ವಡ್ಡರಹಳ್ಳಿ ಗ್ರಾಮದ ಸರಹದ್ದಿಗೆ ಸೇರಿದ 23 ಎಕರೆ 30 ಗುಂಟೆ ವಿಸ್ತೀರ್ಣದ ಕೆರೆಯ ಹೂಳೆತ್ತಿ ಅಭಿವೃದ್ಧಿಪಡಿಸುವ ಕಾಮಗಾರಿಯು 75 ಲಕ್ಷ ರೂಪಾಯಿ ವೆಚ್ಚದಲ್ಲಿ ಸಣ್ಣ ನೀರಾವರಿ ಇಲಾಖೆಯ ವಿಶೇಷ ಅನುದಾನದಲ್ಲಿ ನಡೆಯುತ್ತಿದೆ. ಇದೀಗ ಕೆರೆ ಒತ್ತುವಾರಿ ತೆರವು ವಿಚಾರಕ್ಕೆ ಸಂಬಂಧಿಸಿದಂತೆ ಎರಡು ಬಣಗಳು ಹೊಡೆದಾಟ ನಡೆಸಿದ ಘಟನೆ ನಡೆದಿದೆ.
ಕೆರೆಯ ಒತ್ತುವರಿದಾರರು ಜೆಡಿಎಸ್ ಹಾಗೂ ಬಿಜೆಪಿ ಪಕ್ಷಗಳ ಕಾರ್ಯಕರ್ತರಾಗಿದ್ದು, ಒತ್ತುವರಿ ತೆರವು ಕಾರ್ಯಾಚರಣೆಯ ಸಂಬಂಧ ಪರಸ್ಪರ ಆರೋಪ ಪ್ರತ್ಯಾರೋಪಗಳು ಕೇಳಿ ಬಂದಿದ್ದವು. ವಡ್ಡರಹಳ್ಳಿ ಗ್ರಾಮದ ಕೆರೆಯ ಅಭಿವೃದ್ಧಿ ಕಾಮಗಾರಿಯ ವೀಕ್ಷಣೆ ನಡೆಸಿದ ತಹಶೀಲ್ದಾರ್ ನಿಸರ್ಗಪ್ರಿಯ ಅವರು, ಕೆರೆಯ ಒತ್ತುವರಿದಾರರು ಎಷ್ಟೇ ಪ್ರಭಾವಶಾಲಿಗಳಾಗಿದ್ದರೂ ಯಾವುದೇ ಮುಲಾಜಿಲ್ಲದೇ ತೆರವು ಕಾರ್ಯಾಚರಣೆ ನಡೆಸಲಾಗುವುದು ಎಂದು ಸ್ಪಷ್ಟಪಡಿಸಿದರಲ್ಲದೇ ಕೆರೆಯ ಒತ್ತುವರಿ ತೆರವಿಗೆ ಸೂಚಿಸಿ ತೆರಳಿದ್ದರು. ಇದೇ ವೇಳೆ ಕೆರೆಯ ಅಂಗಳದ ಅಕ್ಕಪಕ್ಕದ ಜಮೀನುಗಳಲ್ಲಿ ನೆರೆದಿದ್ದ ಎರಡೂ ಗ್ರಾಮಗಳ ಗ್ರಾಮಸ್ಥರು ಸೇರಿದಂತೆ ಜೆಡಿಎಸ್–ಬಿಜೆಪಿ ಕಾರ್ಯಕರ್ತರು ಆರೋಪ, ಪ್ರತ್ಯಾರೋಪ ಮಾಡಿದ್ದು, ಪರಿಸ್ಥಿತಿ ವಿಕೋಪಕ್ಕೆ ತಿರುಗಿ ಪರಸ್ಪರ ಹಲ್ಲೆ ನಡೆಸಿಕೊಂಡಿದ್ದಾರೆ.
ಗ್ರಾಮಸ್ಥರ ಹೊಡೆದಾಟದ ಮಾಹಿತಿ ತಿಳಿಯುತ್ತಿದ್ದಂತೆ ಕಿಕ್ಕೇರಿ ಪೋಲಿಸ್ ಠಾಣೆಯ ಇನ್ಸ್ಪೆಕ್ಟರ್ ರೇವತಿ, ಗ್ರಾಮಾಂತರ ಪೋಲಿಸ್ ಠಾಣೆಯ ಇನ್ಸ್ಪೆಕ್ಟರ್ ಜಗದೀಶ್ ಸ್ಥಳಕ್ಕೆ ಭೇಟಿ ನೀಡಿದ್ದು ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತಂದಿದ್ದಾರೆ.
ವರದಿ: ಮಂಜು ಶ್ರವಣೂರು


