ಸಾಫ್ಟ್‌ವೇರ್ ಎಂಜಿನಿಯರ್ ವೊಬ್ಬರನ್ನು ಅಪಹರಿಸಿ ₹ 8 ಲಕ್ಷ ಹಾಗೂ ಚಿನ್ನಾಭರಣ ಕಿತ್ತುಕೊಂಡಿದ್ದ ನಾಲ್ವರು ಆರೋಪಿಗಳನ್ನು ಬೆಂಗಳೂರು ಅಶೋಕನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಹೊರಮಾವು ಪಿಎನ್‌ಟಿ ಬಡಾವಣೆಯ ತರುಣ್ ಗಣೇಶ್, ಗೋವಿಂದಪುರ ಜಾನಕಿರಾಮ ಬಡಾವಣೆಯ ವಿಘ್ನೇಶ್, ಹಳೇ ಬೈಯಪ್ಪನಹಳ್ಳಿಯ ಜೆ. ಚರೀಶ್ ಹಾಗೂ ಸುಬ್ಬಣ್ಣಪಾಳ್ಯದ ಮಣಿಕಂಠ ಬಂಧಿತರು. ಇವರಿಂದ ಕಾರು, ಮೊಬೈಲ್ ಹಾಗೂ ಚಾಕು ಜಪ್ತಿ ಮಾಡಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.
ಹೂಡಿ ನಿವಾಸಿ ಎಂಜಿನಿಯರ್ ರಾಹುಲ್ ನ. 26ರಂದು ಕಾರಿನಲ್ಲಿ ಕಲ್ಯಾಣನಗರಕ್ಕೆ ಹೋಗಿ ಅಲ್ಲಿಯೇ ಕಾರು ನಿಲ್ಲಿಸಿ ಪಬ್‌ಗೆ ತೆರಳಲು ಆಟೊದಲ್ಲಿ ಬ್ರಿಗೇಡ್ ರಸ್ತೆಗೆ ಹೋಗಿದ್ದರು. ಬ್ರಿಗೇಡ್ ರಸ್ತೆಯಲ್ಲಿ ವ್ಯಕ್ತಿಯೊಬ್ಬರ ಪರಿಚಯವಾಗಿತ್ತು. ಕೆಲವು ಯುವತಿಯರ ಫೋಟೊ ತೋರಿಸಿದ್ದ ವ್ಯಕ್ತಿ ಅವರನ್ನು ಪರಿಚಯ ಮಾಡಿಸುವುದಾಗಿ ಹೇಳಿದ್ದ. ತಮಗೆ ಯಾವ ಯುವತಿಯೂ ಬೇಡವೆಂದು ಹೇಳಿದ್ದ ರಾಹುಲ್ ಅಲ್ಲಿಂದ ಆಟೊದಲ್ಲಿ ಪುನಃ ಕಲ್ಯಾಣ ನಗರದತ್ತ ಹೊರಟಿದ್ದರು.
ಬ್ರಿಗೇಡ್ ರಸ್ತೆಯಿಂದಲೇ ರಾಹುಲ್ ಅವರನ್ನು ಹಿಂಬಾಲಿಸುತ್ತಿದ್ದ ಆರೋಪಿಗಳು ಮಾರ್ಗಮಧ್ಯೆ ಅಡ್ಡಗಟ್ಟಿ ರಾಹುಲ್ ಅವರನ್ನು ತಮ್ಮ ಕಾರಿನಲ್ಲಿ ಕೂರಿಸಿಕೊಂಡು ಕರೆದೊಯ್ದರು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಹೊರವರ್ತುಲ ರಸ್ತೆ, ಬೆಳ್ಳಂದೂರು, ಎಲೆಕ್ಟ್ರಾನಿಕ್ ಸಿಟಿ ಹಾಗೂ ಇತರೆಡೆ ಕಾರಿನಲ್ಲಿ ಸುತ್ತಾಡಿದ್ದ ಆರೋಪಿಗಳು, ರಾಹುಲ್ ಮೇಲೆ ಹಲ್ಲೆ ಮಾಡಿದ್ದರು. ಡೆಬಿಟ್‌ಕಾರ್ಡ್‌ಗಳನ್ನು ಪಡೆದು ಪಾಸ್‌ವರ್ಡ್ ತಿಳಿದುಕೊಂಡು ಹಣ ಡ್ರಾ ಮಾಡಿಕೊಂಡಿದ್ದರು. ಸ್ವೈಪಿಂಗ್ ಉಪಕರಣ ಮೂಲಕವೂ ಹಣ ಪಡೆದುಕೊಂಡಿದ್ದರು. ಚಿನ್ನದ ಸರವನ್ನು ಕಿತ್ತುಕೊಂಡಿದ್ದರು.
ರಾಹುಲ್ ಸಹೋದರನಿಗೆ ಕರೆ ಮಾಡಿದ್ದ ಆರೋಪಿಗಳು, 2 ಲಕ್ಷ ತಂದುಕೊಡುವಂತೆ ಬೇಡಿಕೆ ಇಟ್ಟಿದ್ದರು. ಸಹೋದರ ಹಣವಿಲ್ಲವೆಂದು ಹೇಳಿದ್ದರು. ಬಳಿಕ ರಾಹುಲ್ ಅವರನ್ನು ಕಲ್ಯಾಣನಗರಕ್ಕೆ ಬಿಟ್ಟು ಆರೋಪಿಗಳು ಪರಾರಿಯಾಗಿದ್ದರು. ನಂತರ ರಾಹುಲ್ ಠಾಣೆಗೆ ಬಂದು ದೂರು ನೀಡಿದ್ದಾರೆ. ₹ 8 ಲಕ್ಷ ಹಾಗೂ ಚಿನ್ನಾಭರಣ ಸುಲಿಗೆ ಆಗಿರುವುದಾಗಿ ದೂರಿನಲ್ಲಿ ವಿವರಿಸಿದ್ದಾರೆ.
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy


