ತುರುವೇಕೆರೆ: ತಾಲೂಕಿನ ಅಮ್ಮಸಂದ್ರ ಸಿಮೆಂಟ್ ಕಾರ್ಖಾನೆಯಲ್ಲಿ ಸ್ವೀಪರ್ ಆಗಿ ಕೆಲಸ ನಿರ್ವಹಿಸುತ್ತಿದ್ದ ದಲಿತ ಕಾರ್ಮಿಕ ಹೊನ್ನಪ್ಪ ಎಂಬ ವ್ಯಕ್ತಿಗೆ, ಕಾರ್ಖಾನೆಯ ವ್ಯವಸ್ಥಾಪಕ ಮಂಜುನಾಥ್ ಎಂಬುವರು, ಬರಿಗೈನಲ್ಲೇ ಮಲದ ಗುಂಡಿ ಸ್ವಚ್ಛಗೊಳಿಸುವಂತೆ ಕಾರ್ಮಿಕನಿಗೆ ತಾಕಿತು ಮಾಡಿ, ಮಲದ ಗುಂಡಿಯನ್ನು ಸ್ವಚ್ಛ ಮಾಡಿಸಿರುವುದು ತಡವಾಗಿ ಬೆಳಕಿಗೆ ಬಂದಿದೆ.
ಇದರ ವಿಚಾರವಾಗಿ ಕಾರ್ಮಿಕ ಹೊನ್ನಪ್ಪ ಅವರು ಅಧಿಕಾರಿಗಳ ಬೆದರಿಕೆಗೆ ಭಯದಿಂದ ಈ ವಿಷಯ ಯಾರಿಗೂ ತಿಳಿಸಿರಲಿಲ್ಲ ಆದರೆ, ಇವರು ಬರಿಗೈನಲ್ಲಿ ಸ್ವಚ್ಛ ಮಾಡುತ್ತಿರುವ ಫೋಟೋ ಮತ್ತು ವಿಡಿಯೋ ಒಂದನ್ನು ಅಲ್ಲೇ ಸ್ಥಳೀಯವಾಗಿ ಸಂಚರಿಸುತ್ತಿದ್ದ ಸಾರ್ವಜನಿಕರೊಬ್ಬರು ಸಾಮಾಜಿಕ ಜಾಲತಾಣಕ್ಕೆ ಫೋಟೋ ಮತ್ತು ವಿಡಿಯೋವನ್ನು ಹರಿಬಿಟ್ಟಿದ್ದರು. ಈ ವಿಚಾರ ತಿಳಿದ ಕಾರ್ಖಾನೆಯ ವ್ಯವಸ್ಥಾಪಕ ಮಂಜುನಾಥ್, ನೀನೇ ವಿಡಿಯೋ ವೈರಲ್ ಮಾಡಿಸಿದ್ದೀಯಾ ಎಂದು ಆರೋಪಿಸಿ, ಕಾರ್ಮಿಕನನ್ನು ಕೆಲಸದಿಂದ ತೆಗೆದು ಹಾಕಿದ್ದಾರೆ.
ಕೆಲಸ ಸ್ಥಳದಲ್ಲಿ ಅಮಾನವೀಯವಾಗಿ ಮಲದ ಗುಂಡಿ ಸ್ವಚ್ಛಗೊಳಿಸಿದ್ದಲ್ಲದೇ, ಕೆಲಸದಿಂದಲೂ ತೆಗೆದು ಹಾಕಲಾಗಿದ್ದು ಇದರಿಂದ ನೊಂದ ಕಾರ್ಮಿಕ ದಂಡಿನ ಶಿವರ ಪೊಲೀಸ್ ಠಾಣೆಗೆ ಈ ಬಗ್ಗೆ ದೂರು ನೀಡಿದ್ದಾರೆ.
ಇನ್ನೂ ಹೊನ್ನಪ್ಪನವರು ದೂರು ನೀಡಿದರೂ ಪೊಲೀಸರು ಪ್ರಕರಣದ ತನಿಖೆಯನ್ನು ವೇಗವಾಗಿ ನಡೆಸದೇ ನಿರ್ಲಕ್ಷ್ಯವಹಿಸಿದ್ದಾರೆ ಎನ್ನುವ ಆರೋಪವೂ ಕೇಳಿ ಬಂದಿದೆ.
ಈ ಬಗ್ಗೆ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿರುವ ದಲಿತ ಮುಖಂಡರಾದ ಹೊನ್ನೇನಹಳ್ಳಿ ಕೃಷ್ಣಮೂರ್ತಿ, ಕಾರ್ಮಿಕ ಹೊನ್ನಪ್ಪ ಅವರ ಕುಟುಂಬ ಈ ಕೆಲಸವನ್ನೇ ನಂಬಿಕೊಂಡು ಜೀವನ ಸಾಗಿಸುತ್ತಿದ್ದು, ಈಗ ಕೆಲಸವು ಕೂಡ ಇಲ್ಲದೆ ಪರಿತಪಿಸುವಂತಾಗಿದೆ. ಕೂಡಲೇ ಕಾರ್ಖಾನೆ ವ್ಯವಸ್ಥಾಪಕ ಮಂಜುನಾಥ್ ಎಂಬವರ ಮೇಲೆ ಕಾನೂನು ಕ್ರಮ ಜರುಗಿಸಬೇಕೆಂದು ತಾಲೂಕು ತಹಶೀಲ್ದಾರ್ ಅವರಿಗೆ ದೂರನ್ನು ನೀಡಲಾಗುವುದು ಎಂದರು.
ವರದಿ: ಸುರೇಶ್ ಬಾಬು ಎಂ.


