ತುಮಕೂರು: ಜೀವ ಪರವಾದ ಸುಸ್ಥಿರ ಸಂಶೋಧನೆಗಳತ್ತ ಗಮನ ಹರಿಸುವ ಅಗತ್ಯವಿದೆ ಎಂದು ಕರ್ನಾಟಕ ವಿಜ್ಞಾನ ಹಾಗೂ ತಂತ್ರಜ್ಞಾನ ಅಕಾಡೆಮಿ ಅಧ್ಯಕ್ಷ ಪ್ರೊ.ಎ.ಎಚ್.ರಾಜಾಸಾಬ್ ಪ್ರತಿಪಾದಿಸಿದರು.
ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ‘ಸುಸ್ಥಿರ ಭವಿಷ್ಯಕ್ಕಾಗಿ ವಿಜ್ಞಾನ ಮತ್ತು ಸಮಾಜ’ ಕುರಿತು ವಿಚಾರ ಸಂಕಿರಣದಲ್ಲಿ ಮಾತನಾಡಿದರು.
ಸ್ವಾತಂತ್ರ್ಯದ ನಂತರ ದೇಶದ ಜನರ ಹಸಿವು ನೀಗಿಸಲು ಹಸಿರು ಕ್ರಾಂತಿ ಆರಂಭವಾಯಿತು. ಇದರ ಪರಿಣಾಮವಾಗಿ ಭಾರತ ಆಹಾರ ಕ್ಷೇತ್ರದಲ್ಲಿ ಸ್ವಾವಲಂಬನೆ ಸಾಧಿಸಿದೆ. ಆದರೆ ಅಂತರ್ಜಲದ ಅತಿಯಾದ ಬಳಕೆ, ರಾಸಾಯನಿಕ, ಹೈಬ್ರಿಡ್ ತಳಿ, ಕೀಟನಾಶಕ ಬಳಕೆಯ ಪರಿಣಾಮವಾಗಿ ಪರಿಸರ ನಾಶವಾಗಿದೆ. ಕುಡಿಯುವ ನೀರು ವಿಷವಾಗಿದೆ. ಇದೆಲ್ಲವನ್ನೂ ಗಮನಿಸಿದರೆ ಪರಿಸರ ಸ್ನೇಹಿ ಸಂಶೋಧನೆಗಳಿಗೆ ಒತ್ತು ನೀಡಬೇಕಿದೆ ಎಂದು ಹೇಳಿದರು.
ಕೃತಕ ಬುದ್ಧಿಮತ್ತೆ (ಎಐ) ಸಾಕಷ್ಟು ಸಮಸ್ಯೆಗಳನ್ನು ತಂದೊಡ್ಡುತ್ತಿದೆ. ವಿದ್ಯಾರ್ಥಿಗಳು ಬರೆದ ಸಂಶೋಧನಾ ಪ್ರಬಂಧಗಳಲ್ಲಿ ಯಾವುದು ಅಸಲಿ, ಯಾವುದು ನಕಲು ಎಂಬುದನ್ನು ಕಂಡುಹಿಡಿಯಲು ಹೊಸ ಸಂಶೋಧನೆ ಮಾಡುವಂತಹ ದುಃಸ್ಥಿತಿಗೆ ತಲುಪಿದ್ದೇವೆ ಎಂದು ಆತಂಕ ವ್ಯಕ್ತಪಡಿಸಿದರು.
ಕಾಲೇಜು ಶಿಕ್ಷಣ ಇಲಾಖೆ ಜಂಟಿ ನಿರ್ದೇಶಕ ರಾಮಕೃಷ್ಣಾರೆಡ್ಡಿ, ‘ಎ.ಐ.ನಿಂದ ಉದ್ಯೋಗ ನಷ್ಟ ಎನ್ನುವುದಕ್ಕಿಂತ, ಅಗತ್ಯಕ್ಕೆ ತಕ್ಕಂತೆ ಕೌಶಲ ರೂಢಿಸಿಕೊಂಡರೆ ಹೆಚ್ಚು ದಿನ ಉಳಿಯಲು ಸಾಧ್ಯ. ಕಾಲೇಜುಗಳಲ್ಲಿ ಗುಣಮಟ್ಟ ಹೆಚ್ಚಳಕ್ಕೆ ಒತ್ತು ನೀಡಲಾಗಿದ್ದು, ಇದಕ್ಕಾಗಿ 20 ಸಂಸ್ಥೆಗಳ ಜತೆಗೆ ಒಪ್ಪಂದ ಮಾಡಿಕೊಳ್ಳಲಾಗಿದೆ. ಅಜೀಂ ಪ್ರೇಮಜಿ ಫೌಂಡೇಷನ್ ಸಹಯೋಗದಲ್ಲಿ ಬೆಂಗಳೂರು ವಿಭಾಗದ 28 ಸಾವಿರ ವಿದ್ಯಾರ್ಥಿನಿಯರಿಗೆ ವಾರ್ಷಿಕ 730 ಸಾವಿರ ವಿದ್ಯಾರ್ಥಿ ವೇತನ ನೀಡುವ ಪ್ರಸ್ತಾವ ಸಲ್ಲಿಸಲಾಗಿದೆ’ ಎಂದು ಮಾಹಿತಿ ನೀಡಿದರು.
ಪದವಿ ಕಾಲೇಜು ಉಪನ್ಯಾಸಕರಿಗೆ ಸಾಕಷ್ಟು ಸೌಲಭ್ಯ ಕೊಡಲಾಗಿದೆ. ಆದರೆ ಆಧಾರ್ ಆಧಾರಿತ ಬಯೋಮೆಟ್ರಿಕ್ ಮಾಡುವಂತಹ ದುಃಸ್ಥಿತಿ ಬಂದಿದ್ದು ವಿಪರ್ಯಾಸ ಎಂದು ವಿಷಾದಿಸಿದರು.
ವಿಜ್ಞಾನಿ ವಿ.ಶೋಭಾ, ಕುವೆಂಪು ವಿ.ವಿ ಕುಲಪತಿ ಪ್ರೊ.ಶರತ್ ಅನಂತಮೂರ್ತಿ, ಕಾಲೇಜು ಪ್ರಾಂಶುಪಾಲರಾದ ಪ್ರೊ.ಟಿ.ಡಿ.ವಸಂತ, ಐಕ್ಯೂಎಸಿ ಸಂಯೋಜಕರಾದ ಕೆ.ವಿ.ಅನುಸೂಯ, ವಿಜ್ಞಾನ ಮತ್ತು ತಂತ್ರಜ್ಞಾನ ಅಕಾಡೆಮಿ ಸಿಇಒ ಆರ್.ಆನಂದ, ಸಂಘಟನಾ ಕಾರ್ಯದರ್ಶಿ ಫಾತಿಮ ಜಬೀನ್, ವಿಚಾರ ಸಂಕಿರಣದ ಸಂಯೋಜಕ ಎನ್.ಡಾ.ಯೋಗೀಶ್, ಬಿ.ಆರ್.ರೇಣುಕಾ ಪ್ರಸಾದ್ ಉಪಸ್ಥಿತರಿದ್ದರು.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC


