ಮಧುಗಿರಿ: ಅಧಿಕಾರಿಗಳ ಭ್ರಷ್ಟಾಚಾರ ಮತ್ತು ವಿಳಂಬ ಧೋರಣೆಗೆ ಬೇಸತ್ತ ರೈತರೊಬ್ಬರು ತಾಲ್ಲೂಕು ಕಚೇರಿ ಮುಂದೆ ತಾನು ಬೆಳೆದ ಮೂಲಂಗಿಯನ್ನೇ ಲಂಚವಾಗಿ ನೀಡಲು ಮುಂದಾದ ವಿಚಿತ್ರ ಹಾಗೂ ಆಕ್ರೋಶದ ಘಟನೆ ತುಮಕೂರು ಜಿಲ್ಲೆಯ ಮಧುಗಿರಿಯಲ್ಲಿ ನಡೆದಿದೆ.
ಘಟನೆಯ ವಿವರ: ತಾಲ್ಲೂಕಿನ ದೊಡ್ಡರಿ ಹೋಬಳಿಯ ಜಕ್ಕೇನಹಳ್ಳಿ ಗ್ರಾಮದ ರೈತ ಪ್ರಸನ್ನಕುಮಾರ್ ಎಂಬವರು ಈ ವಿನೂತನ ಪ್ರತಿಭಟನೆ ನಡೆಸಿದವರು. ಕಳೆದ ಎರಡು ವರ್ಷಗಳಿಂದ ತಮ್ಮ ಜಮೀನಿಗೆ ದಾರಿ ಮಾಡಿಕೊಡುವಂತೆ ಅವರು ಕಂದಾಯ ಇಲಾಖೆಯ ಅಧಿಕಾರಿಗಳಿಗೆ ಅಲೆದಾಡುತ್ತಿದ್ದರು. ಲೋಕಾಯುಕ್ತ ನ್ಯಾಯಾಲಯವು ಒಂದು ತಿಂಗಳೊಳಗೆ ರಸ್ತೆ ನಿರ್ಮಿಸಿಕೊಡುವಂತೆ ಆದೇಶ ನೀಡಿದ್ದರೂ, ಸ್ಥಳೀಯ ಅಧಿಕಾರಿಗಳು ಮಾತ್ರ ಕಾರ್ಯಪ್ರವೃತ್ತರಾಗಿರಲಿಲ್ಲ.
ಮೂಲಂಗಿ ಹಿಡಿದು ಆಕ್ರೋಶ: ಜಮೀನಿನ ದಾರಿ ಒತ್ತುವರಿ ತೆರವುಗೊಳಿಸಲು ಅಥವಾ ಸ್ಥಳ ಪರಿಶೀಲನೆ ನಡೆಸಲು ಅಧಿಕಾರಿಗಳು ಹಣದ ಬೇಡಿಕೆ ಇಟ್ಟಿದ್ದಾರೆ ಎಂದು ಆರೋಪಿಸಿರುವ ಪ್ರಸನ್ನಕುಮಾರ್, ಮಂಗಳವಾರ ತಾಲ್ಲೂಕು ಕಚೇರಿ ಮುಂದೆ ಮೈಕ್ ಹಿಡಿದು ಘೋಷಣೆ ಕೂಗಿದರು. “ನನ್ನ ಬಳಿ ಲಂಚ ನೀಡಲು ಹಣವಿಲ್ಲ, ಹಾಗಾಗಿ ನಾನು ಬೆಳೆದ ಮೂಲಂಗಿಯನ್ನೇ ಲಂಚವಾಗಿ ಕೊಡುತ್ತೇನೆ ಬನ್ನಿ” ಎಂದು ಅಧಿಕಾರಿಗಳನ್ನು ವ್ಯಂಗ್ಯವಾಗಿ ಕರೆದರು.
ಆತ್ಮಹತ್ಯೆಯ ಎಚ್ಚರಿಕೆ: “ಕಂದಾಯ ಸಚಿವರಿಂದಲೇ ಆದೇಶ ತಂದಿದ್ದರೂ ಅಧಿಕಾರಿಗಳು ಸತಾಯಿಸುತ್ತಿದ್ದಾರೆ. ಒಂದು ವಾರದೊಳಗೆ ನನಗೆ ನ್ಯಾಯ ಸಿಗದಿದ್ದರೆ ಇದೇ ಕಚೇರಿಯ ಮುಂದೆ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಳ್ಳುತ್ತೇನೆ” ಎಂದು ರೈತ ಎಚ್ಚರಿಕೆ ನೀಡಿದ್ದಾರೆ.
ಅಧಿಕಾರಿಗಳ ಪ್ರತಿಕ್ರಿಯೆ: ಈ ವಿಷಯದ ಬಗ್ಗೆ ಪ್ರತಿಕ್ರಿಯಿಸಿದ ಉಪವಿಭಾಗಾಧಿಕಾರಿ ಗೋಟೂರು ಶಿವಪ್ಪ ಅವರು, “ನಕಾಶೆಯಲ್ಲಿ ರಸ್ತೆ ಇದ್ದರೆ ವಾರದೊಳಗೆ ನಿರ್ಮಿಸಿಕೊಡಲಾಗುವುದು. ಅಧಿಕಾರಿಗಳ ತಪ್ಪು ಕಂಡುಬಂದಲ್ಲಿ ಕ್ರಮ ಕೈಗೊಳ್ಳಲಾಗುವುದು. ರೈತರು ಇಂತಹ ಹತಾಶೆಯ ನಿರ್ಧಾರಗಳನ್ನು ತೆಗೆದುಕೊಳ್ಳಬಾರದು” ಎಂದು ಭರವಸೆ ನೀಡಿದ್ದಾರೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC


