ಗುಬ್ಬಿ: ತಾಲ್ಲೂಕಿನಲ್ಲಿ ಹೆದ್ದಾರಿ ಹಾಗೂ ವರ್ತುಲ ರಸ್ತೆಗಳ ಸಮೀಪದ ಗ್ರಾಮಸ್ಥರು ರಸ್ತೆಗಳ ಎರಡೂ ಬದಿಗಳಲ್ಲಿ ಹಾಗೂ ಹೆದ್ದಾರಿಯ ವಿಭಜಕಗಳ ಮಧ್ಯೆ ಬೆಳೆದಿರುವ ಹುಲ್ಲಿನಲ್ಲಿ ರಾಸುಗಳನ್ನು ಬಿಟ್ಟು ಮೇಯಿಸುತ್ತಿದ್ದು, ಇದರಿಂದ ಅಪಘಾತಗಳ ಹೆಚ್ಚಾಗಲು ಕಾರಣವಾಗುತ್ತಿದೆ ಎನ್ನುವ ಆರೋಪ ಕೇಳಿ ಬಂದಿದೆ.
ಈ ಮೊದಲೆಲ್ಲ ರೈತರು ತಮ್ಮ ಜಮೀನುಗಳಲ್ಲಿಯೇ ರಾಸುಗಳನ್ನು ಮೇಯಿಸುತ್ತಿದ್ದರು. ಜಮೀನು ಬದುಗಳಲ್ಲಿ ವಿವಿಧ ರೀತಿಯ ಗಿಡ, ಹುಲ್ಲುಗಳನ್ನು ತಿನ್ನುತ್ತಿದ್ದರಿಂದ ರಾಸುಗಳ ಆರೋಗ್ಯವು ಉತ್ತಮವಾಗಿರುತ್ತಿತ್ತು. ಜೊತೆಗೆ ಗುಣಮಟ್ಟದ ಹಾಲನ್ನು ಪಡೆಯಲು ಸಾಧ್ಯವಾಗುತ್ತಿತ್ತು. ಇತ್ತೀಚೆಗೆ ಹೆದ್ದಾರಿ ಹಾಗೂ ವರ್ತುಲ ರಸ್ತೆಗಳ ಬದಿಗಳಲ್ಲಿ ಹುಲ್ಲು ಸೊಗಸಾಗಿ ಬೆಳೆಯುತ್ತಿರುವುದರಿಂದ, ರಾಸುಗಳನ್ನು ಸುಲಭವಾಗಿ ಮೇಯಿಸಬಹುದು ಎಂಬ ಕಾರಣಕ್ಕಾಗಿ ರೈತರು ಅಲ್ಲಿಗೆ ಮೊರೆಹೋಗುತ್ತಿದ್ದಾರೆ.
ಹೆದ್ದಾರಿ ಹಾಗೂ ವರ್ತುಲ ರಸ್ತೆಗಳಲ್ಲಿ ವಾಹನ ಸಂಚಾರ ಹೆಚ್ಚಾಗಿರುವ ಜೊತೆಗೆ ವಾಹನಗಳು ವೇಗವಾಗಿ ಸಾಗುತ್ತಿರುವಾಗ ರಾಸುಗಳು ಅಡ್ಡಬಂದು ಅಪಘಾತಗಳು ಹೆಚ್ಚಾಗುತ್ತಿವೆ. ಇದರಿಂದ ರೈತರು ಹಾಗೂ ವಾಹನ ಸವಾರರಿಬ್ಬರೂ ತೊಂದರೆ ಅನುಭವಿಸುವಂತೆ ಆಗುತ್ತಿದೆ. ರಸ್ತೆ ವಿಭಜಕದ ಮಧ್ಯದಲ್ಲಿ ಮೇಯುತ್ತಿರುವ ರಾಸುಗಳು ವಾಹನಗಳು ಸಂಚರಿಸುವಾಗ ಅಡ್ಡ ಬಂದು ಅನೇಕ ದ್ವಿಚಕ್ರ ವಾಹನ ಸವಾರರು ಬಿದ್ದು ಆಸ್ಪತ್ರೆ ಸೇರಿರುವ ನಿದರ್ಶನಗಳಿವೆ ಎನ್ನುವ ಆರೋಪಗಳು ಕೇಳಿ ಬಂದಿವೆ.
ಹೆದ್ದಾರಿಯ ಬದಿಯಲ್ಲಿರುವ ಹುಲ್ಲುಗಳಲ್ಲಿ ವಾಹನದ ಹೊಗೆ, ಧೂಳು ಸೇರಿಕೊಳ್ಳುತ್ತಿವೆ. ಇದನ್ನು ಸೇವಿಸುವ ಹಸುಗಳಿಗೂ ಆಪತ್ತು, ಇನ್ನೊಂದೆಡೆ ಜನರು ಅಪಘಾತಕ್ಕೀಡಾಗುವ ಘಟನೆಗಳು ಕೂಡ ನಡೆಯುತ್ತಿದ್ದು, ಇವೆರಡನ್ನು ತಪ್ಪಿಸುವಂತೆ ಒತ್ತಾಯ ಕೇಳಿ ಬಂದಿದೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC