ಪಾವಗಡ: ತಾಲೂಕಿನ ಕಾರನಾಗನಹಟ್ಟಿ ಗ್ರಾಮದಲ್ಲಿ ಅಗ್ನಿಅವಘಡವೊಂದು ಸಂಭವಿಸಿದ್ದು, ಗ್ರಾಮದ ಬಡನಾಗಪ್ಪ ಎನ್ನುವವರ ಹುಲ್ಲಿನ ಬಣವೆಗೆ ಬೆಂಕಿ ಬಿದ್ದ ಪರಿಣಾಮ ಹುಲ್ಲಿನ ಬಣವೆ ಸಮೀಪದಲ್ಲಿ ಕಟ್ಟಿ ಹಾಕಿದ್ದ ಐದು ಹಸುಗಳ ಪೈಕಿ ಒಂದು ಹಸು ಸಜೀವ ದಹನವಾಗಿದೆ.
ಮತ್ತೊಂದು ಹಸು ಸಾವು ಬದುಕಿನ ನಡುವೆ ಹೋರಾಟ ನಡೆಸುತ್ತಿದೆ. ಹಸುಗಳನ್ನು ರಕ್ಷಿಸಲು ಬೆಂಕಿಗೆ ನುಗ್ಗಿದಂತಹ ರೈತ ಬಡನಾಗಪ್ಪ ಅವರಿಗೆ ಸುಟ್ಟ ಗಾಯಗಳಾಗಿದ್ದು ಅವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಪಾವಗಡ ಸಾರ್ವಜನಿಕ ಆಸ್ಪತ್ರೆಗೆ ರವಾನಿಸಲಾಗಿದೆ.
ಘಟನಾ ಸ್ಥಳದಲ್ಲಿ ರಾಸುಗಳ ಮೇವಿಗಾಗಿ ಸಂಗ್ರಹಿಸಿದ್ದ ಎರಡು ದೊಡ್ಡ ಹುಲ್ಲಿನ ಬಣವೆಗಳು ಸುಟ್ಟು ಹೋಗಿದ್ದು, ಇದರ ಪಕ್ಕದ ತೋಟದ ಮನೆಯಲ್ಲಿ ಶೇಖರಿಸಿದ್ದ ಶೇಂಗಾ, ಭತ್ತ ಹಾಗೂ ಇತರ ದವಸ ಧಾನ್ಯಗಳು ಸಹ ಬೆಂಕಿಯಲ್ಲಿ ಸುಟ್ಟು ಬೂದಿಯಾಗಿವೆ.
ಸಮೀಪದ ಬೆಟ್ಟಕ್ಕೆ ಹತ್ತಿಕೊಂಡಿದ್ದ ಬೆಂಕಿ ಏಕಾಏಕಿ ಇವರ ಹುಲ್ಲಿನ ಬಣವೆಗಳಿಗೆ ಆವರಿಸಿದೆ ಇದರಿಂದಾಗಿ ಸುಮಾರು ನಾಲ್ಕೈದು ಲಕ್ಷಕ್ಕೂ ಅಧಿಕ ನಷ್ಟ ಉಂಟಾಗಿದೆ ಎಂದು ಅಂದಾಜಿಸಲಾಗಿದೆ. ಸ್ಥಳಕ್ಕೆ ಪಶು ಸಂಗೋಪನಾ ಇಲಾಖೆಯ ಸಹಾಯಕ ನಿರ್ದೇಶಕ ಹೊರಕೆರಪ್ಪ ಅವರು ಭೇಟಿ ನೀಡಿ ಪರಿಶೀಲನೆ ನಡೆದಿದ್ದಾರೆ. ಅರಸೀಕೆರೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.
ವರದಿ: ನಂದೀಶ್ ನಾಯ್ಕ, ಪಾವಗಡ
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Bc4BbJiZ9pF3L0M4QgZdQ4