ತುಮಕೂರು: ನಡೆದಾಡುವ ದೇವರು, ಪರಮಪೂಜ್ಯ ಶ್ರೀ ಶ್ರೀ ಶ್ರೀ ಶಿವಕುಮಾರ ಸ್ವಾಮೀಜಿಗಳ ಜನ್ಮದಿನದ ಅಂಗವಾಗಿ ಸಿದ್ದಗಂಗಾ ಮಠದಲ್ಲಿಂದು ಅತ್ಯಂತ ಸಡಗರದ ನಾಮಕರಣ ಮಹೋತ್ಸವ ಜರುಗಿತು. ಈ ವಿಶೇಷ ಕಾರ್ಯಕ್ರಮದಲ್ಲಿ ಒಟ್ಟು 119 ನವಜಾತ ಶಿಶುಗಳಿಗೆ ಶಿವಕುಮಾರ ಶ್ರೀಗಳ ಹೆಸರನ್ನು ಇಡಲಾಯಿತು.
ಗಂಡು ಮಕ್ಕಳಿಗೆ ‘ಶಿವಕುಮಾರ’ ಮತ್ತು ಹೆಣ್ಣು ಮಕ್ಕಳಿಗೆ ‘ಶಿವಾನಿ’ ಎಂದು ನಾಮಕರಣ ಮಾಡಲಾಯಿತು. ಶ್ರೀ ಶಿವಕುಮಾರ ಸ್ವಾಮೀಜಿಗಳ ದಾಸೋಹ ಟ್ರಸ್ಟ್ ವತಿಯಿಂದ ಈ ಅರ್ಥಪೂರ್ಣ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.
ನಾಮಕರಣಗೊಂಡ ಪ್ರತಿಯೊಂದು ಮಗುವಿಗೂ ಮಠದ ವತಿಯಿಂದ ಒಂದು ತೊಟ್ಟಿಲು, ಬಟ್ಟೆಗಳು, ಹಾಸಿಗೆ–ದಿಂಬು ಹಾಗೂ ಸೊಳ್ಳೆ ಪರದೆಯನ್ನು ಉಚಿತವಾಗಿ ವಿತರಿಸಲಾಯಿತು.
ವಾಸ್ತವವಾಗಿ ಈ ನಾಮಕರಣ ಮಹೋತ್ಸವವು ಶಿವಕುಮಾರ ಶ್ರೀಗಳ ಜಯಂತಿಯಂದೇ ನಡೆಯಬೇಕಿತ್ತು. ಆದರೆ ಆ ದಿನ ರಾಷ್ಟ್ರಪತಿಗಳ ಭೇಟಿ ಮತ್ತು ಭದ್ರತಾ ಕಾರಣಗಳಿಂದಾಗಿ ಕಾರ್ಯಕ್ರಮಕ್ಕೆ ಅನುಮತಿ ಸಿಕ್ಕಿರಲಿಲ್ಲ. ಹೀಗಾಗಿ ಇಂದು (ಏಪ್ರಿಲ್ 5) ಮಠದ ಆವರಣದಲ್ಲಿ ಬಹಳ ಶ್ರದ್ಧಾ ಭಕ್ತಿಯಿಂದ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು.
ಮಕ್ಕಳೊಂದಿಗೆ ಆಗಮಿಸಿದ್ದ ನೂರಾರು ದಂಪತಿಗಳು ತಮ್ಮ ಮಕ್ಕಳಿಗೆ ‘ಕಾಯಕ ಯೋಗಿ’ಯ ಹೆಸರಿಡುವ ಮೂಲಕ ಧನ್ಯತಾ ಭಾವ ಮೆರೆದರು. ಮಠದ ಆವರಣದಲ್ಲಿ ಮಗುವಿನ ಅಳು ಹಾಗೂ ಪೋಷಕರ ಜಯಘೋಷಗಳ ನಡುವೆ ಹಬ್ಬದ ವಾತಾವರಣ ನಿರ್ಮಾಣವಾಗಿತ್ತು.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC


