ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ನಿರ್ಲಕ್ಷ್ಯದಿಂದಾಗಿ , ಮಳೆ ಬಂದಾಗಲೆಲ್ಲಾ ದಕ್ಷಿಣ ಬೆಂಗಳೂರಿನ ರಾಮಕೃಷ್ಣನಗರ ಮತ್ತು ಇಲಿಯಾಸ್ ನಗರದಲ್ಲಿ ಹತ್ತಾರು ಮನೆಗಳಿಗೆ ಕೊಳಚೆ ನೀರು ನುಗ್ಗುತ್ತಿದೆ.
ಈ ಸಂಬಂಧ ನಿವಾಸಿಗಳು ಮತ್ತು ಸಾಮಾಜಿಕ ಕಾರ್ಯಕರ್ತರು ಪದೇ ಪದೇ ಜಲಮಂಡಳಿಗೆ ದೂರು ನೀಡಿದರೂ ಯಾವುದೇ ಪ್ರಯೋಜನವಾಗಿಲ್ಲ. ಗಂಗಾಧರನಗರ ಮತ್ತು ಯಲಚೇನಹಳ್ಳಿಗೆ ಸಂಪರ್ಕ ಕಲ್ಪಿಸುವ ಒಳಚರಂಡಿ ಸಂಪರ್ಕ ಮಾರ್ಗದ ಕಾಮಗಾರಿಯನ್ನು ಬಿಡಬ್ಲ್ಯುಎಸ್ ಎಸ್ ಬಿ ಪೂರ್ಣಗೊಳಿಸದಿರುವುದು ಈ ಸಮಸ್ಯೆಗೆ ಕಾರಣವಾಗಿದೆ.
ಇದರಿಂದಾಗಿ ಕೇವಲ 1.5 ಮೀಟರ್ ಅಗಲದ ಬಿಬಿಎಂಪಿ ರಾಜಕಾಲುವೆಗೆ ಕೊಳಚೆ ನೀರು ಸೇರುತ್ತಿದೆ. BWSSB ಲಿಂಕ್ ಲೈನ್ ಪೂರ್ಣಗೊಳಿಸಲು 40 ಮೀಟರ್ ಒಳಚರಂಡಿ ಪೈಪ್ ಲೈನ್ ಹಾಕುವ ಅವಶ್ಯಕತೆಯಿದೆ ಎಂದು ಹೇಳಲಾಗಿದೆ.
ಯಲಚೇನಹಳ್ಳಿಯಲ್ಲಿನ ಉಪ ಒಳಚರಂಡಿ ಮಾರ್ಗವನ್ನು ಸಂಪರ್ಕಿಸುವ ಒಳಚರಂಡಿ ಕಾಮಗಾರಿ ಪೂರ್ಣಗೊಳ್ಳದಿರುವುದು ಮತ್ತು ಪೈಪ್ ಲೈನ್ ವಿಸ್ತರಿಸದಿರುವ ಕಾರಣ ರಾಜಕಾಲುವೆಗೆ ಚರಂಡಿ ನೀರು ಹರಿಯುತ್ತದೆ. ಮಳೆ ಬಂದರೆ ಬಿಎಸ್ ಡಬ್ಲ್ಯುಡಿಯಿಂದ ಕೊಳಚೆ ನೀರು ಉಕ್ಕಿ ಹರಿದು ತಗ್ಗು ಪ್ರದೇಶದಲ್ಲಿರುವ ಮನೆಗಳಿಗೆ ನೀರು ನುಗ್ಗುತ್ತಿದೆ. ಈ ಬಗ್ಗೆ ಅಧಿಕಾರಿಗಳು ಸಮರ್ಪಕವಾದ ಉತ್ತರ ನೀಡುತ್ತಿಲ್ಲ ಎಂದು ಇಲ್ಲಿನ ನಾಗರಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.


