ಸರಗೂರು: ಕಾಡುಪ್ರಾಣಿಗಳ ಹಾವಳಿ ತಡೆಗೆ ಶಾಶ್ವತ ಪರಿಹಾರ ನೀಡಬೇಕು, ಸೇರಿದಂತೆ ತಮ್ಮ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ರೈತರು ಲಂಕೆ ಗ್ರಾಮಸ್ಥರು, ಕರ್ನಾಟಕ ರಾಜ್ಯ ರೈತ ಕಲ್ಯಾಣ ಸಂಘದ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿದರು.
ಸೋಮವಾರ ಪಟ್ಟಣದ ಸರಗೂರು ವಲಯ ಕಚೇರಿ ಬಳಿ ಜಮಾಯಿಸಿದ ಪ್ರತಿಭಟನಕಾರರು, ರೈತರ ಜಮೀನುಗಳು ಕಾಡಂಚಿನ ಭಾಗಗಳಲ್ಲಿದ್ದು, ಈ ಭಾಗದಲ್ಲಿ ಬೆಳೆಯುವ ಹತ್ತಿ, ಜೋಳ, ಬಾಳೆ, ಕಬ್ಬು, ರಾಗಿ, ಭತ್ತ, ತೊಗರಿ, ತೋಟಗಾರಿಕ ಬೆಳೆಗಳು, ತರಕಾರಿ ಬೆಳೆಗಳಿಗೆ ಕಾಡುಪ್ರಾಣಿಗಳು ಹಾನಿ ಮಾಡುತ್ತಿವೆ. ಚಿಕ್ಕದೇವಮ್ಮನ ಬೆಟ್ಟದಲ್ಲಿ ಬೀಡು ಬಿಟ್ಟಿರುವ ಕಾಡಾನೆ ಹಾವಳಿ ತಡೆಗೆ ಅಧಿಕಾರಿಗಳು ಮುಂದಾಗಬೇಕು ಎಂದು ಒತ್ತಾಯಿಸಿ ಅರಣ್ಯ ಇಲಾಖೆ ಅಧಿಕಾರಿಗಳ ವಿರುದ್ಧ ವಿವಿಧ ಘೋಷಣೆ ಕೂಗುವ ಮೂಲಕ ತಮ್ಮ ಆಕ್ರೋಶವ್ಯಕ್ತಪಡಿಸಿದರು. ಸ್ಥಳಕ್ಕೆ ಅರಣ್ಯ ಇಲಾಖೆಯ ಮೇಲಾಧಿಕಾರಿಗಳು ಆಗಮಿಸಬೇಕು ಎಂದು ಪಟ್ಟು ಹಿಡಿದರು.
ಮನುಗನಹಳ್ಳಿ ಗ್ರಾಪಂ ಉಪಾಧ್ಯಕ್ಷ ಲಂಕೆ ರಮೇಶ್ ಮಾತನಾಡಿ, ಕಾಡಂಚಿನ ಗ್ರಾಮಗಳಲ್ಲಿ ಅರಣ್ಯ ಇಲಾಖೆ ಅಧಿಕಾರಿಗಳು ಸೂಕ್ತ ರೀತಿಯಲ್ಲಿ ಕಾವಲು ಕಾಯಬೇಕು. ರೈಲ್ವೆ ಬ್ಯಾರಿಕೇಡ್ ನಿರ್ಮಿಸಬೇಕು. ಕಾಡಾನೆಗಳನ್ನು ಬೇರಡೆ ಸ್ಥಳಾಂತರಿಸಲು ಅಧಿಕಾರಿಗಳು ಕ್ರಮವಹಿಸಬೇಕು. ಕಾಡಾನೆಗಳ ಹಾವಳಿಯಿಂದಾದ ಬೆಳೆಗೆ ಸೂಕ್ತ ರೀತಿಯಲ್ಲಿ ಪರಿಹಾರ ನೀಡಬೇಕು ಎಂದು ಮನವಿ ಮಾಡಿದರು.
ಗ್ರಾ.ಪಂ. ಸದಸ್ಯ ಪುಟ್ಟು ಮಾತನಾಡಿ, ಕಾಡುಪ್ರಾಣಿಗಳ ಹಾವಳಿಯನ್ನು ತಡೆಗಟ್ಟಲು ಸರಕಾರ ಅನುದಾನ ಬಿಡುಗಡೆಗೊಳಿಸಿದ್ದರೂ ಯಾವುದೇ ಪ್ರಯೋಜನವಾಗುತ್ತಿಲ್ಲ. ಚಿಕ್ಕದೇವಮ್ಮನ ಬೆಟ್ಟದ ಸುತ್ತಲಿನ ಗ್ರಾಮಗಳಲ್ಲಿ ಕಾಡುಪ್ರಾಣಿಗಳ ಹಾವಳಿ ಜೋರಾಗಿದ್ದು, ತಡೆಗೆ ಇಲಾಖೆ ಹೆಚ್ಚಿನ ಸಿಬ್ಬಂದಿಯನ್ನು ನೇಮಿಸಬೇಕು ಎಂದು ಆಗ್ರಹಿಸಿದರು.
ಕರ್ನಾಟಕ ರಾಜ್ಯ ರೈತ ಕಲ್ಯಾಣ ಸಂಘದ ರಾಜ್ಯಾಧ್ಯಕ್ಷ ಭೂಮಿಪುತ್ರ ಚಂದನ್ ಗೌಡ ಮಾತನಾಡಿ, ಲಂಕೆ ಗ್ರಾಮದ ಕಾಡಂಚಿನಿಂದ ದಡದಹಳ್ಳಿ ಗ್ರಾಮದ ವರೆಗೆ ರೈಲ್ವೇ ಬ್ಯಾರಿಕೇಡ್ ಅಳವಡಿಸಬೇಕು. ಸೋಲಾರ್ ತಂತಿ ಅಳವಡಿಸಬೇಕು. ಸ್ಥಳದಲ್ಲಿಯೇ ಸೂಕ್ತ ರೀತಿಯಲ್ಲಿ ಬೆಳೆಗೆ ನಷ್ಟ ಭರಿಸಬೇಕು. ಓಂಕಾರ್ ಮತ್ತು ನುಗು ಜಲಾಶಯದಂಚಿನಲ್ಲಿ ಶಾಶ್ವತ ಯೋಜನೆ ರೂಪಿಸಬೇಕು. ರೈತರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಇಲಾಖೆ ಕ್ರಮವಹಿಸಬೇಕು ಎಂದು ಹೇಳಿದರು.
ಇದೇ ಸಂದರ್ಭ ರೈತರು ಡಿಸಿಎಫ್ ನಂದೀಶ್ ಲಕ್ಷ್ಮಣಶೆಟ್ಟಿ ಅವರಿಗೆ ಮನವಿ ಪತ್ರ ಸಲ್ಲಿಸಿದರು. ಮನವಿ ಸ್ವೀಕರಿಸಿ ಮಾತನಾಡಿದ ಡಿಸಿಎಫ್ ನಂದೀಶ್ ಲಕ್ಷಣಶೆಟ್ಟಿ, ಬೆಳೆ ಪರಿಹಾರ ಅರ್ಜಿಗಳು ವಿಲೇವಾಗಿದೆ ಅದನ್ನು ಇನ್ನೂ 15 ದಿನಗಳಲ್ಲಿ ಎಲ್ಲಾ ಅರ್ಜಿಗಳಿಗೆ ಪರಿಹಾರ ನೀಡಲಾಗುವುದು. ಆನೆಗಳನ್ನು ಬೇರಡೆ ಸ್ಥಳಾಂತರಿಸಲು ಕ್ರಮವಹಿಸಲಾಗುವುದು. ಇದಲ್ಲದೆ ಬ್ಯಾರಿಕೇಡ್ ನಿರ್ಮಾಣಕ್ಕೆ ಮುಂದಾಗಲಾಗುವುದು. ಈಗಾಗಲೇ ನೀಡಲಾದ ಬೇಡಿಕೆಗಳನ್ನು ಅರಣ್ಯ ಸಚಿವರು, ಮೇಲಾಧಿಕಾರಿಗಳ ಗಮನಕ್ಕೆ ತಂದು ಶಾಶ್ವತ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಕ್ರಮವಹಿಸಲಾಗುವುದು ಎಂದು ಭರವಸೆ ನೀಡಿದರು.
ಪ್ರತಿಭಟನೆಯಲ್ಲಿ ತಹಶೀಲ್ದಾರ್ ಮೋಹನಕುಮಾರಿ, ಎಸಿಎಫ್ ಗಳಾದ ಸುಮಿತ್ರಾ ಎಸ್.ಪರಮೇಶ್, ವೃತ್ತ ನಿರೀಕ್ಷಕ ಪ್ರಸನ್ನಕುಮಾರ್, ಗಂಗಾಧರ್, ಪಿಎಸ್ ಐಗಳಾದ ಕಿರಣ್, ಚಂದ್ರಹಾಸ, ಕ್ರೈಂ ಬ್ರಾಂಚ್ ಇನ್‌ಸ್ಪೆಕ್ಟರ್ ಗೋಪಾಲ್, ಆರ್ ಎಫ್ ಓಗಳಾದ ಮಹಾಲಕ್ಷ್ಮಿ, ವಿವೇಕ್, ಡಿಆರ್ ಎಫ್ ಓ ಅಕ್ಷಯ್ ಕುಮಾರ್, ದಿಲೀಪ್ ಕುಮಾರ್, ನೀತಿನ್ ಸೇರಿದಂತೆ ಕರ್ನಾಟಕ ರಾಜ್ಯ ರೈತ ಕಲ್ಯಾಣ ಸಂಘದ ಪದಾಧಿಕಾರಿಗಳು, ಲಂಕೆ, ಮನುಗನಹಳ್ಳಿ, ಹುಣಸಹಳ್ಳಿ, ಹೂವಿನಕೊಳ, ಅಲ್ಲಯ್ಯನಪುರ, ಬಸಾಪುರ, ಚಂದ್ರವಾಡಿ, ನಲ್ಲಿತಾಳಪುರ, ರಾಜೂರು, ಕಟ್ಟೆಹುಣಸೂರು, ನಂಜೀಪುರ, ಕುಂದೂರು, ಕಲ್ಲಂಬಾಳು, ದಡದಹಳ್ಳಿ ಹಾಗೂ ಕಾಡಂಚಿನ ಗ್ರಾಮಸ್ಥರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.
ವರದಿ: ಹಾದನೂರು ಚಂದ್ರ
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC