ಹುಳಿಯಾರು: ಇಲ್ಲಿಗೆ ಸಮೀಪದ ದೊಡ್ಡಬಿದರೆಯ ಡಾ.ಗೇಟ್ ಸಮೀಪದ ತೆಂಗಿನ ತೋಟವೊಂದಕ್ಕೆ ಆಕಸ್ಮಿಕವಾಗಿ ಬೆಂಕಿ ತಗುಲಿದ್ದು, ಪರಿಣಾಮವಾಗಿ ಐದು ಎಕರೆ ಪ್ರದೇಶದಲ್ಲಿದ್ದ ಹತ್ತಾರು ತೆಂಗಿನ ಮರಗಳು ಹಾಗೂ ಜಾಲಿ ಮರಗಳು ಅಗ್ನಿಗೆ ಆಹುತಿಯಾಗಿವೆ.
ಮಧ್ಯಾಹ್ನ ಸುಮಾರು 3 ಗಂಟೆ ವೇಳೆಗೆ ಸರ್ವೆ ನಂಬರ್ 181 ರ ತಮ್ಮಯ್ಯ ಎಂಬುವವರ ತೋಟದಲ್ಲಿ ಮೊದಲು ಬೆಂಕಿ ಕಾಣಿಸಿಕೊಂಡಿದೆ. ವಿಪರೀತ ಬಿಸಿಲು ಹಾಗೂ ಗಾಳಿಯ ವೇಗಕ್ಕೆ ಬೆಂಕಿ ಕ್ಷಣಾರ್ಧದಲ್ಲಿ ವ್ಯಾಪಿಸಿ, ರಸ್ತೆಯ ಮತ್ತೊಂದು ಬದಿಯ ಸರ್ವೆ ನಂಬರ್ 200 ಹಾಗೂ 75 ರ ಜಮೀನುಗಳಿಗೂ ಕಿಡಿ ಹಾರಿ ಕೆಲವು ಮರಗಳು ಸುಟ್ಟು ಹೋಗಿವೆ. ಅಗ್ನಿಶಾಮಕ ದಳ ಸಕಾಲಕ್ಕೆ ತಲುಪದ ಕಾರಣ ಬೆಂಕಿ ನಂದಿಸಲಾಗದೇ ರೈತರು ಸಂಕಷ್ಟಕ್ಕೆ ಸಿಲುಕಿದರು.
ಬೆಂಕಿಯಿಂದಾಗಿ ಹಬ್ಬಿದ ಹೊಗೆಯ ದಟ್ಟ ಕಾರ್ಮೋಡಗಳನ್ನು ಕಂಡು ಸುತ್ತಮುತ್ತಲಿನ ಗ್ರಾಮಸ್ಥರು ಆತಂಕಕ್ಕೊಳಗಾದರು. ಸಾರ್ವಜನಿಕರು ತಕ್ಷಣ ಅಗ್ನಿಶಾಮಕ ದಳಕ್ಕೆ ಕರೆ ಮಾಡಿದರೂ, ವಾಹನ ಬರಲು ಒಂದು ಗಂಟೆ ತಡವಾಯಿತು. ಈ ವಿಳಂಬದಿಂದಾಗಿ ಬೆಂಕಿಯನ್ನು ಹತೋಟಿಗೆ ತರುವ ಹೊತ್ತಿಗೆ ತೋಟದ ಬಹುಭಾಗ ಸುಟ್ಟು ಕರಕಲಾಗಿತ್ತು.
ಇದೇ ಜಾಗದಲ್ಲಿ ಕಳೆದ ಒಂದು ವಾರದಲ್ಲಿ ಸಂಭವಿಸುತ್ತಿರುವ ಮೂರನೇ ಬೆಂಕಿ ಅವಘಡ ಇದಾಗಿದೆ. ಪದೇ ಪದೇ ಬೆಂಕಿ ಬೀಳುತ್ತಿದ್ದರೂ, ಅಗ್ನಿಶಾಮಕ ವ್ಯವಸ್ಥೆಯ ಕೊರತೆಯಿಂದಾಗಿ ಗ್ರಾಮಸ್ಥರು ಬೆಂಕಿ ನಂದಿಸಲಾಗದೆ ಅಸಹಾಯಕರಾಗಿ ನಿಲ್ಲುವಂತಾಗಿದೆ. ಅಗ್ನಿಶಾಮಕ ವಾಹನವು ದುಗಡಿಹಳ್ಳಿಗೆ ತೆರಳಿದ್ದರಿಂದ ಘಟನಾ ಸ್ಥಳಕ್ಕೆ ಬರಲು ವಿಳಂಬವಾಯಿತು. ಇರುವ ಒಂದು ವಾಹನದಲ್ಲಿ ನೀರು ಖಾಲಿಯಾದಲ್ಲಿ ಮತ್ತೆ ತುಂಬಿಸಿಕೊಂಡು ಬರುವಷ್ಟರಲ್ಲಿ ಹಾನಿಯ ಪ್ರಮಾಣ ದುಪ್ಪಟ್ಟಾಗಿತ್ತು.
ಚಿಕ್ಕನಾಯಕನಹಳ್ಳಿ ತಾಲ್ಲೂಕು ವಿಸ್ತಾರವಾಗಿದ್ದು, ಇಡೀ ತಾಲ್ಲೂಕಿಗೆ ಇರುವುದು ಕೇವಲ ಒಂದೇ ಅಗ್ನಿಶಾಮಕ ಠಾಣೆ. ಅಲ್ಲಿರುವುದೂ ಒಂದೇ ವಾಹನ. ದೊಡ್ಡಬಿದರೆಯಲ್ಲಿ ಬೆಂಕಿ ಬಿದ್ದ ಸಮಯದಲ್ಲಿ ಗೋಪಾಲಪುರ, ಕಾತ್ರಿಕೆಹಾಲ್ ಹಾಗೂ ಕೊಡಗೂರು ಗ್ರಾಮಗಳಿಂದಲೂ ಅಕಸ್ಮಿಕ ಬೆಂಕಿ ಅವಘಡದ ಕರೆಗಳು ಬಂದಿದ್ದವು. ಆದರೆ ಇದ್ದ ಒಂದೇ ವಾಹನ ಬೇರೆಡೆ ಕಾರ್ಯಾಚರಣೆಯಲ್ಲಿದ್ದ ಕಾರಣ ದೊಡ್ಡಬಿದರೆಗೆ ಬರಲು ತಡವಾಯಿತು.
ಜನವರಿ ಬಳಿಕ 173 ಬೆಂಕಿ ಕರೆ:
ಈ ವರ್ಷದ ಜನವರಿಯಿಂದ ಈವರೆಗೆ ಒಟ್ಟು 173 ಫೈರ್ ಕಾಲ್‌ಗಳು ಬಂದಿರುವುದು ತಾಲ್ಲೂಕಿನ ಭೀಕರ ಪರಿಸ್ಥಿತಿಗೆ ಸಾಕ್ಷಿ. ಕೂಡಲೇ ಸರ್ಕಾರ ಹುಳಿಯಾರಿನಲ್ಲಿ ಠಾಣೆ ಸ್ಥಾಪಿಸಿ, ಹೆಚ್ಚುವರಿ ವಾಹನಗಳನ್ನು ನಿಯೋಜಿಸಬೇಕಿದೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC


