯಿಸಿಕೊಳ್ಳುತ್ತಿದ್ದರು. ಪೇತ್ರನು ಅವರ ಸಂಗಡ ನಿಂತುಕೊಂಡು ಚಳಿಕಾಯಿಸಿಕೊಳ್ಳತೊಡಗಿದನು. ಅಷ್ಟರಲ್ಲಿ ಪ್ರಧಾನಯಾಜಕನು ಯೇಸುವನ್ನು ಅವರ ಶಿಷ್ಯರ ವಿಷಯವಾಗಿ ಹಾಗೂ ಬೋಧನೆಯ ವಿಷಯವಾಗಿ ವಿಚಾರಿಸಿದನು. ಆಗ ಯೇಸು,
ಯೇಸು: ನಾನು ಬಹಿರಂಗವಾಗಿಯೇ ಜನರೆಲ್ಲರೂ ಕೇಳುವಂತೆ ಮಾತಾಡಿದ್ದೇನೆ,. ಯೆಹೂದ್ಯರೆಲ್ಲರೂ ಸಭೆ ಸೇರುವ ಪ್ರಾರ್ಥನಾ ಮಂದಿರಗಳಲ್ಲಿಯೂ ಮಹಾದೇವಾಲಯದಲ್ಲಿಯೂ ನಾನು ಯಾವಾಗಲೂ ಬೋಧನೆ ಮಾಡಿಕೊಂಡು ಬಂದಿದ್ದೇನೆ. ಮುಚ್ಚುಮರೆಯಾಗಿ ಏನನ್ನೂ ಹೇಳಿಲ್ಲ. ನನ್ನನ್ನು ವಿಚಾರಿಸುವುದೇಕೆ ? ನಾನು ಹೇಳಿದ್ದನ್ನು ಯಾರು ಕೇಳಿದ್ದಾರೋ ಅವರನ್ನೇ ವಿಚಾರಿಸಿರಿ. ನಾನು ಬೋಧನೆ ಮಾಡಿದ್ದು ಏನೆಂದು ಅವರು ಬಲ್ಲರು.
ನಿರೂಪಕ: ಎಂದು ಉತ್ತರ ಕೊಟ್ಟರು. ಯೇಸು ಹೀಗೆ ಹೇಳಲು ಬಳಿಯಲ್ಲಿ ನಿಂತಿದ್ದ ಕಾವಾಲಾಳೊಬ್ಬನು,
ಕಾವಲಾಳು: ಪ್ರಧಾನ ಯಾಜಕರಿಗೆ ಉತ್ತರ ಕೊಡುವುದು ಹೀಗೆಯೇ?
ನಿರೂಪಕ: ಎಂದು ಕೆನ್ನೆಗೆ. ಹೊಡೆದನು. ಆಗ ಯೇಸು,
ಯೇಸು: ನಾನು ಆಡಿದ್ದು ತಪ್ಪಾಗಿದ್ದರೆ, ತಪ್ಪನ್ನು ತೋರಿಸಿಕೊಡು, ಸತ್ಯವಾಗಿದ್ದರೆ ಏಕೆ. ಹೊಡೆಯುತ್ತಿ ?
ನಿರೂಪಕ: ಎಂದರು. ಆಗ ಅನ್ನನು ಯೇಸುವನ್ನು ಬಂಧಿಸಿ ಕಾಯಿಫನ ಬಳಿಗೆ ಕಳುಹಿಸಿದನು. ಇತ್ತ ಪೇತ್ರನು ನಿಂತು. ಚಳಿಕಾಯಿಸಿಕೊಳ್ಳುತ್ತಾ ಇದ್ದನು. ಅಲ್ಲಿದ್ದವರು,
ಜನರು: ನೀನು ಯೇಸುವಿನ ಶಿಷ್ಯರಲ್ಲಿ ಒಬ್ಬನಲ್ಲವೇ ?
ನಿರೂಪಕ: ಎಂದು ಕೇಳಿದರು. ಪೇತ್ರನು
ಪೇತ್ರ: ಇಲ್ಲ, ನಾನು ಶಿಷ್ಯನಲ್ಲ.
ನಿರೂಪಕ: ಎಂದು ನಿರಾಕರಿಸಿದನು. ಪ್ರಧಾನ ಯಾಜಕನ. ಸೇವಕರಲ್ಲಿ ಒಬ್ಬನು, (ಇವನು ಪೇತ್ರನು ಕಿವಿ ಕತ್ತರಿಸಿದವನ ನೆಂಟ)
ಸೇವಕ : ನಿನ್ನನ್ನು ಆತನೊಡನೆ ತೋಟದಲ್ಲಿ ನಾನು ನೋಡಲಿಲ್ಲವೇ ?
ನಿರೂಪಕ: ಎಂದು ಕೇಳಿದನು. ಪೇತ್ರನು ಪುನಃ ಅಲ್ಲಗಳೆದನು. ಕೂಡಲೆ ಕೋಳಿ ಕೂಗಿತು. ಆಮೇಲೆ ಅವರು ಯೇಸುವನ್ನು ಕಾಯಿಫನ ಮನೆಯಿಂದ ರಾಜ್ಯಪಾಲನ ನಿವಾಸಕ್ಕೆ ಕೊಂಡೊಯ್ದರು. ಆಗ ಮುಂಜಾನೆ, ಅರಮನೆಯೊಳಗೆ ಹೋದರೆ ಮಡಿಗೆಟ್ಟು ಹಬ್ಬದೂಟಕ್ಕೆ ಅಡ್ಡಿಯಾದೀತೆಂದು ಅವರೆಲ್ಲರು ಹೊರಗೇ ನಿಂತರು. ಆದುದರಿಂದ ಪಿಲಾತನೇ ಅವರ ಬಳಿಗೆ ಬಂದು,
ಪಿಲಾತ : ಈತನ ಮೇಲೆ ನಿಮ್ಮ ದೂರು ಏನು ?
ನಿರೂಪಕ: ಎಂದು ಕೇಳಿದನು. ಅವರು,
ಜನರು: ಇವನು ಅಪರಾಧಿಯಲ್ಲದಿದ್ದರೆ,. ಇವನನ್ನು ನಿಮಗೆ ತಂದೊಪ್ಪಿಸುತ್ತಿರಲಿಲ್ಲ
ನಿರೂಪಕ: ಎಂದರು. ಪಿಲಾತನು,
ಪಿಲಾತ: ಹಾಗಾದರೆ ನೀವೇ ಕರೆದುಕೊಂಡು ಹೋಗಿ ನಿಮ್ಮ ಧರ್ಮಶಾಸ್ತ್ರದ ಪ್ರಕಾರ ಈತನಿಗೆ ತೀರ್ಪು ಕೊಡಿ
ನಿರೂಪಕ: ಎಂದನು. ಯೆಹೂದ್ಯರು
ಜನರು: ಮರಣದಂಡನೆ ವಿಧಿಸುವ ಅಧಿಕಾರ ನಮಗಿಲ್ಲವಲ್ಲಾ
ನಿರೂಪಕ: ಎಂದು ಉತ್ತರಿಸಿದರು. ಯೇಸು ತಮಗೆ ಯಾವ ಬಗೆಯ ಮರಣ ಕಾದಿರುವುದೆಂದು ಸೂಚಿಸಿ ಹೇಳಿದ ಮಾತು ಹೀಗೆ ನೆರವೇರುವಂತಾಯಿತು. ಆಗ ಪಿಲಾತನು ಅರಮನೆಯೊಳಗೆ ಹೋಗಿ ಯೇಸುವನ್ನು ಕರೆಯಿಸಿ,
ಪಿಲಾತ: ನೀನು ಯೆಹೂದ್ಯರ ಅರಸನೋ ?
ನಿರೂಪಕ: ಎಂದು ಕೇಳಿದನು. ಅದಕ್ಕೆ ಯೇಸು,
ಯೇಸು: ನೀವಾಗಿಯೇ ಇದನ್ನು ಹೇಳುತ್ತಿರುವಿರೋ ಅಥವಾ ಬೇರೆ ಯಾರಾದರೂ ನನ್ನನ್ನು ಕುರಿತು ಹೀಗೆ ಹೇಳಿದರೋ ?
ನಿರೂಪಕ: ಎನ್ನಲು ಪಿಲಾತನು,
ಪಿಲಾತ: ನಾನೇನು ಯೆಹೂದ್ಯನೇ ? ನಿನ್ನ ಸ್ವಂತ ಜನರು ಮತ್ತು ಮುಖ್ಯ ಯಾಜಕರು ನಿನ್ನನ್ನು ನನ್ನ ಕೈಗೆ ಒಪ್ಪಿಸಿದ್ದಾರೆ. ನೀನು ಏನು ಮಾಡಿದ್ದೀಯಾ ?
ನಿರೂಪಕ: ಎಂದು ಕೇಳಿದನು. ಅದಕ್ಕೆ ಯೇಸು,
ಯೇಸು: ನನ್ನ ಸಾಮ್ರಾಜ್ಯ ಈ ಲೋಕದಲ್ಲ, ನನ್ನ ಸಾಮ್ರಾಜ್ಯ ಈ ಲೋಕದ್ದಾಗಿದ್ದರೆ ಯೆಹೂದ್ಯರ ಕೈಗೆ ನಾನು ಬೀಳದಂತೆ ನನ್ನ ಅನುಯಾಯಿಗಳು ಕಾದಾಡುತ್ತಿದ್ದರು. ನಿಜವಾಗಿಯೂ ನನ್ನ ಸಾಮ್ರಾಜ್ಯ ಇಹಲೋಕದ್ದಲ್ಲ,
ನಿರೂಪಕ: ಎಂದರು. ಪಿಲಾತನು,
ಪಿಲಾತ: ಹಾಗಾದರೆ ನೀನೊಬ್ಬ ಅರಸನೋ ?
ನಿರೂಪಕ: ಎಂದು ಕೇಳಲು, ಯೇಸು,
*ಯೇಸು: ‘ಅರಸ’ ಎನ್ನುವುದು ನೀವು ಹೇಳುವ ಮಾತು. ಸತ್ಯವನ್ನು ಕುರಿತು ಸಾಕ್ಷಿ ಹೇಳುವುದು ನನ್ನ ಕೆಲಸ. ಅದಕ್ಕಾಗಿಯೇ ನಾನು ಹುಟ್ಟಿದುದು. ಸತ್ಯಪರರೆಲ್ಲರೂ ನನ್ನ ಮಾತಿಗೆ ಕಿವಿಗೊಡುತ್ತಾರೆ.
ನಿರೂಪಕ: ಎಂದು ಹೇಳಿದರು. ಆಗ ಪಿಲಾತನು,
ಪಿಲಾತ: ಸತ್ಯ, ಸತ್ಯ ಎಂದರೆ ಏನು ?
ನಿರೂಪಕ: ಎಂದು ಪ್ರಶ್ನಿಸಿ ಅಲ್ಲಿ ಹೊರಗೆ ಬಂದನು. ಹೀಗೆ ಪಿಲಾತನು ಯೆಹೂದ್ಯರ ಬಳಿಗೆ ಬಂದು,
ಪಿಲಾತ: ನನಗೆ ಈತನಲ್ಲಿ ಯಾವ ಅಪರಾಧವೂ ಕಾಣುವುದಿಲ್ಲ. ಪಾಸ್ಖ ಹಬ್ಬದ ಸಂದರ್ಭದಲ್ಲಿ ಒಬ್ಬ ಸೆರೆಯಾಳನ್ನು ಬಿಡುಗಡೆಮಾಡುವ ಪದ್ದತಿಯಿದೆಯಷ್ಟೇ ? ಆದ್ದರಿಂದ ನೀವು ಬಯಸಿದರೆ ಯೆಹೂದ್ಯರ ಅರಸನನ್ನು ನಾನು ಬಿಡುಗಡೆ ಮಾಡುತ್ತೇನೆ.
ನಿರೂಪಕ: ಎಂದು ಹೇಳಿದನು. ಅದಕ್ಕೆ ಅವರು,
ಜನರು: ಬೇಡ, ಇವನು ಬೇಡ. ನಮಗೆ ಬರಬ್ಬನನ್ನು ಬಿಟ್ಟುಕೊಡಿ
ನಿರೂಪಕ: ಎಂದು ಬೊಬ್ಬೆ ಹಾಕಿದರು. ಬರಬ್ಬನೋ ಒಬ್ಬ ದರೋಡೆಕೋರನಾಗಿದ್ದನು. ಆಮೇಲೆ ಪಿಲಾತನು ಯೇಸುವನ್ನು ಅಲ್ಲಿಂದ ಕರೆದೊಯ್ದು ಕೊರಡೆಗಳಿಂದ ಹೊಡೆಸಿದನು. ಸೈನಿಕರೋ ಮುಳ್ಳಿನ ಕಿರೀಟವನ್ನು ಹೆಣೆದು ಅವರ ತಲೆಗೆ ಮುಡಿಸಿ, ಕೆನ್ನೇರಳೆ ಬಣ್ಣದ ಅಂಗಿಯನ್ನು ಅವರಿಗೆ ಉಡಿಸಿ, ಹತ್ತಿರ ಬಂದು.
ಜನರು: ಯೆಹೂದ್ಯರ ಅರಸನೇ, ನಿನಗೆ ಶುಭವಾಗಲಿ
ನಿರೂಪಕ: ಎಂದು ಜರೆಯುತ್ತಾ ಅವರ ಕೆನ್ನೆಗೆ ಹೊಡೆಯತೊಡಗಿದರು. ಪಿಲಾತನು ಮತ್ತೆ ಹೊರಗೆ ಬಂದು ಯೆಹೂದ್ಯರಿಗೆ,
ಪಿಲಾತ: ನೋಡಿ, ನಾನು ಇವನನ್ನು ನಿಮ್ಮ ಮುಂದೆ ತರುತ್ತಿದ್ದೇನೆ. ನನಗೆ ಇವನಲ್ಲಿ ಯಾವ ಅಪರಾಧವೂ ಕಾಣಿಸುತ್ತಿಲ್ಲ ಎಂಬುದು ನಿಮಗೆ ತಿಳಿದಿರಲಿ.
ನಿರೂಪಕ: ಎಂದು ಹೇಳಿದನು. ಆಗ ಯೇಸು ಮುಳ್ಳಿನ ಕಿರೀಟವನ್ನೂ ಕೆನ್ನೇರೆಳೆ ಬಣ್ಣದ ಅಂಗಿಯನ್ನೂ ಧರಿಸಿದವರಾಗಿ ಹೊರಕ್ಕೆ ಬಂದರು. ಪಿಲಾತನು,
ಪಿಲಾತ: ಇಗೋ, ಈ ಮನುಷ್ಯ !
ನಿರೂಪಕ: ಎಂದನು. ಮುಖ್ಯ ಯಾಜಕರೂ ಕಾವಲಾಳುಗಳು ಯೇಸುವನ್ನು ಕಂಡೊಡನೆ,
ಜನರು: ಇವನನ್ನು ಶಿಲುಬೆಗೇರಿಸಿ, ಶಿಲುಬೆಗೇರಿಸಿ
ನಿರೂಪಕ: ಎಂದು ಬೊಬ್ಬೆ ಹಾಕಿದರು. ಆಗ ಪಿಲಾತನು,
ಪಿಲಾತ: ಬೇಕಾದರೆ ನೀವೇ ಇವನನ್ನು ಕರೆದುಕೊಂಡು ಹೋಗಿ ಶಿಲುಬೆಗೇರಿಸಿ. ನನಗಾದರೋ ಇವನಲ್ಲಿ ಯಾವ ಅಪರಾಧವೂ ಕಾಣಿಸಲಿಲ್ಲ.
ನಿರೂಪಕ:. ಎಂದನು. ಅದಕ್ಕೆ ಯೆಹೂದ್ಯರು,
ಜನರು: ನಿಮಗೊಂದು ಕಾನೂನು ಉಂಟು. ಅದರ ಮೇರೆಗೆ ಇವನು ಸಾಯಲೇಬೇಕು. ಏಕೆಂದರೆ, ತಾನು ದೇವರ ಪುತ್ರನೆಂದು ಹೇಳಿಕೊಂಡಿದ್ದಾನೆ.
ನಿರೂಪಕ: ಎಂದು ಉತ್ತರಕೊಟ್ಟರು. ಇದನ್ನು ಕೇಳಿದ್ದೇ ಪಿಲಾತನಿಗೆ ಮತ್ತಷ್ಟು ಭಯವಾಯಿತು. ಅವನು ಮತ್ತೆ ಅರಮನೆಯೊಳಕ್ಕೆ ಬಂದು,
ಪಿಲಾತ: ನೀನು ಎಲ್ಲಿಂದ ಬಂದವನು ?
ನಿರೂಪಕ: ಎಂದು ಯೇಸುವನ್ನು ಕೇಳಿದನು. ಆದರೆ ಯೇಸು. ಉತ್ತರ ಕೊಡಲಿಲ್ಲ. ಆಗ ಪಿಲಾತನು,
ಪಿಲಾತ: ನನ್ನೊಡನೆ ನೀನು ಮಾತನಾಡುವುದಿಲ್ಲವೆ? ನಿನ್ನನ್ನು ಬಿಡುಗಡೆ ಮಾಡುವುದಕ್ಕೂ ನಿನ್ನನ್ನು ಶಿಲುಬೆಗೇರಿಸುವುದಕ್ಕೂ ನನಗೆ ಅಧಿಕಾರವಿದೆಯೆಂಬುದು ನಿನಗೆ ತಿಳಿಯದೋ ?
ನಿರೂಪಕ: ಎಂದನು. ಅದಕ್ಕೆ ಯೇಸು,
ಯೇಸು: ನಿಮಗೆ ಮೇಲಿಂದ ಕೊಟ್ಟ ಹೊರತು ನನ್ನ ಮೇಲೆ ನಿಮಗೆ ಯಾವ ಅಧಿಕಾರವೂ ಇರುತ್ತಿರಲಿಲ್ಲ. ಆದ್ದರಿಂದ ನನ್ನನ್ನು ನಿಮ್ಮ ಕೈಗೆ ಒಪ್ಪಿಸಿದವನಿಗೇ ಪಾಪ ಹೆಚ್ಚು.
ನಿರೂಪಕ: ಎಂದು ನುಡಿದರು. ಇದನ್ನು ಕೇಳಿದ ಮೇಲೆ ಪಿಲಾತನು ಯೇಸುವನ್ನು ಬಿಡುಗಡೆ ಮಾಡಲು ಪ್ರಯತ್ನಿಸಿದನು. ಯೆಹೂದ್ಯರಾದರೋ,
ಜನರು: ಇವನನ್ನು ಬಿಡುಗಡೆ ಮಾಡಿದರೆ, ನೀವು ರೋಮ್ ಚಕ್ರವರ್ತಿಯ ಮಿತ್ರರಲ್ಲ, ತಾನೇ ಅರಸನೆಂದು ಹೇಳಿಕೊಳ್ಳುವ ಇವನು ರೋಮ್ ಚಕ್ರವರ್ತಿಗೆ ಶತ್ರು
ನಿರೂಪಕ: ಎಂದು ಕೂಗಿಕೊಂಡರು. ಅವರ ಈ ಕೂಗನ್ನು ಕೇಳಿ ಪಿಲಾತನು ಯೇಸುವನ್ನು ಹೊರಗೆ ಕರೆಯಿಸಿದನು. ‘ಹಾಸುಗಲ್ಲು’ ಎಂಬ ಕಟ್ಟೆಯ ಮೇಲಿದ್ದ ನ್ಯಾಯಪೀಠದ ಮೇಲೆ ಕುಳಿತುಕೊಂಡನು. ಯೆಹೂದ್ಯರ ಭಾಷೆಯಲ್ಲಿ ಆ ಸ್ಥಳಕ್ಕೆ ‘ಗಬ್ಬಥ’ ಎಂದು ಹೆಸರು. ಅಂದು ಹಬ್ಬದ ಹಿಂದಿನ ದಿನ, ಮಧ್ಯಾಹ್ನ ಹನ್ನೆರಡು ಘಂಟೆ ಇರಬಹುದು. ಪಿಲಾತನು ಯೆಹೂದ್ಯರನ್ನು ನೋಡಿ,
ಪಿಲಾತ: ಇಗೋ ನಿಮ್ಮ ಅರಸನು.
ನಿರೂಪಕ: ಎಂದು ಹೇಳಿದನು. ಅವರಾದರೋ,
ಜನರು: ಕೊಲ್ಲಿರಿ, ಕೊಲ್ಲಿರಿ, ಶಿಲುಬೆಗೇರಿಸಿರಿ!
ನಿರೂಪಕ: ಎಂದು ಕಿರುಚಿದರು. ಪಿಲಾತನು,
ಪಿಲಾತ: ನಿಮ್ಮ ಅರಸನನ್ನು ಶಿಲುಬೆಗೇರಿಸಲೇ?
ನಿರೂಪಕ: ಎಂದನು. ಅದಕ್ಕೆ ಮುಖ್ಯ ಯಾಜಕರು
ಜನರು: ರೋಮ್ ಚಕ್ರವರ್ತಿಯ ಹೊರತು ನಮಗೆ ಬೇರೆ ಅರಸನಿಲ್ಲ
ನಿರೂಪಕ: ಎಂದು ಉತ್ತರಕೊಟ್ಟರು. ಕಡೆಗೆ ಪಿಲಾತನು ಯೇಸುವನ್ನು ಶಿಲುಬೆಗೇರಿಸುವುದಕ್ಕಾಗಿ ಅವರಿಗೆ ಒಪ್ಪಿಸಿಬಿಟ್ಟರು. ಅವರು ಯೇಸುವನ್ನು ತಮ್ಮ ವಶಕ್ಕೆ ತೆಗೆದುಕೊಂಡರು.
ಯೇಸುಸ್ವಾಮಿ ತಮ್ಮ ಶಿಲುಬೆಯನ್ನು ತಾವೇ ಹೊತ್ತುಕೊಂಡು, ‘ಕಪಾಲ’ ಎಂಬ ಸ್ಥಳಕ್ಕೆ ಹೋದರು. ಇದಕ್ಕೆ ಯೆಹೂದ್ಯರ ಭಾಷೆಯಲ್ಲಿ ‘ಗೊಲ್ಗೊಥಾ’ ಎಂದು ಹೆಸರು. ಅಲ್ಲಿ ಯೇಸುವನ್ನು ಶಿಲುಬೆಗೇರಿಸಿದರು. ಅವರ ಅಕ್ಕಪಕ್ಕದಲ್ಲಿ ಇನ್ನಿಬ್ಬರನ್ನೂ ಶಿಲೂಬೆಗೆ ಹಾಕಿದರು. ಪಿಲಾತನು ಒಂದು ಫಲಕದ ಮೇಲೆ ‘ನಜರೇತಿನ ಯೇಸು, ಯೆಹೂದ್ಯರ ಅರಸ’ ಎಂದು ಬರೆಸಿ ಶಿಲುಬೆಯ ಮೇಲ್ಗಡೆ ಇರಿಸಿದನು. ಯೇಸುವನ್ನು. ಶಿಲುಬೆಗೇರಿಸಿದ ಸ್ಥಳ ನಗರಕ್ಕೆ ಸಮೀಪದಲ್ಲೇ ಇದ್ದುದ್ದರಿಂದ ಹಲವು ಮಂದಿ ಯೆಹೂದ್ಯರು ಆ ಫಲಕವನ್ನು ಓದಿದರು. ಅದನ್ನು ಹಿಬ್ರಿಯ, ಲತೀನ್ ಮತ್ತು ಗ್ರೀಕ್ ಭಾಷೆಗಳಲ್ಲಿ ಬರೆಯಲಾಗಿತ್ತು. ಆದುದರಿಂದ ಯೆಹೂದ್ಯರ ಮುಖ್ಯ ಯಾಜಕರು ಪಿಲಾತನಿಗೆ:
ಜನರು: ಯೆಹೂದ್ಯರ ಅರಸ ಎಂದು ಬರೆಯುವುದು ಬೇಡ, ತಾನು ‘ಯೆಹೂದ್ಯರ ಅರಸನೆಂದು ಹೇಳಿಕೊಂಡವನು’ ಎಂದು ಬರೆಯಿರಿ.
ನಿರೂಪಕ: ಎಂದರು. ಅದಕ್ಕೆ ಪಿಲಾತನು,
ಪಿಲಾತ: ನಾನು ಬರೆದುದು ಬರೆದಾಯಿತು.
ನಿರೂಪಕ: ಎಂದನು. ಯೇಸುವನ್ನು ಶಿಲುಬೆಗೇರಿಸಿದ ಬಳಿಕ ಸೈನಿಕರು ಯೇಸುವಿನ ಬಟ್ಟೆಗಳನ್ನು ತೆಗೆದುಕೊಂಡು ಒಬ್ಬೊಬ್ಬರಿಗೆ ಒಂದೊಂದು ಪಾಲಿನಂತೆ ನಾಲ್ಕು ಪಾಲು ಮಾಡಿ ಹಂಚಿಕೊಂಡರು. ಅವರ ಒಳ ಅಂಗಿಯಾದರೋ ಹೊಲಿಗೆಯಿಲ್ಲದೆ ಮೇಲಿಂದ ಕೆಳಗಿನವರೆಗೂ. ಹೆಣೆದದ್ದಾಗಿತ್ತು. ಅದನ್ನು. ತೆಗೆದುಕೊಂಡು ಅವರು ತಮ್ಮ ತಮ್ಮೊಳಗೆ,
ಜನರು: ಇದನ್ನು ಹರಿಯುವುದು ಬೇಡ. ಚೀಟು ಹಾಕಿ ಯಾರ ಪಾಲಿಗೆ ಬರುವುದೋ ನೋಡೋಣ
ನಿರೂಪಕ: ಎಂದು ಮಾತನಾಡಿಕೊಂಡು ಹಾಗೆಯೇ ಮಾಡಿದರು. ನನ್ನ ಬಟ್ಟೆಗಳನ್ನು ತಮ್ಮಲ್ಲಿ ಹಂಚಿಕೊಂಡರು. ನನ್ನ ಅಂಗಿಗಾಗಿ ಚೀಟು ಹಾಕಿದರು, ಎಂಬ ಪವಿತ್ರ ಗ್ರಂಥದ ವಾಕ್ಯ ಹೀಗೆ ನೆರವೇರಿತು. ಯೇಸುವಿನ ತಾಯಿ ತಾಯಿಯ ಸಹೋದರಿ, ಕ್ಲೋಪನ ಹೆಂಡತಿ ಮರಿಯ ಮತ್ತು ಮಗ್ದಲದ ಮರಿಯ- ಇವರು ಶಿಲುಬೆಯ ಬಳಿಯಲ್ಲಿ ನಿಂತಿದ್ದರು. ಯೇಸು ತಮ್ಮ ತಾಯಿಯನ್ನೂ ಆಕೆಯ ಪಕ್ಕದಲ್ಲಿ ನಿಂತಿದ್ದ ತಮ್ಮ ಆಪ್ತ ಶಿಷ್ಯನನ್ನೂ ನೋಡಿ,
ಯೇಸು: ಅಮ್ಮಾ ಇಗೋ ನಿನ್ನ ಮಗ!
ನಿರೂಪಕ: ಎಂದರು. ಅನಂತರ ತಮ್ಮ. ಶಿಷ್ಯನನ್ನು ಕುರಿತು
ಯೇಸು: ಇಗೋ, ನಿನ್ನ ತಾಯಿ!
ನಿರೂಪಕ: ಎಂದರು. ಅಂದಿನಿಂದ ಆ ಶಿಷ್ಯನು ಆಕೆಯನ್ನು ತನ್ನ ಮನೆಯಲ್ಲೇ ಇರಿಸಿಕೊಂಡನು. ಇದಾದ ಮೇಲೆ ಯೇಸುಸ್ವಾಮಿ ನೆರವೇರಬೇಕಾದುದೆಲ್ಲವೂ ನೆರವೇರಿದೆ ಎಂದು ತಿಳಿದು ಪವಿತ್ರ ಗ್ರಂಥದಲ್ಲಿ ಬರೆದುದು ಈಡೇರುವಂತೆ,
ಯೇಸು: ನನಗೆ ದಾಹವಾಗಿದೆ
ನಿರೂಪಕ: ಎಂದು ನುಡಿದರು. ಬಳಿಯಲ್ಲೇ ಹುಳಿರಸ ತುಂಬಿದ ಪಾತ್ರೆಯೊಂದಿತ್ತು. ಅವರು ಸ್ಪಂಜನ್ನು ಆ ಹುಳಿರಸದಲ್ಲಿ ತೋಯಿಸಿ ಹಿಸ್ಸೋಪ ಗಿಡದ ಕೋಲಿಗೆ ಸಿಕ್ಕಿಸಿ, ಯೇಸುವಿನ ಬಾಯಿಗೆ ಮುಟ್ಟಿಸಿದರು. ಯೇಸು ಆ ಹುಳಿರಸವನ್ನು ಸೇವಿಸುತ್ತಲೇ,
ಯೇಸು: ಎಲ್ಲಾ ನೆರವೇರಿತು
ನಿರೂಪಕ: ಎಂದು ನುಡಿದು, ತಲೆಬಾಗಿ ತಮ್ಮ ಆತ್ಮವನ್ನು ಒಪ್ಪಿಸಿದರು.
ನಿರೂಪಕ: ಅಂದು ಪಾಸ್ಖ ಹಬ್ಬದ ಹಿಂದಿನ ದಿನ. ಮಾರನೆಯ ದಿನ ಸಬ್ಬತ್ ದಿನವೂ ಆಗಿತ್ತು. ಸಬ್ಬತ್ ದಿನದಂದು ಶವಗಳು ಶಿಲುಬೆಯ ಮೇಲೆ ತೂಗಾಡುವುದು ಸರಿಯಲ್ಲ ಎಂದುಕೊಂಡು ಶಿಲುಬೆಗೇರಿಸಲಾಗಿದ್ದವರ ಕಾಲುಗಳನ್ನು ಮುರಿದು ಅವರ ಶವವನ್ನು ಅಂದೇ ತೆಗೆಯಿಸಿಬಿಡಲು ಯೆಹೂದ್ಯರು ಪಿಲಾತನಿಂದ ಅಪ್ಪಣೆ ಕೇಳಿಕೊಂಡರು. ಅಂತೆಯೇ ಸೈನಿಕರು ಬಂದು ಯೇಸುವಿನೊಡನೆ ಶಿಲುಗೇರಿಸಿಲಾಗಿದ್ದ ಮೊದಲನೆಯವನ ಮತ್ತು ಎರಡೆನೆಯವನ ಕಾಲುಗಳನ್ನು ಮುರಿದರು. ತರುವಾಯ ಯೇಸುವಿನ ಬಳಿಗೆ ಬಂದರು. ಯೇಸು ಆಗಲೇ ಸತ್ತು ಹೋಗಿರುವುದನ್ನು ಕಂಡು, ಅವರ ಕಾಲುಗಳನ್ನು ಮುರಿಯಲಿಲ್ಲ. ಅದರೂ ಸೈನಿಕರಲ್ಲಿ ಒಬ್ಬನು ಈಟಿಯಿಂದ ಅವರ ಪಕ್ಕೆಯನ್ನು ತಿವಿದನು. ಕೂಡಲೇ ರಕ್ತವೂ ನೀರೂ ಅಲ್ಲಿಂದ ಹೊರಗೆ ಹರಿದು ಬಂದವು. ಇದು ಕಣ್ಣಾರೆ ಕಂಡವನ ಹೇಳಿಕೆ. ಈ ಹೇಳಿಕೆ ಸತ್ಯವಾದುದು; ತಾನು ಸತ್ಯವನ್ನು ನುಡಿಯುತ್ತಿದ್ದೇನೆಂಬ ಅರಿವು ಅವನಿಗೆ ಇದೆ. ನೀವು ವಿಶ್ವಾಸಿಸಬೇಕೆಂದೇ ಆತನು ಇದನ್ನು ಹೇಳಿದ್ದಾನೆ. ‘ ಆತನ ಎಲುಬೊಂದನ್ನೂ ಮುರಿಯಕೂಡದು ” ಎಂದು ಪವಿತ್ರ ಗ್ರಂಥದಲ್ಲಿ ಬರೆದಿದೆ. ಆ ವಾಕ್ಯ ನೆರವೇರುವಂತೆ ಹೀಗೆ ನಡೆಯಿತು. ‘ ತಾವು ಇರಿದವನನ್ನೇ ಅವರು ನಿರೀಕ್ಷಿಸುವರು ‘ ಎನ್ನುತ್ತದೆ ಇನ್ನೊಂದು ವಾಕ್ಯ.
ಅರಿಮತಾಯ ಊರಿನ ಜೋಸೆಫ್ ಎಂಬುವನೂ ಕೂಡ ಯೇಸುವಿನ ಶಿಷ್ಯರಲ್ಲಿ ಒಬ್ಬನು. ಈತನು ಯೆಹೂದ್ಯರಿಗೆ ಹೆದರಿ ತಾನು ಶಿಷ್ಯನೆಂದು ತೋರಿಸುಕೊಳ್ಳುತ್ತಿರಲಿಲ್ಲ. ಮೇಲೆ ಹೇಳಿದ್ದನ್ನೆಲ್ಲಾ ನಡೆದಾದ ಮೇಲೆ ಈತನು ಯೇಸುವಿನ ಪಾರ್ಥಿವ ಶರೀರವನ್ನು ಕೊಂಡೊಯ್ಯಲು ಪಿಲಾತನಿಂದ ಅಪ್ಪಣೆ ಕೇಳಿದನು. ಪಿಲಾತನು ಒಪ್ಪಿಗೆ ಕೊಡಲು ಈತನು ಬಂದು ಪಾರ್ಥಿವ ಶರೀರವನ್ನು ಕೊಂಡೊಯ್ದುನು. ಈತನು ಮಾತ್ರವಲ್ಲ ಹಿಂದೊಮ್ಮೆ ಯೇಸುವನ್ನು ರಾತ್ರಿಯಲ್ಲಿ ನೋಡಲು ಬಂದಿದ್ದ ನಿಕೊದೇಮನು ಕೂಡ ಅಲ್ಲಿಗೆ ಬಂದನು. ಇವನು ರಕ್ತಭೋಳ ಹಾಗೂ ಅಗರು ಕಲಸಿದ ಮೂವತ್ತು ಕಿಲೋಗ್ರಾಮಿನಷ್ಟು ಚೂರ್ಣವನ್ನು ತಂದಿದ್ದನು. ಇವರು ಯೇಸುವಿನ ಪಾರ್ಥಿವ ಶರೀರವನ್ನು ತೆಗೆದು ಯೆಹೂದ್ಯರ ಶವಸಂಸ್ಕಾರದ ಪದ್ಧತಿಯಂತೆ ಸುಗಂಧ ದ್ರುವಗಳನ್ನು ಹಾಕಿ ನಾರುಮಡಿಯಲ್ಲಿ ಸುತ್ತಿದರು. ಯೇಸುವನ್ನು ಶಿಲುಬೆಗೇರಿಸಿದ ಸ್ಥಳದಲ್ಲಿ ಒಂದು ತೋಟವಿತ್ತು. ಆ ತೋಟದಲ್ಲಿ ಅದುವರೆಗೆ ಯಾರ ಶವವನ್ನೂ ಇಡದ ಹೊಸ ಸಮಾಧಿಯಿತ್ತು. ಸಮಾಧಿಯು ಹತ್ತಿರದಲ್ಲೇ ಇದ್ದುದರಿಂದ ಹಾಗೂ ಮರುದಿನ ಪಾಸ್ಖ ಹಬ್ಬವಾದುದರಿಂದ ಯೇಸುವಿನ ಪಾರ್ಥಿವ ಶರೀರವನ್ನು ಅಲ್ಲೇ ಸಮಾಧಿ ಮಾಡಿದರು.
ವರದಿ :ಆಂಟೋನಿ ಬೇಗೂರು
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/DsJTbZnfQe5FbEJqOlbyUL
ಯೂಟ್ಯೂಬ್ ಚಾನೆಲ್ ಸಬ್ಸ್ ಕ್ರೈಬ್ ಆಗಿ: https://www.youtube.com/channel/UCtrQuDOToxHu8dzMaHjoYXA


