ಬೆಂಗಳೂರು: ರಾಜ್ಯ ರಾಜಕಾರಣದಲ್ಲಿ ಸದ್ದು ಮಾಡುತ್ತಿರುವ ‘ಕಮಿಷನ್’ ಆರೋಪಗಳ ವಿಚಾರವಾಗಿ ವಿಧಾನಸಭೆ ಪ್ರತಿಪಕ್ಷ ನಾಯಕ ಆರ್. ಅಶೋಕ್ ಅವರು ಕಾಂಗ್ರೆಸ್ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ. ಗುತ್ತಿಗೆದಾರರ ಸಂಘ ಮಾಡಿರುವ ಭ್ರಷ್ಟಾಚಾರದ ಆರೋಪಗಳು ಸುಳ್ಳಾಗಿದ್ದರೆ, ಅವರ ಮೇಲೆ ಮಾನನಷ್ಟ ಮೊಕದ್ದಮೆ ಹೂಡಲಿ ಎಂದು ಅವರು ಸವಾಲು ಹಾಕಿದ್ದಾರೆ.
ಬುಧವಾರ ವಿಧಾನಸೌಧದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.
ಬಿಜೆಪಿ ಸರ್ಕಾರದ ಅವಧಿಯಲ್ಲಿ ಕಮಿಷನ್ ಆರೋಪ ಬಂದಾಗ ಯಾವುದೇ ಸಾಕ್ಷ್ಯ ಕೇಳದ ಕಾಂಗ್ರೆಸ್ ನಾಯಕರು, ಈಗ ತಮ್ಮ ಮೇಲೆ ಆರೋಪ ಬಂದಾಗ ಸಾಕ್ಷಿ ಕೇಳುತ್ತಿರುವುದು ಏಕೆ? ಎಂದು ಅವರು ಪ್ರಶ್ನಿಸಿದರು.
ಕಸದ ಟೆಂಡರ್ ಪಡೆಯಲು 7%, ಬಿಲ್ ಬಿಡುಗಡೆಗೆ 7% ಮತ್ತು ವಿಶೇಷ ಎಲ್ ಒಸಿ ಪಡೆಯಲು 7% ಹೀಗೆ ಒಟ್ಟು 21% ಕಮಿಷನ್ ನೀಡಬೇಕಾದ ಪರಿಸ್ಥಿತಿ ಇದೆ ಎಂದು ಅಶೋಕ್ ಗಂಭೀರವಾಗಿ ಆರೋಪಿಸಿದರು.
ರಾಜ್ಯದ ಪ್ರಮುಖ ಟೆಂಡರ್ ಗಳು ನೆರೆಯ ಆಂಧ್ರಪ್ರದೇಶದ ಗುತ್ತಿಗೆದಾರರ ಪಾಲಾಗುತ್ತಿವೆ. ಕೆಕೆಆರ್‌ಡಿಬಿ ಕಾಮಗಾರಿಗಳನ್ನು ಸ್ಥಳೀಯ ಗುತ್ತಿಗೆದಾರರಿಗೇ ನೀಡಬೇಕು ಎಂದು ಅವರು ಒತ್ತಾಯಿಸಿದರು.
ಮಾಧ್ಯಮಗಳ ಮೇಲಿನ ನಿರ್ಬಂಧ: ವಿಧಾನಸೌಧದಲ್ಲಿ ಮಾಧ್ಯಮಗಳ ಪ್ರವೇಶಕ್ಕೆ ನಿರ್ಬಂಧ ವಿಧಿಸಿರುವುದನ್ನು ಖಂಡಿಸಿದ ಅವರು, ಇದು ಪತ್ರಿಕಾ ಸ್ವಾತಂತ್ರ್ಯವನ್ನು ಹತ್ತಿಕ್ಕುವ ಪ್ರಯತ್ನ ಎಂದು ಟೀಕಿಸಿದರು.
ಬಿಜೆಪಿ–ಜೆಡಿಎಸ್ ಮೈತ್ರಿ: ಮುಂಬರುವ ಜಿಬಿಎ ಚುನಾವಣೆಗಳಲ್ಲಿ ಬಿಜೆಪಿ ಮತ್ತು ಜೆಡಿಎಸ್ ಮೈತ್ರಿಯಾಗಿ ಚುನಾವಣೆ ಎದುರಿಸಲಿವೆ. ಹೆಚ್.ಡಿ. ಕುಮಾರಸ್ವಾಮಿ ಅವರೊಂದಿಗೆ ಮಾತುಕತೆ ನಡೆದಿದ್ದು, ಸಣ್ಣಪುಟ್ಟ ಗೊಂದಲಗಳನ್ನು ಹೈಕಮಾಂಡ್ ಬಗೆಹರಿಸಲಿದೆ ಎಂದು ತಿಳಿಸಿದರು.
“ನಾವು ಸತ್ಯಹರಿಶ್ಚಂದ್ರನ ಮಕ್ಕಳು ಎಂದು ಹೇಳಿಕೊಳ್ಳುವ ಸಚಿವರು ಮೊದಲು ಈ ಭ್ರಷ್ಟಾಚಾರದ ಆರೋಪಗಳಿಗೆ ಸ್ಪಷ್ಟನೆ ನೀಡಬೇಕು” ಎಂದು ಅಶೋಕ್ ಆಗ್ರಹಿಸಿದ್ದಾರೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC


