ಸರಗೂರು: ತಾಲ್ಲೂಕಿನಲ್ಲಿ ಕಾಡುಪ್ರಾಣಿಗಳ ಉಪಟಳ ಹೆಚ್ಚಾಗಿದ್ದು, ರೈತರ ಜೀವನ ಕಷ್ಟಕರವಾಗಿದೆ, ಆದರೂ ಅರಣ್ಯ ಇಲಾಖೆಯ ಅಧಿಕಾರಿಗಳು ರೈತರ ನೆರವಿಗೆ ಬರುತ್ತಿಲ್ಲ’ ಹಾಗೂ ರೈತರ ಬಗ್ಗೆ ಅವಹೇಳನಾಕಾರಿ ಮಾತನಾಡಿರುವ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಎ.ವಿ.ಸತೀಶ್ ವಿರುದ್ಧ ರೈತ ಸಂಘ ಮತ್ತು ಪ್ರಗತಿಪರ ಸಂಘಟನೆ ಮಂಗಳವಾರದಂದು ಅರಣ್ಯ ಇಲಾಖೆ ಕಚೇರಿ ಮುಂಭಾಗ ವಿವಿಧ ಘೋಷಣೆ ಕೂಗಿ ಎಸಿಎಫ್ ಸತೀಶ್ ರವರನ್ನು ವರ್ಗಾವಣೆ ಮಾಡಬೇಕು ಪ್ರತಿಭಟನೆ ಒತ್ತಾಯಿಸಿದರು.
ನಂತರ ಸಭೆ ಕುರಿತು ಮಾತನಾಡಿದ ರೈತ ಸಂಘದ ಯುವ ಘಟಕದ ಪ್ರಧಾನ ಕಾರ್ಯದರ್ಶಿ ಹಳೆಹೆಗ್ಗುಡಿಲು ನವೀನ್, ಸೆ.10ರಂದು ರೈತ ಸಭೆಯಲ್ಲಿ “ರೈತರು ನಿಮಗೆ ನಾಚಿಕೆಯಾಗಬೇಕು” ಎಂದು ಅವಹೇಳನಾಕಾರಿಯಾಗಿ ಮಾತನಾಡಿರುವ ಈ ಭಾಗದ ಸಹಾಯಕ ಸಂರಕ್ಷಣಾಧಿಕಾರಿ ರೈತರ ಬಗ್ಗೆ ಅರಿವು ಇಲ್ಲದಂತೆ ಮಾತನಾಡಿದ ವ್ಯಕ್ತಿಯನ್ನು ಅಮಾನತು ಮತ್ತು ವರ್ಗಾವಣೆ ಮಾಡಿ ಎಂದು ಅರಣ್ಯ ಅಧಿಕಾರಿಗಳ ವಿರುದ್ಧ ತಮ್ಮ ಆಕ್ರೋಶವನ್ನು ಹೊರಹಾಕಿದರು.
ದಸಂಸ ಮುಖಂಡ ಅಂಬೇಡ್ಕರ್ ಭವನ ಟ್ರಸ್ಟ್ ಅಧ್ಯಕ್ಷ ಎ.ಎಸ್.ಡಿ.ಸಣ್ಣಸ್ವಾಮಿ ಮಾತನಾಡಿ, ಕಾಡು ಪ್ರಾಣಿಗಳು ಮತ್ತು ಕಾಡಾನೆಗಳು ನಿರಂತರವಾಗಿ ದಾಳಿ ನಡೆಸಿ ರೈತರ ಬೆಳೆದ ಫಸಲನ್ನು ನಾಶ ಮಾಡುತ್ತಿವೆ. ದೀರ್ಘಕಾಲ ರೈತರಿಗೆ ಫಸಲು ಕೊಡುವ ಆರ್ಥಿಕವಾಗಿ ಶಕ್ತಿ ತುಂಬುವ ಹೊಗೆಸೊಪ್ಪು, ರಾಗಿ, ಜೋಳ, ಹತ್ತಿ ಇನ್ನೂ ಮುಂತಾದ ಕಾಡಾನೆ ದಾಳಿಗೆ ಬಲಿಯಾಗುತ್ತಿವೆ. ಕಾಡು ಪ್ರಾಣಿಗಳ ದಾಳಿಗೆ ಕೇವಲ ರೈತರ ಫಸಲು ನಾಶವಾಗದೆ, ರೈತರೂ ಬಲಿಯಾಗುತ್ತಿದ್ದಾರೆ. ರೈತ ಸಂಘವು ಕಾಡಾನೆ ದಾಳಿ ತಡೆಗಟ್ಟುವಂತೆ ಹಲವು ಬಾರಿ ಒತ್ತಾಯಿಸಿ ಇಲಾಖೆಗೆ ಮನವಿ ಮಾಡಿದ್ದರೂ ಅರಣ್ಯ ಇಲಾಖೆ ಗಂಭೀರವಾಗಿ ಪರಿಗಣಿಸುತ್ತಿಲ್ಲ, ಕಾಡಾನೆಗಳನ್ನು ತಡೆಗಟ್ಟುತ್ತಿಲ್ಲ ಎಂದು ದೂರಿದರು.
ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಎ.ವಿ.ಸತೀಶ್ ರವರು ರೈತರ ಬಗ್ಗೆ ಯಾವುದೇ ಸಭೆಯಲ್ಲಿ ಏಕವಚನದಲ್ಲಿ ಕರೆಯುವುದು ಇವರ ಅಭ್ಯಾಸ, ರೈತರು ಹಾಗೂ ಈ ಭಾಗದ ಗ್ರಾಮಗಳಿಂದ ಹೊರಗುತ್ತಿಗೆ ಆಧಾರದಲ್ಲಿ ಇರುವ ಸಿಬ್ಬಂದಿಗಳಿಗೂ ಅವಾಚ್ಯ ಶಬ್ದಗಳಿಂದ ಬೈಯ್ದು ಮಾತನಾಡಿರುವ ಬಗ್ಗೆ ಸರಗೂರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಇವರ ಮೇಲೆ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಆಕ್ರೋಶ ವ್ಯಕ್ತಪಡಿಸಿದರು.
ಜಿಲ್ಲಾ ರೈತ ಸಂಘದ ಪ್ರಧಾನ ಕಾರ್ಯದರ್ಶಿ ಮರ್ಕಾಂಡಯ್ಯ ಮಾತನಾಡಿ, ಕಾಡು ಪ್ರಾಣಿಗಳು ಮತ್ತು ಕಾಡಾನೆಗಳು ದಾಳಿ ನಡೆಸಿ ಬೆಳೆಗಳನ್ನು ನಾಶ ಮಾಡಿ, ರೈತರ ಬದುಕನ್ನು ಕಿತ್ತುಕೊಳ್ಳುತ್ತಿವೆ. ಅರಣ್ಯ ಇಲಾಖೆಯ ಹಿರಿಯ ಮತ್ತು ಉನ್ನತ ಅಧಿಕಾರಿಗಳು ತಾಲ್ಲೂಕಿಗೆ ಭೇಟಿ ನೀಡಿ ಇಲ್ಲಿನ ಪರಿಸ್ಥಿತಿಯನ್ನು ಅವಲೋಕಿಸಿ ಕಾಡಾನೆ ದಾಳಿಗೆ ಶಾಶ್ವತ ಪರಿಹಾರವನ್ನು ದೊರಕಿಸಬೇಕು. ತಾಲ್ಲೂಕು ಆಡಳಿತ ಮತ್ತು ಜಿಲ್ಲಾಡಳಿತವು ಕ್ರಮಕ್ಕೆ ಮುಂದಾಗಿ ರೈತರ ರಕ್ಷಣೆಗೆ ಧಾವಿಸಬೇಕು. ಆ ಕೆಲಸವನ್ನು ಇಂದೇ ಮಾಡಬೇಕು ಎಂದು ಪಟ್ಟು ಹಿಡಿದರು. ನಂಜನಗೂಡು ಪ್ರಧಾನ ಕಾರ್ಯದರ್ಶಿ ಎಚ್ಚಿಗೆ ಪ್ರಕಾಶ್, ಶ್ರೀನಿವಾಸ, ಮಹದೇವಸ್ವಾಮಿ, ಎಚ್.ಡಿ.ಕೋಟೆ ತಾಲೂಕು ರೈತ ಅಧ್ಯಕ್ಷ ಮಹಾದೇವ ನಾಯಕ ಮಾತನಾಡಿದರು.
ಈ ಸಂದರ್ಭದಲ್ಲಿ ತಾಲ್ಲೂಕು ರೈತ ಸಂಘ ಅಧ್ಯಕ್ಷ ಚನ್ನನಾಯಕ, ಮಹದೇವನಾಯಕ, ದಯಾನಂದ, ರೈತ ಸಂಘ ಉಪಾಧ್ಯಕ್ಷರು ಮಹಲಿಂಗು,ಕುಮಾರಗೌಡ, ನಿಂಗನಾಯಕ, ನಾಗರಾಜು, ನವೀನ್, ಶಿವಪ್ಪ, ಕಾರ್ಯಾಧ್ಯಕ್ಷ ರವಿಕುಮಾರ್, ಮಹದೇವ, ಬಸವರಾಜಪ್ಪ, ಸಿದ್ದರಾಮೇಗೌಡ, ಉಮೇಶ್, ಭೂ ಹಕ್ಕುಗಳ ಸಮಿತಿ ಸದಸ್ಯ ಬಸವರಾಜಪ್ಪ, ಶಿವಲಿಂಗಪ್ಪ, ಸೋಮಣ್ಣ, ಪ್ರಭಾಕರ್, ದಸಂಸ (ಅಂಬೇಡ್ಕರ್ ವಾದ) ತಾಲೂಕು ಸಂಚಾಲಕ ಕೂಡಗಿ ಗೋವಿಂದರಾಜು, ಹಾದನೂರು ಮಹಾದೇವಯ್ಯ, ರಾಮಕೃಷ್ಣ, ಇನ್ನೂ ಮುಖಂಡರು ಸೇರಿದಂತೆ ರೈತ ಸಂಘದ ಕಾರ್ಯಕರ್ತರ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು.
ವರದಿ: ಹಾದನೂರು ಚಂದ್ರ
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC