ವಿಜಯನಗರ: ರಾಜ್ಯ ವ್ಯಾಪ್ತಿಯ ರೈತ ನಾಯಕ ಜೆ. ಕಾರ್ತಿಕ್(40) ರಸ್ತೆ ಅಪಘಾತವೊಂದರಲ್ಲಿ ಮೃತಪಟ್ಟಿದ್ದಾರೆ. ಅಪಘಾತ ನಡೆದ ರೀತಿ ನಿಗೂಢವಾಗಿದ್ದು, ಹಲವು ಊಹಾಪೋಹಗಳನ್ನು ಹುಟ್ಟುಹಾಕಿದೆ.
ಬೂದಗುಂಪಾ ಕ್ರಾಸ್ ಬಳಿಯಲ್ಲಿ ಜೆ. ಕಾರ್ತಿಕ್ ಅವರು ಚಲಾಯಿಸುತ್ತಿದ್ದ ಬೈಕ್ ಹೆದ್ದಾರಿ ಬಳಿ ಬಿದ್ದಿದ್ದು, ಅದರ ಪಕ್ಕದಲ್ಲಿ ತೀವ್ರ ಗಾಯಗೊಂಡು ತಲೆಯಿಂದ ರಕ್ತ ಸೋರುತ್ತಿದ್ದ ಕಾರ್ತಿಕ್ ಕಂಡುಬಂದಿದ್ದರು. ಗಾಯಗೊಂಡಿದ್ದ ಕಾರ್ತಿಕ್ ಅವರನ್ನು ಹುಬ್ಬಳ್ಳಿಯ ಆಸ್ಪತ್ರೆಗೆ ಚಿಕಿತ್ಸೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೇ ಇಂದು ಬೆಳಗಿನ ಜಾವ 4.30ರ ವೇಳೆ ಅವರು ಕೊನೆಯುಸಿರು ಎಳೆದಿದ್ದಾರೆ.
ವಿಜಯನಗರ ಜಿಲ್ಲೆಯ ಹೊಸಪೇಟೆಯ ನಿವಾಸಿಯಾದ ಜೆ. ಕಾರ್ತಿಕ್ ಅವರು ಹೊಸಪೇಟೆಯಿಂದ ಕೊಪ್ಪಳದತ್ತ ಬೈಕ್ ಮೇಲೆ ತೆರಳುತ್ತಿದ್ದರು ಎನ್ನಲಾಗಿದೆ. ಕೊಪ್ಪಳ ಜಿಲ್ಲೆಯ ಮುನಿರಾಬಾದ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಅಪಘಾತ ನಡೆದಿದೆ. ಅಪಘಾತದ ಪ್ರತ್ಯಕ್ಷದರ್ಶಿಗಳು ಯಾರೂ ಇಲ್ಲವಾದುದರಿಂದ ಬೈಕ್ ಸ್ಕಿಡ್ ಆಗಿ ಬಿದ್ದಿದ್ದಾರೋ, ಹಿಟ್ ಆಯಂಡ್ ರನ್ ಆಗಿದೆಯೋ ತಿಳಿದು ಬಂದಿಲ್ಲ.
ಹೊಸಪೇಟೆಯ ನಿವಾಸಿ ಕಾರ್ತಿಕ್ ನಾನಾ ರೈತರ ಹೋರಾಟಗಳಲ್ಲಿ ಭಾಗಿಯಾಗಿದ್ದರು. ಈ ಹಿಂದೆ ಕೋಡಿಹಳ್ಳಿ ಚಂದ್ರಶೇಖರ ಬಣದ ರೈತ ಸಂಘದಲ್ಲಿದ್ದರು. ನಂತರ ಕೋಡಿಹಳ್ಳಿ ಚಂದ್ರಶೇಖರ್ ಬಣದಿಂದ ಹೊರಬಂದು ಸ್ವತಃ ಸಂಘವೊಂದನ್ನು ಕಟ್ಟಿದ್ದರು. ಕರ್ನಾಟಕ ರಾಜ್ಯ ರೈತರ ಸಂಘ ಹಸಿರು ಸೇನೆ ಅನ್ನುವ ಸಂಘದಲ್ಲಿ ಸಕ್ರಿಯರಾಗಿದ್ದರು.
ಹಲವು ಹೋರಾಟಗಳಲ್ಲಿ ಭಾಗಿಯಾಗಿದ್ದ ಕಾರ್ತಿಕ್ ಸಾವಿನ ಹಿಂದೆ ಹಲವು ಅನುಮಾನ ಎದ್ದಿದೆ. ಅಪಘಾತ ನಡೆದ ರೀತಿ ನಿಗೂಢವಾಗಿದ್ದು, ಹಲವು ಊಹಾಪೋಹಗಳನ್ನು ಹುಟ್ಟುಹಾಕಿದೆ. ಕೊಲೆ ಸಾಧ್ಯತೆಗಳನ್ನೂ ಪೊಲೀಸರು ಪರಿಶೀಲಿಸುತ್ತಿದ್ದಾರೆ.
ಈ ಬಗ್ಗೆ ಸಮಗ್ರ ತನಿಖೆ ನಡೆಸಲು ಪೊಲೀಸ್ ಇಲಾಖೆಗೆ ಸಂಘದ ಸದಸ್ಯರು ಒತ್ತಾಯಿಸಿದ್ದಾರೆ. ಎಲ್ಲಾ ಆಯಾಮಗಳಿಂದ ಪೊಲೀಸರು ತನಿಖೆ ಮಾಡುತ್ತಿದ್ದಾರೆ.


