ಬೆಂಗಳೂರು: ಮಹಿಳೆಯರಿಗೆ ಮೀಸಲಾದ ‘ಶಕ್ತಿ ಯೋಜನೆ’ಯನ್ನು ದುರುಪಯೋಗಪಡಿಸಿಕೊಂಡು ಸಂಸ್ಥೆಗೆ ವಂಚಿಸುತ್ತಿದ್ದ ಬಿಎಂಟಿಸಿಯ ಐವರು ಕಂಡಕ್ಟರ್‌ಗಳನ್ನು ಅಮಾನತುಗೊಳಿಸಿ ಆದೇಶ ಹೊರಡಿಸಲಾಗಿದೆ. ಪುರುಷ ಪ್ರಯಾಣಿಕರಿಗೆ ಉಚಿತ ಟಿಕೆಟ್ ನೀಡಿ, ಅವರಿಂದ ಹಣ ಪಡೆದು ವೈಯಕ್ತಿಕವಾಗಿ ಜೇಬಿಗಿಳಿಸಿಕೊಳ್ಳುತ್ತಿದ್ದ ಗಂಭೀರ ಆರೋಪ ಇವರ ಮೇಲೆ ಸಾಬೀತಾಗಿದೆ.
ಬಿಎಂಟಿಸಿ ಸೆಕ್ಯೂರಿಟಿ ಅಧಿಕಾರಿಗಳ ತಪಾಸಣೆ ವೇಳೆ ಈ ಭಾರಿ ದಂಧೆ ಬಯಲಿಗೆ ಬಂದಿದೆ. ನಿಗಮಕ್ಕೆ ಸಲ್ಲಬೇಕಿದ್ದ ಟಿಕೆಟ್ ಹಣವನ್ನು ಪ್ರಯಾಣಿಕರಿಂದ ಪಡೆಯಲು ಕಂಡಕ್ಟರ್ ಗಳು ತಮ್ಮ ವೈಯಕ್ತಿಕ ಯುಪಿಐ (UPI) ಕ್ಯೂಆರ್ ಕೋಡ್ ಗಳನ್ನು ಬಳಸುತ್ತಿದ್ದರು. ಈ ಹಣ ನೇರವಾಗಿ ಅವರ ವೈಯಕ್ತಿಕ ಖಾತೆಗೆ ಜಮೆಯಾಗುತ್ತಿತ್ತು.
ಕನ್ನಡ ಓದಲು ಬಾರದ ಅಥವಾ ಯೋಜನೆಯ ಬಗ್ಗೆ ಸರಿಯಾದ ಮಾಹಿತಿ ಇಲ್ಲದ ಪ್ರಯಾಣಿಕರನ್ನೇ ಈ ತಂಡ ಗುರಿಯಾಗಿಸಿಕೊಂಡಿತ್ತು. ಪುರುಷರಿಗೆ ಶಕ್ತಿ ಯೋಜನೆಯ ‘ಶೂನ್ಯ ದರದ’ ಟಿಕೆಟ್ ನೀಡಿ, ಅವರಿಂದ ಪೂರ್ಣ ಪ್ರಮಾಣದ ಹಣ ವಸೂಲಿ ಮಾಡುತ್ತಿದ್ದರು. ಅಧಿಕಾರಿಗಳ ತನಿಖೆಯ ವೇಳೆ ಆರೋಪಿಗಳ ಖಾತೆಯಲ್ಲಿ ಸಾವಿರಾರು ರೂಪಾಯಿ ಪತ್ತೆಯಾಗಿದ್ದು, ಒಟ್ಟು 1,82,568 ರೂಪಾಯಿ ಬಿಎಂಟಿಸಿಗೆ ವಂಚಿಸಿರುವುದು ದೃಢಪಟ್ಟಿದೆ.
ಅಮಾನತುಗೊಂಡವರು:
- ಬೊಮ್ಮಲಿಂಗೇಶ್ ಸಿ (ಡಿಪೋ- 18): ಇವರಿಂದ 16,404 ರೂಪಾಯಿ ವಂಚನೆ ಪತ್ತೆಯಾಗಿದೆ.
- ಬ್ರಿಜೇಶ್ ಬಾಬು (ಡಿಪೋ- 51): ಇವರಿಂದ 9,795 ರೂಪಾಯಿ ವಂಚನೆ ಪತ್ತೆಯಾಗಿದೆ.
- ಎನ್. ಪ್ರಕಾಶ್ (ಡಿಪೋ- 06): ಇವರಿಂದ 6,312 ರೂಪಾಯಿ ವಂಚನೆ ಪತ್ತೆಯಾಗಿದೆ.
- ಸೂರ್ಯನಾರಾಯಣ (ಡಿಪೋ- 18): ಇವರಿಂದ 6,117 ರೂಪಾಯಿ ವಂಚನೆ ಪತ್ತೆಯಾಗಿದೆ.
- ಮೋಹನ್ (ಡಿಪೋ- 18): ಇವರಿಂದಲೂ 6,117 ರೂಪಾಯಿ ವಂಚನೆ ಪತ್ತೆಯಾಗಿದೆ.
ಈ ಹಿಂದೆಯೂ ಇದೇ ರೀತಿಯ ಪ್ರಕರಣಗಳಲ್ಲಿ ಬಿಎಂಟಿಸಿ ಕೆಲವು ಸಿಬ್ಬಂದಿಯನ್ನು ಅಮಾನತು ಮಾಡಿತ್ತು. ಸದ್ಯ ಈ ಐವರ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಲಾಗಿದ್ದು, ಈ ಜಾಲದ ಹಿಂದೆ ಬೇರೆ ಯಾರಾದರೂ ಇದ್ದಾರೆಯೇ ಎಂಬ ಬಗ್ಗೆ ತನಿಖೆ ಮುಂದುವರಿದಿದೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC


