ತುಮಕೂರು: ರಾಜ್ಯ ಸರ್ಕಾರ ಜಾರಿಗೊಳಿಸಿರುವ ಪಂಚ ಗ್ಯಾರಂಟಿಗಳು ಕೇವಲ ಮಹಿಳೆಯರು, ಬಡವರ ಜೀವನ ಸುಧಾರಿಸುವ ಕಾರ್ಯಕ್ರಮ ಮಾತ್ರ ಆಗಿಲ್ಲ, ವಿಶೇಷವಾಗಿ ಹಿಂದಿನ ಸರ್ಕಾರದ ಅವಧಿಯಲ್ಲಿ ಹೆಚ್ಚಿದ್ದ ರೈತರ ಆತ್ಮಹತ್ಯೆ ಪ್ರಕರಣಗಳನ್ನು ನಿಯಂತ್ರಿಸಿದೆ ಎಂದು ಗೃಹ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಾ.ಜಿ.ಪರಮೇಶ್ವರ ಹೇಳಿದರು.
ತುಮಕೂರಿನ ಗಾಜಿನ ಮನೆ ಆವರಣದಲ್ಲಿ ಶುಕ್ರವಾರ ಕರ್ನಾಟಕ ರಾಜ್ಯ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರ, ಜಿಲ್ಲಾಡಳಿತ ಹಾಗೂ ಜಿಲ್ಲಾ ಪಂಚಾಯಿತಿ ವತಿಯಿಂದ ಆಯೋಜಿಸಲಾಗಿದ್ದ ಪಂಚ ಗ್ಯಾರಂಟಿ ಯೋಜನೆಗಳ ಸಮಾವೇಶ ಹಾಗೂ ಕಾರ್ಯಾಗಾರವನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.
ರೈತ ಕುಟುಂಬಗಳ ಆರ್ಥಿಕ ಪರಿಸ್ಥಿತಿ ಪಂಚ ಗ್ಯಾರಂಟಿಗಳಿಂದಾಗಿ ಸುಧಾರಿಸಿದ್ದು, ಯುವ ಜನರನ್ನು ಭಾವನಾತ್ಮಕವಾಗಿ ಎತ್ತಿಕಟ್ಟುವ ಕೆಲಸವನ್ನು ವಿಪಕ್ಷಗಳು ಬಿಡಬೇಕು. ವಿದ್ಯಾವಂತ ಯುವಜನರಿಗೆ ಉದ್ಯೋಗಾವಕಾಶ ಕಲ್ಪಿಸುವ ಜವಾಬ್ದಾರಿ ರಾಜ್ಯ ಸರ್ಕಾರದ ಮೇಲಿದ್ದು, ಇದಕ್ಕಾಗಿಯೇ ರಾಜ್ಯ ಸಚಿವ ಸಂಪುಟ ಸಭೆಯಲ್ಲಿ 56 ಸಾವಿರ ಹುದ್ದೆಗಳ ಭರ್ತಿಗೆ ತೀರ್ಮಾನಿಸಲಾಗಿದೆ ಎಂದರು.

ಯಾರೇ ಅಧಿಕಾರಕ್ಕೆ ಬಂದರೂ ಜನಪರ ಯೋಜನೆಗಳನ್ನು ಜಾರಿಗೆ ತರುತ್ತಾರೆ. ಆದರೆ ಹಸಿದ ಜನರಿಗೆ ಹೊಟ್ಟೆತುಂಬ ಅನ್ನಸಿಗಬೇಕು. ಬಡತನ ನಿರ್ಮೂಲನೆ ಮಾಡಬೇಕು. ಪುರುಷರಿಗಿಂತ ಹೆಚ್ಚು ಶ್ರಮ ಪಡುವ ಮಹಿಳೆಯರಲ್ಲಿ ಆರ್ಥಿಕ ಚೈತನ್ಯ ತುಂಬಬೇಕು, ನಿರುದ್ಯೋಗಿ ಯುವ ಪದವೀಧರರಿಗೆ ಕೆಲಸ ಸಿಗುವವರೆಗೆ ಶಿಷ್ಯವೇತನದ ಮೂಲಕ ನೆರವಾಗಬೇಕೆಂದು ರಾಜ್ಯ ಸರ್ಕಾರ ಜನ ಕಲ್ಯಾಣದ ಪಂಚಗ್ಯಾರಂಟಿಗಳನ್ನು ಅಧಿಕಾರಕ್ಕೆ ಬಂದ ಮೊದಲ ಸಂಪುಟ ಸಭೆಯಲ್ಲಿ ಜಾರಿಗೊಳಿಸಿದೆ ಎಂದರು.
ಸಾಮಾಜಿಕ ಹಿತಾಸಕ್ತಿಗೆ ವಿರುದ್ಧವಾಗಿರುವ ವಿಪಕ್ಷದವರ ಯಾವುದೇ ಟೀಕೆಗೂ ಜಗ್ಗಲ್ಲ. ಹಾಗೆಯೇ ಯಾವುದೇ ಕಾರಣಕ್ಕೂ ಪಂಚಗ್ಯಾರಂಟಿಗಳನ್ನು ನಿಲ್ಲಿಸುವುದಿಲ್ಲ. ಹಿಂದೆ ಸಿದ್ದರಾಮಯ್ಯ ಅವರು ಮೊದಲ ಅವಧಿಯ ಸಿಎಂ ಆಗಿದ್ದ ಅವಧಿಯಲ್ಲಿ ಹಸಿವು ಮುಕ್ತ ಕರ್ನಾಟಕ ಘೋಷಣೆಯ ಅನ್ನಭಾಗ್ಯ ಯೋಜನೆಯನ್ನು ಜಾರಿಗೆ ತಂದಿದ್ದರು. ಅದನ್ನು ರಾಜ್ಯದ ಜನತೆ ಮಾತ್ರವಲ್ಲದೆ ದೇಶ ವಿದೇಶದಲ್ಲಿ ಮೆಚ್ಚುಗೆಗೆ ಪಾತ್ರವಾಗಿತ್ತು ಎಂದರು.
ಪಂಚ ಗ್ಯಾರಂಟಿಗಳ ಜಾರಿ ಪೈಕಿ ತುಮಕೂರು ಜಿಲ್ಲೆಯೊಂದರಲ್ಲಿ ಗೃಹಲಕ್ಷ್ಮಿ ಯೋಜನೆಯಡಿ 6.19 ಲಕ್ಷ ಫಲಾನುಭವಿಗಳಿಗೆ 3,167 ಕೋಟಿ ಹಣ ವರ್ಗಾವಣೆ ಮಾಡಲಾಗಿದೆ, ತನ್ನನ್ನು ವಿಧಾನಸಭಾ ಚುನಾವಣೆ ಸಂದರ್ಭದಲ್ಲಿ ಪ್ರಣಾಳಿಕೆ ಸಮಿತಿ ಅಧ್ಯಕ್ಷರಾಗಿಸಿದ ಎಐಸಿಸಿ ವರಿಷ್ಠರು, ಸಿಎಂ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷರ ಸಹಕಾರದಿಂದ ಈ ಮಹತ್ವದ ಪಂಚಗ್ಯಾರಂಟಿಗಳ ಘೋಷಣೆ ಸಾಧ್ಯವಾಯಿತು. ಚುನಾವಣೆ ಪ್ರಚಾರದಲ್ಲಿ ಗ್ಯಾರಂಟಿ ಕಾರ್ಡ್ ಕೊಟ್ಟಾಗ ಜನಮೊದಲು ನಗುತ್ತಿದ್ದರು. ಇದು ಚುನಾವಣೆ ಗಿಮಿಕ್ ಎನ್ನುತ್ತಿದ್ದರು. ನಮ್ಮ ಸರ್ಕಾರ ಅಧಿಕಾರಕ್ಕೆ ಬಂದು ನುಡಿದಂತೆ ನಡೆದ ಮೇಲೆ ಬಿಸಾಡಿದ್ದ ಗ್ಯಾರಂಟಿ ಕಾರ್ಡ್‌ಗಳನ್ನು ಎತ್ತಿಡುವ ಕಾರ್ಯ ಮಾಡಿದರು. ಇದು ಗ್ಯಾರಂಟಿ ಸತ್ವ, ಶಕ್ತಿ, ಮಹತ್ವ ಎಂದರಲ್ಲದೇ, ಗ್ಯಾರಂಟಿ ಸಮಾವೇಶವನ್ನು ಅತ್ಯಂತ ವ್ಯವಸ್ಥಿತವಾಗಿ ಡಿಸಿ, ಸಿಇಒ ಹಾಗೂ ಜಿಲ್ಲಾ ಗ್ಯಾರಂಟಿ ಅನುಷ್ಠಾನ ಪ್ರಾಧಿಕಾರ ಸಮಿತಿಯ ಶ್ರಮಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು.

ಇನ್ನೂ, ರಾಜ್ಯ ಗ್ಯಾರಂಟಿ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ಎಚ್.ಎಂ.ರೇವಣ್ಣ ಮಾತನಾಡಿ, ದಶಕದ ಹಿಂದೆ ದೇಶದಲ್ಲಿ ಗುಜರಾತ್ ಮಾದರಿ ಎನ್ನಲಾಗುತ್ತಿತ್ತು. ಆದರೆ ಗ್ಯಾರಂಟಿಗಳ ಅನುಷ್ಠಾನದ ಮೇಲೆ ಕರ್ನಾಟಕ ಮಾದರಿ ಎನ್ನುತ್ತಾ ಮಹಾರಾಷ್ಟ್ರ, ಬಿಹಾರ, ತೆಲಂಗಾಣ, ಮಧ್ಯಪ್ರದೇಶ ಸೇರಿ ಹಲವು ರಾಜ್ಯಗಳಲ್ಲಿ ಅನುಷ್ಠಾನಗೊಳಿಸಲಾಗುತ್ತಿದೆ. ರಾಜ್ಯ ಸರ್ಕಾರ ಈವರೆಗೆ ಗ್ಯಾರಂಟಿ ಯೋಜನೆಗಳ ಮೂಲಕ 1.19 ಲಕ್ಷ ಕೋಟಿ ಹಣವನ್ನು ನೇರವಾಗಿ ಫಲಾನುಭವಿಗಳಿಗೆ ಸಿಗುವಂತೆ ಮಾಡಿದೆ. ಇದಕ್ಕಾಗಿ ಸಿಎಂ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್, ಪ್ರಣಾಳಿಕೆ ಸಮಿತಿ ಅಧ್ಯಕ್ಷರಾಗಿದ್ದ ಡಾ.ಜಿ.ಪರಮೇಶ್ವರ ಅವರಿಗೆ ಕೃತಜ್ಞತೆ ಸಲ್ಲಿಸುವೆ. ಗ್ಯಾರಂಟಿ ಯೋಜನೆಯ ಸತ್ಯ ಫಲಾನುಭವಿಗಳನ್ನು ಕೈ ಬಿಡುವ ಕೆಲಸ ಸಮರ್ಪಕವಾಗಿ ಆಗಬೇಕು. ಗ್ಯಾರಂಟಿ ಯೋಜನೆ ಪ್ರಚಾರವನ್ನು ಮನೆ ಮನೆಗೆ ತಲುಪಿಸುವ ಕಾರ್ಯ ಮಾಡಿ ಎಂದರು.
ಈ ಸಂದರ್ಭದಲ್ಲಿ ಕರ್ನಾಟಕ ಸರ್ಕಾರದ ದೆಹಲಿ ವಿಶೇಷ ಪ್ರತಿನಿಧಿಗಳಾದ ಟಿ.ಬಿ.ಜಯಚಂದ್ರ ಅವರು, ರಾಜ್ಯ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಉಪಾಧ್ಯಕ್ಷರಾದ ಎಸ್.ಆರ್.ಪಾಟೀಲ, ತುಮಕೂರು ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿಯ ಅಧ್ಯಕ್ಷರಾದ ಚಂದ್ರಶೇಖರ್ ಗೌಡ, ಬಿಎಂಟಿಸಿ ಉಪಾಧ್ಯಕ್ಷ ನಿಕೇತ್ ರಾಜ್ ಮೌರ್ಯ, ಜಿಲ್ಲಾಧಿಕಾರಿ ಶುಭ ಕಲ್ಯಾಣ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಬಿ.ವಿ.ಅಶ್ವಿಜ, ಎಸ್‌ಪಿ ಅಶೋಕ್ ಮುಂತಾದವರು ಉಪಸ್ಥಿತರಿದ್ದರು.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC


