ಕೊರಟಗೆರೆ : ತಾಲೂಕಿನ ಮಾವತ್ತೂರು ಗ್ರಾಮದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ವಾರ್ಷಿಕ ಸಾಮಾನ್ಯ ಸಭೆಗೆ ಸರ್ವ ಸದಸ್ಯರಿಗೆ ಆಹ್ವಾನ ಪತ್ರಿಕೆ ನೀಡದ ಕಾರಣಕ್ಕೆ ಸಭೆ ರದ್ದಾಗಿದೆ.
ಕೊರಟಗೆರೆ ತಾಲೂಕಿನ ಕೋಳಾಲ ಹೋಬಳಿ ಮಾವತ್ತೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ೨೦೨೪–೨೫ನೇ ಸಾಲಿನ ವಾರ್ಷಿಕ ಮಹಾಸಭೆಯನ್ನ ಏರ್ಪಡಿಸಲಾಗಿತ್ತು. ವಾರ್ಷಿಕ ಸಭೆ ನಡೆಸಲು ಸರ್ವ ಸದಸ್ಯರಿಗೆ ೧೫ ದಿನ ಮುಂಚೆಯೇ ಆಹ್ವಾನ ಪತ್ರಿಕೆ ನೀಡಬೇಕಾಗಿತ್ತು ಸಂಘದ ಎರಡು ಬಣದ ಸದಸ್ಯರ ನಡುವೆ ಮಾತಿನ ಜಟಾಪಟಿಯಿಂದ ರೈತರಿಗೆ ಸೇರಿದ ೩೦ ಸಾವಿರಕ್ಕೂ ಹೆಚ್ಚಿನ ಹಣ ಖರ್ಚು ಮಾಡಿ ಆಯೋಜಿಸಿದ್ದ ಸಭೆಯನ್ನ ರದ್ದುಪಡಿಸಲಾಗಿದೆ.
ರೈತರಿಗೆ ಕಳೆದ ೪ ವರ್ಷದಿಂದ ಸಹಕಾರ ಸಂಘದಿಂದ ಯಾವುದೇ ಸಾಲ ಸೌಲಭ್ಯ ನೀಡಲಾಗಿದೆ ಎಂದು ರೈತರ ಪಹಣಿಯಲ್ಲಿ ಉಲ್ಲೇಖವಾಗಿದೆ. ಹಾಗೂ ಒಂದು ಮೂಟೆ ಗೊಬ್ಬರವನ್ನು ಮಾರಾಟ ಮಾಡಿಲ್ಲ ಎಂದು ರೈತರು ಸಭೆಯಲ್ಲಿ ಸದಸ್ಯರನ್ನ ತರಾಟೆ ತೆಗೆದುಕೊಂಡರು. ಇದರ ಜೊತೆಗೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷರಾದ ಧನಂಜಯ ಅವರು ಸಂಘ ಸದಸ್ಯರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುವಲ್ಲಿ ಕಾರ್ಯನಿರ್ವಾಹಣಾಧಿಕಾರಿ ಮತ್ತು ಅಧ್ಯಕ್ಷರ ಬೇಜಾವಬ್ದಾರಿತನವೇ ಇಂದಿನ ಸಭೆ ರದ್ದಾಗಲು ಕಾರಣ ಎಂದು ರೈತರು ಬೇಸರ ವ್ಯಕ್ತಪಡಿಸಿದರು.
ವಿಎಸ್ ಎಸ್ ಎನ್ ಮಾಜಿ ಅಧ್ಯಕ್ಷ ಶಂಕರಣ್ಣ ಮಾತನಾಡಿ, ನಾಲ್ಕು ವರ್ಷದ ಹಿಂದೆ ನಾನು ಅಧ್ಯಕ್ಷ ಆಗಿದ್ದ ಸಂದರ್ಭದಲ್ಲಿ ಸಹಕಾರ ಸಂಘದ ಜಿಲ್ಲಾ ಅಧ್ಯಕ್ಷರಾದ ಕೆ.ಎನ್.ರಾಜಣ್ಣ ಅವರನ್ನ ಭೇಟಿ ಮಾಡಿ ಸಾಲ ಮಂಜೂರು ಮಾಡಿಕೊಂಡು ಬಂದಿದ್ದೆ. ಆದರೆ ಈಗಿನ ಅಧ್ಯಕ್ಷರಾದ ಧನಂಜಯ ಅವರು ಸ್ವಲ್ಪ ತಡವಾಗಿ ಸಾಲ ನೀಡಲಾಗುತ್ತದೆ ಎಂದು ತಿಳಿಸಿದಾಗ ಕೆ.ಎನ್.ರಾಜಣ್ಣ ಅವರ ಅಪ್ಪನ ಮನೆಯಿಂದ ಸಾಲ ಕೊಡಲ್ಲ ಎಂದು ಉದ್ದಟನದ ಮಾತಿನಿಂದ ಇಲ್ಲಿಯವರೆಗೂ ನಮ್ಮ ಸಂಘಕ್ಕೆ ಒಂದು ರೂಪಾಯಿ ಸಾಲ ಮಂಜೂರು ಆಗಿಲ್ಲ ಎಂದು ತಿಳಿಸಿದರು.
ಡಿಸಿಸಿ ಬ್ಯಾಂಕ್ ಮೇಲ್ವಿಚಾರಕರಾದ ಬೋರಣ್ಣ ಮಾತನಾಡಿ ೨೦೨೪– ೨೫ನೇ ಸಾಲಿನ ವಾರ್ಷಿಕ ಸಾಮಾನ್ಯ ಮಹಾಸಭೆಯನ್ನ ಆಯೋಜನೆ ಮಾಡಲಾಗಿತ್ತು. ಸಹಕಾರ ಸಂಘದ ಸದಸ್ಯರಿಗೆ ಆಹ್ವಾನ ಪತ್ರಿಕೆ ನೀಡಿಲ್ಲ ಎಂದು ಸಭೆಯಲ್ಲಿ ತಿಳಿಸಲಾಗಿದೆ. ನನಗೂ ಸಹ ಯಾವುದೆ ಆಮಂತ್ರಣ ನೀಡಿಲ್ಲ. ಸಂಘದ ಆಡಳಿತ ಮಂಡಳಿ ರೈತರ ಪಹಣಿಯಲ್ಲಿ ಸಾಲ ಮಂಜೂರು ಆಗಿರುವುದು ನನ್ನ ಗಮನಕ್ಕೆ ಬಂದಿದೆ. ಈ ಹಿಂದೆ ಸಾಲ ನೀಡುವ ಸಂದರ್ಭದಲ್ಲಿ ಪಹಣಯಲ್ಲಿ ಸಾಲ ಮಂಜೂರು ಆಗಿದೆ ಎಂದು ಬಂದಿದ್ದು, ನಾನೇ ಖುದ್ದು ನಿಂತು ಅದನ್ನ ತೆಗೆಸಲಾಗುವುದು. ಸಭೆ ರದ್ದಾದ ವಿಷಯವನ್ನ ನಮ್ಮ ಮೇಲಾಧಿಕಾರಿಗಳ ಗಮನಕ್ಕೆ ತರಲಾಗಿದೆ.
ಮಾವತ್ತೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಧನಂಜಯ ಮಾತನಾಡಿ, ನಮ್ಮ ಮನೆಯ ಸದಸ್ಯರಿಗೆ ಆರೋಗ್ಯದ ಸಮಸ್ಯೆ ಇರುವ ಕಾರಣ ಮುಖ್ಯ ಕಾರ್ಯ ನಿರ್ವಹಣಾಧಿಕಾರಿಗಳಿಗೆ ವಾರ್ಷಿಕ ಸಭೆಯನ್ನ ಆಯೋಜನೆ ಮಾಡಲು ತಿಳಿಸಲಾಗಿತ್ತು. ವಾರ್ಷಿಕ ಸಭೆ ಮಾಡಲು ಎಂಟು ಜನರ ಹಾಜರಾತಿಯಿಂದಲೇ ಸಭೆಯನ್ನ ಆಯೋಜನೆ ಮಾಡಲಾಗಿದೆ. ಸದಸ್ಯರಿಗೆ ಆಹ್ವಾನ ಪತ್ರಿಕೆ ನೀಡಿಲ್ಲ ಎಂದು ದೂರಿದ್ದಾರೆ. ಅದ್ದರಿಂದ ಸಭೆಯನ್ನ ಮುಂದೂಡಲಾಗಿದೆ.
ಗ್ರಾಪಂ ಸದಸ್ಯ ಹಾಗೂ ವಿಎಸ್ ಎಸ್ ಎನ್ ನಿರ್ದೇಶಕ ಮಂಜುನಾಥ್ ಮಾತನಾಡಿ, ಸಂಘದ ಕಾರ್ಯನಿರ್ವಾಹಣಾಧಿಕಾರಿ ಮತ್ತು ಅಧ್ಯಕ್ಷರ ಬೇಜವಾಬ್ದಾರಿತನವೇ ಇಂದಿನ ಸಭೆ ರದ್ದಾಗಲು ಕಾರಣ. ಸದಸ್ಯರಿಗೆ ಆಹ್ವಾನ ಪತ್ರಿಕೆ ನೀಡಿಲ್ಲ ಎಂದು ಸಭೆ ರದ್ದಾಗಿದೆ. ನಿರ್ದೇಶಕರ ಸಭೆಯನ್ನ ಕರೆಯದೆ ಏಕಾ ಚಕ್ರಾಧಿಪತ್ಯ ಧೋರಣೆಯಿಂದ ಇಷ್ಟೇಲ್ಲ ಬೆಳವಣಿಗೆ ಆಗುತ್ತಿದೆ. ನಮ್ಮ ಭಾಗದ ರೈತರಿಗೆ ಒಂದು ಮೂಟೆ ಗೊಬ್ಬರ ಆಗಲಿ ಸಾಲವಾಗಲಿ ನೀಡಿಲ್ಲ. ಡಿಸಿಸಿ ಬ್ಯಾಂಕ್ ಅಧ್ಯಕ್ಷರಾದ ಕೆ.ಎನ್.ರಾಜಣ್ಣ ಅವರನ್ನ ಅಪ್ಪನ ಮನೆಯಿಂದ ಸಾಲ ಕೊಡಲ್ಲ ಎಂದು ನಾಲ್ಕು ವರ್ಷದ ಹಿಂದೆ ಮಾತನಾಡಿದ್ದಾರೆ. ಆದ್ದರಿಂದ ಇಲ್ಲಿಯವರೆಗೂ ನಮ್ಮ ಸಂಘಕ್ಕೆ ಸಾಲ ಮಂಜೂರಾಗಿಲ್ಲ ಎಂದು ಅಧ್ಯಕ್ಷರ ವಿರುದ್ದ ಆರೋಪ ಮಾಡಿದರು.
ಈ ಹಿಂದೆ ರೈತರಿಗೆ ಸಾಲ ಮಂಜೂರು ಮಾಡಲು ಸಲುವಾಗಿ ರೈತರ ಪಹಣಿಯಲ್ಲಿ ಸಾಲ ನೀಡಲಾಗಿದೆ ಎಂದು ನಮೂದಿಸಲಾಗಿದೆ. ಅದನ್ನ ಆದಷ್ಟು ಬೇಗ ತೆಗಿಸಲಾಗುವುದು, ಡಿಸಿಸಿ ಬ್ಯಾಂಕ್ ಜಿಲ್ಲಾ ಅಧ್ಯಕ್ಷರಾದ ಕೆ.ಎನ್.ರಾಜಣ್ಣ ಅವರ ಅಪ್ಪನ ಮನೆಯಿಂದ ಸಾಲ ಕೊಡಲ್ಲ ಎಂದು ಅವರಿಗೆ ಅವಮಾನ ಮಾಡುವ ರೀತಿ ನಾನು ಮಾತನಾಡಿಲ್ಲ, ನನ್ನ ವಿರೋಧಿಗಳು ಇಲ್ಲಸಲ್ಲದ ಆರೋಪ ಮಾಡುತ್ತಿದ್ದಾರೆ.
— ಧನಂಜಯ ವಿಎಸ್ ಎಸ್.ಎನ್. ಅಧ್ಯಕ್ಷ ಮಾವತ್ತೂರು.
ಸಭೆಯಲ್ಲಿ ಸಂಘದ ಸಿಇಒ ತಿಮ್ಮಯ್ಯ, ಉಪಾಧ್ಯಕ್ಷ ನರಸಿಂಹಮೂರ್ತಿ ನಿರ್ದೇಶಕರಾದ ಮತ್ತರಾಜು, ಪ್ರಕಾಶ್, ಮಂಜುನಾಥ್, ನವೀನ್‌ಕುಮಾರ್, ರಂಗದಾಸಯ್ಯ, ರಮೇಶ್, ನಲ್ಲಪ್ಪ, ಪಾರ್ವತಮ್ಮ, ಭಾಗ್ಯಮ್ಮ, ಕೃಷ್ಣಪ್ಪ, ಮುಖಂಡರಾದ ವೆಂಕಟಗೌಡ, ಮಂಜುನಾಥ್, ನರಸೇಗೌಡ, ಸೇರಿದಂತೆ ಇತರರು ಇದ್ದರು.
ವರದಿ: ಮಂಜುಸ್ವಾಮಿ ಎಂ.ಎನ್.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC