ಬೀದರ್ : ಬೇಡ ಜಂಗಮ ಜಾತಿ ಪ್ರಮಾಣ ಪತ್ರಕ್ಕೆ ಸಂಬಂಧಿಸಿದಂತೆ ರವೀಂದ್ರ ಸ್ವಾಮಿ ಸಲ್ಲಿಸಿರುವ ಅರ್ಜಿಯನ್ನು ಸುಪ್ರೀಂ ಕೋರ್ಟ್ ವಜಾಗೊಳಿಸಿದೆ. ಹಾಗಾಗಿ ಅವರ ವಿರುದ್ಧ ಅಟ್ರಾಸಿಟಿ ಪ್ರಕರಣ ದಾಖಲಿಸಿ ಅವರನ್ನು ಬೀದರ್ ಜಿಲ್ಲೆಯಿಂದ ಗಡೀಪಾರು ಮಾಡಬೇಕು ಎಂದು ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿಯ ರಾಜ್ಯ ಸಂಚಾಲಕ ಮಾರುತಿ ಬೌದ್ಧೆ ಆಗ್ರಹಿಸಿದರು.
ನಗರದ ಜಿಲ್ಲಾ ಪತ್ರಿಕಾ ಭವನದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಮಾರುತಿ ಬೌದ್ಧೆ, 2016ರಲ್ಲಿ ನಗರಸಭೆಯ ಮಾಜಿ ಸದಸ್ಯ ರವೀಂದ್ರ ಸ್ವಾಮಿ ಅವರು ಬೇಡ ಜಂಗಮ ಜಾತಿ ಪ್ರಮಾಣ ಪತ್ರ ಪಡೆದುಕೊಂಡಿದ್ದರು. ಆದರೆ ಅದನ್ನು 2019ರಲ್ಲಿ ಅಂದಿನ ಜಿಲ್ಲಾಧಿಕಾರಿ ಗೋವಿಂದರೆಡ್ಡಿ ಅವರು ತಿರಸ್ಕರಿಸಿದ್ದರು. ಆಗ ಜಿಲ್ಲಾಧಿಕಾರಿಗಳ ಆದೇಶದ ವಿರುದ್ಧ ರವೀಂದ್ರ ಸ್ವಾಮಿ ಅವರು ಹೈಕೋರ್ಟ್ ಮೊರೆ ಹೋಗಿದ್ದರು. ಆ ಸಂದರ್ಭದಲ್ಲಿ ಕೋರ್ಟ್ ಅರ್ಜಿ ಪರಿಶೀಲನೆಗೆ ಆದೇಶಿಸಿತು. ನಂತರ ಅಧಿಕಾರಿಗಳು ಆದೇಶವನ್ನು ಅಪಾರ್ಥ ಮಾಡಿಕೊಂಡು ಎಸ್ಸಿ ಜಾತಿ ಪ್ರಮಾಣ ವಿತರಿಸಿದ್ದರು ಎಂದು ಆರೋಪಿಸಿದರು. ನಂತರ ನ್ಯಾಯಾಲಯ ಎಸ್ ಸಿ ಸರ್ಟಿಫಿಕೇಟ್ ರದ್ದು ಮಾಡಿತ್ತು. ಈ ಹಿನ್ನೆಲೆಯಲ್ಲಿ ರವಿ ಸ್ವಾಮಿ ಹೈಕೋರ್ಟ್ ಆದೇಶದ ವಿರುದ್ಧ ಸುಪ್ರೀಂ ಕೋರ್ಟ್ ಮೊರೆ ಹೋಗಿದ್ದರು. ಆದರೆ ಸುಪ್ರೀಂ ಕೋರ್ಟ್ ಎಲ್ಲ ವಾದ ವಿವಾದಗಳನ್ನು ಆಲಿಸಿ ರವಿ ಸ್ವಾಮಿ ಅವರ ಅರ್ಜಿಯನ್ನು ವಜಗೊಳಿಸಿದೆ ಎಂದರು.
ನಾನು ಹಂತ ಹಂತವಾಗಿ ನಡೆಸಿದ ಹೋರಾಟಕ್ಕೆ ಕೊನೆಗೂ ಜಯ ಸಿಕ್ಕಿದೆ. ಸುಳ್ಳು ಜಾತಿ ಪ್ರಮಾಣ ಪತ್ರ ವಿತರಿಸಿದ ಅಧಿಕಾರಿಗಳನ್ನು ಸೇವೆಯಿಂದ ವಜಾಗೊಳಿಸಬೇಕು. ರವೀಂದ್ರ ಸ್ವಾಮಿ ವಿರುದ್ಧ ಅಟ್ರಾಸಿಟಿ ಪ್ರಕರಣ ದಾಖಲಿಸಿ ಅವರನ್ನು ಜಿಲ್ಲೆಯಿಂದ ಗಡಿಪಾರು ಮಾಡಬೇಕು ಎಂದು ಒತ್ತಾಯಿಸಿದರು.
ವಿಠಲದಾಸ್ ಪ್ಯಾಗೆ ಅವರು ಮಾತನಾಡಿ, ಇತ್ತೀಚಿಗೆ ಎಸ್ಸಿ, ಎಸ್ಟಿ ಸೌಲಭ್ಯ ಪಡೆಯಲು ಸಾಕಷ್ಟು ಸುಳ್ಳು ಜಾತಿ ಪ್ರಮಾಣ ಪತ್ರ ಪಡೆಯುತ್ತಿದ್ದಾರೆ. ಇಂತಹವರನ್ನು ಕಡಿವಾಣ ಹಾಕಲು ಸರಕಾರ ಕಾಯ್ದೆ ಜಾರಿಗೆ ತಂದು ಕಠಿಣ ಶಿಕ್ಷೆಗೆ ಒಳಪಡಿಸಬೇಕು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಶಿವರಾಜ್ ತಡಪಳ್ಳಿ, ಕಾಶೀನಾಥ್ ಚೆಲ್ವಾ, ರಾಜು ವಾಘಮೋರೆ ಸೇರಿದಂತೆ ಇತರರು ಉಪಸ್ಥಿತರಿದ್ದರು.
ವರದಿ: ಅರವಿಂದ ಮಲ್ಲಿಗೆ, ಬೀದರ್
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC


