ಹಬ್ಬ ಹರಿದಿನಗಳಲ್ಲಿ ಪಟಾಕಿ ಸಿಡಿಸುವ ನಿಯಮವು ದೆಹಲಿಗೆ ಮಾತ್ರವಲ್ಲದೆ ಇಡೀ ರಾಜ್ಯಗಳಿಗೆ ಅನ್ವಯಿಸುತ್ತದೆ ಎಂದು ಸುಪ್ರೀಂ ಕೋರ್ಟ್ ಹೇಳಿದೆ. ವಾಯು ಮತ್ತು ಶಬ್ಧ ಮಾಲಿನ್ಯವನ್ನು ತಗ್ಗಿಸುವ ಸಂಬಂಧ ಸುಪ್ರೀಂ ಕೋರ್ಟ್‌ನ ಹಿಂದಿನ ಆದೇಶಗಳನ್ನು ಪಾಲಿಸುವಂತೆ ರಾಜಸ್ಥಾನ ರಾಜ್ಯಕ್ಕೆ ನಿರ್ದೇಶನ ನೀಡುವಂತೆ ಕೋರಿ ಸಲ್ಲಿಸಲಾದ ಅರ್ಜಿಯನ್ನು ಪರಿಗಣಿಸುವಾಗ ನ್ಯಾಯಾಲಯವು ಹೀಗೆ ಹೇಳಿದೆ.
ನ್ಯಾಯಮೂರ್ತಿಗಳಾದ ಎ.ಎಸ್. ಬೋಪಣ್ಣ ಮತ್ತು ಎಂ.ಎಂ. ಸುಂದ್ರೇಶ್ ಅವರನ್ನೊಳಗೊಂಡ ಪೀಠ ಅರ್ಜಿಯ ವಿಚಾರಣೆ ನಡೆಸಿತು. ಪಟಾಕಿಯಲ್ಲಿ ಬೇರಿಯಂ ಮತ್ತು ನಿಷೇಧಿತ ರಾಸಾಯನಿಕಗಳ ಬಳಕೆ ವಿರುದ್ಧ ಹಿಂದಿನ ನಿರ್ದೇಶನಗಳು ದೇಶಾದ್ಯಂತ ಅನ್ವಯಿಸುತ್ತವೆ ಎಂದು ನ್ಯಾಯಾಲಯ ಹೇಳಿದೆ. ಈ ವಿಷಯದ ಬಗ್ಗೆ ಯಾವುದೇ ಹೊಸ ಮಾರ್ಗಸೂಚಿಗಳ ಅಗತ್ಯವಿಲ್ಲ ಎಂದು ತಿಳಿಸಿದ ನ್ಯಾಯಾಲಯವು ಹಿಂದಿನ ಆದೇಶಗಳ ಬಗ್ಗೆ ನಿರ್ದಿಷ್ಟವಾಗಿ ಗಮನ ಹರಿಸುವಂತೆ ರಾಜಸ್ಥಾನ ರಾಜ್ಯಕ್ಕೆ ನಿರ್ದೇಶಿಸಿತು ಮತ್ತು ಅವು ದೇಶದ ಎಲ್ಲಾ ರಾಜ್ಯಗಳಿಗೂ ಅನ್ವಯಿಸುತ್ತವೆ ಎಂದು ಪುನರುಚ್ಚರಿಸಿತು.
ದೀಪಾವಳಿಗೆ ಮುನ್ನ ಪಟಾಕಿಗಳಲ್ಲಿ ಯಾವುದೇ ನಿಷೇಧಿತ ರಾಸಾಯನಿಕಗಳನ್ನು ಬಳಸದಂತೆ 2021 ರಲ್ಲಿ ಸುಪ್ರೀಂ ಕೋರ್ಟ್ ಹಲವಾರು ನಿರ್ದೇಶನಗಳನ್ನು ನೀಡಿತು. ಆಗ ಪಟಾಕಿಗಳ ಮೇಲೆ ಸಂಪೂರ್ಣ ನಿಷೇಧವಿಲ್ಲ ಮತ್ತು ಬೇರಿಯಂ ಸಾಲ್ಟ್ ಇರುವ ಪಟಾಕಿಗಳನ್ನು ಮಾತ್ರ ನಿಷೇಧಿಸಲಾಗಿದೆ ಎಂದು ಪೀಠ ಸ್ಪಷ್ಟಪಡಿಸಿತ್ತು.


