ಸರಗೂರು: ಪಟ್ಟಣ ತಹಶೀಲ್ದಾರ್ ಕಚೇರಿ ಮುಂಭಾಗದಲ್ಲಿ ಕರ್ನಾಟಕ ಜೀತದಾಳು ಮತ್ತು ಕೃಷಿ ಕಾರ್ಮಿಕರ ಒಕ್ಕೂಟ ಸರ್ಕಾರ ಫೆ.9 ರಿಂದ 18ರ ತನಕ ಆಚರಿಸುತ್ತಿರುವ ಜೀತಕಾರ್ಮಿಕ ಪದ್ಧತಿ ನಿರ್ಮುಲನಾ ದಿನಾಚರಣೆ ಕಾರ್ಯಕ್ರಮಕ್ಕೆ ವಿರೋಧ ವ್ಯಕ್ತಪಡಿಸಿತು.
ಇದೇ ವೇಳೆ ಗೇಟ್ 2 ತಹಶೀಲ್ದಾರ್ ಪರಶಿವಮೂರ್ತಿ ಅವರಿಗೆ ಪ್ರತಿಭಟನಾಕಾರರು ಮನವಿ ಸಲ್ಲಿಸಿದರು. ಒಕ್ಕೂಟದ ತಾಲೂಕು ಅಧ್ಯಕ್ಷ ಬಸವರಾಜು ತೆಲುಗು ಮಸಹಳ್ಳಿ ಮಾತನಾಡಿ, ಸಂಘಟನೆಯು ಕರ್ನಾಟಕ ರಾಜ್ಯಾಧ್ಯಂತ ಸುಮಾರು 35 ವರ್ಷಗಳಿಂದ ಸಾಮಾಜಿಕ, ಪಿಡುಗಾದ ಜೀತ ನಿರ್ಮೂಲನೆಗಾಗಿ ಹಗಲಿರುಳು ನಿರಂತರವಾಗಿ ಜಾಗೃತಿ ಮತ್ತು ಸಂಘಟನೆ ಕೆಲಸ ಮಾಡುತ್ತಾ ಬರುತ್ತಿದೆ, ಸಂಘಟನೆಯ ಅವಿರತ ಹೋರಾಟದ ಫಲವಾಗಿ ಮತ್ತು ಸಂಘಟನೆಯ ಪ್ರೇರಣೆಯಿಂದ ಸಾವಿರಾರು ಮಂದಿ ತಾವೇ ಸ್ವತಂತ್ರವಾಗಿ ಜೀತವಿಮುಕ್ತರಾಗಿ ಇಂದು ಸಮಾಜದ ಮುಖ್ಯವಾಹಿನಿಗೆ ಬಂದಿದ್ದಾರೆ. ಕರ್ನಾಟಕ ಸರ್ಕಾರದ ಜನಪರ ನಿಲುವುಗಳಲ್ಲಿ ಒಂದಾದ ಮತ್ತು ಸಂವಿಧಾನದ ಆಶಯವಾದ 1976 ರ ಜೀತ ಪದ್ಧತಿ ನಿರ್ಮೂಲನೆ ಕಾಯ್ದೆಯನ್ನು ಪರಿಣಾಮಕಾರಿಯಾಗಿ ಅನುಷ್ಠಾನ ಮಾಡುವ ನಿಟ್ಟಿನಲ್ಲಿ ತೆಗೆದುಕೊಂಡ ನಿಲುವುಗಳು ಶ್ಲಾಘನೀಯ ಎಂದರು.
ಒಕ್ಕೂಟದ ಉಪಾಧ್ಯಕ್ಷ ಸವಿತಾ ದೇವಲಾಪುರ ಮಾತನಾಡಿ, ಸಂವಿಧಾನದ ಆಶಯವಾದ 1976 ಅಕ್ಟೋಬರ್ 25 ರಂದು ಜಾರಿಗೆ ಬಂದು ಜೀತ ಪದ್ಧತಿ ನಿರ್ಮೂಲನಾ ದಿನವನ್ನು ಜೀವಿಕ ಮತ್ತು ಒಕ್ಕೂಟವು ಕಳೆದ 25 ವರ್ಷಗಳಿಂದಲೂ ಜೀತ ಪದ್ಧತಿ ಜಾಗೃತಿ ದಿನವೆಂದು ಆಚರಿಸುತ್ತಾ, ಇದರ ಅಂಗವಾಗಿ ಸರ್ಕಾರ ಮತ್ತು ಜೀತದಾಳುಗಳಲ್ಲಿ ಜಾಗೃತಿ ಮೂಡಿಸುವ ಸಲುವಾಗಿ ಜಿಲ್ಲೆ, ತಾಲ್ಲೂಕು, ರಾಜ್ಯ ಮಟ್ಟಗಳಲ್ಲಿ ಸಂವಾದ, ವಿಚಾರ ಸಂಕೀರಣ, ಧರಣಿ, ಪ್ರತಿಭಟನೆಯಂತಹ ಕಾರ್ಯಕ್ರಮಗಳ ಮೂಲಕ ಜಾಗೃತಿ ಮೂಡಿಸುತ್ತಾ ಬರುತ್ತಿದ್ದೇವೆ ಎಂದರು.
ಒಕ್ಕೂಟದ ತಾಲೂಕು ಸಂಚಾಲಕ ಶಿವರಾಜು ಮಾತನಾಡಿ, ಕರ್ನಾಟಕ ಸರ್ಕಾರವು ಯಾರದ್ದೋ ಒತ್ತಡಕ್ಕೆ ಮಣಿದು ಜೀತ ಪದ್ಧತಿ ರದ್ದತಿ ಕಾನೂನು ಜಾರಿಗೆ ಬಂದ ಅ.25 ರ ಬದಲು 2021–2024 ರ ಗೆಜೆಟೆಡ್ ಪ್ರಕಟಣೆ ಮೂಲಕ ಫೆಬ್ರವರಿ–9 ರಂದು ಆಚರಿಸುತ್ತಿರುವುದು ಸ್ಪಷ್ಟ ಜೀತ ಕಾನೂನಿಗೆ ವಿರೋಧ ಮತ್ತು ಉಲ್ಲಂಘನೆಯಾಗಿದೆ, ಕೂಡಲೇ ಈ ಪ್ರಕಟಣೆ ಮತ್ತು ಸರ್ಕಾರದ ಸುತ್ತೋಲನೆಯನ್ನು ರದ್ದುಪಡಿಸಿ ಅಕ್ಟೋಬರ್–25 ರಂದು ಆಚರಣೆ ಮಾಡಲು ಆದೇಶ ನೀಡಬೇಕು ಎಂದರು.
1976 ರ ಜೀತ ಪದ್ಧತಿ ನಿರ್ಮೂಲನೆ ಕಾಯ್ದೆ ಪರಿಣಾಮವಾಗಿ 2000 ದಿಂದ 2024 ರ ತನಕ ರಾಜ್ಯಾಧ್ಯಂತ ಸುಮಾರು 7000 ಮಂದಿ ಸರ್ಕಾರದಿಂದ ಅಧಿಕೃತವಾಗಿ ಜೀತವಿಮುಕ್ತಿ ಪ್ರಮಾಣ ಪತ್ರ ಪಡೆದಿರುವುದು ಸರಿಯಷ್ಟೆ. ಆದರೆ ಜೀತ ಪದ್ದತಿ ರದ್ದತಿ ಕಾನೂನಿನ ಪ್ರಕಾರ ಹಾಗೂ ಕರ್ನಾಟಕ ಸರ್ಕಾರದ 2008 ರ ಕ್ರಿಯಾ ಯೋಜನೆ ಪ್ರಕಾರ ಸಿಗಬೇಕಾದ ಸಮಗ್ರ ಪುನರ್ವಸತಿ ಅಂದರೆ ಪರಿಹಾರ, ಮಾಶಾಸನ, ಕಾರ್ಪಸ್ ನಿಧಿ, ನಿವೇಶನ, ವಸತಿ, ಲೈನ್ ಡಿಪಾರ್ಟ್‌ಮೆಂಟ್ ನಿಂದ ವಿವಿಧ ಸೌಲಭ್ಯಗಳು ಸಕಾಲದಲ್ಲಿ ಸಿಗದೆ ಜೀತ ವಿಮುಕ್ತರು ಮತ್ತೇ ಜೀತಕ್ಕೆ ಹೋಗುವ ಪ್ರಸಂಗ ಎದುರಾಗಿದೆ ಎಂದರು.
ಒತ್ತಾಯಗಳು :
1) ಫೆಬ್ರವರಿ-9 ರ ಬದಲು ಜೀತಪದ್ಧತಿ ರದ್ದತಿ ಕಾನೂನು ಬಂದ ದಿನವಾದ 1976 ಅಕ್ಟೋಬರ್-25 ರಂದೇ ಜೀತ ಕಾರ್ಮಿಕ ನಿರ್ಮೂಲನಾ ದಿನಾಚರಣೆಯನ್ನು ಆಚರಿಸುವಂತ್ತಾಗಬೇಕು.
2) ಸರ್ಕಾರವು 2021 ಮತ್ತು 2024 ರಂದು ಹೊರಡಿಸಿರುವ ಗೆಜೆಟೆಡ್ ಸುತ್ತೋಲನೆಯನ್ನು ರದ್ದುಪಡಿಸಬೇಕು.
3) ಜೀತವಿಮುಕ್ತರ ಪುನರ್ವಸತಿಗೆ ಮಾರಕವಾಗಿರುವ SO P ಯನ್ನು ಕೂಡಲೇ ರದ್ದುಮಾಡಬೇಕು.
4) 2008 ರ ಕ್ರಿಯಾ ಯೋಜನೆಯ ಪ್ರಕಾರ ಜೀತವಿಮುಕ್ತರಿಗೆ ಸಮಗ್ರ ಪುನರ್ವಸತಿ ಕಲ್ಪಿಸಬೇಕು
5) ಜಿಲ್ಲಾ ಮತ್ತು ಉಪ-ವಿಭಾಗ ಮಟ್ಟದ ಜಾಗೃತಿ ಸಮಿತಿ ಸಭೆಗಳನ್ನು ಪ್ರತಿ 3 ತಿಂಗಳಿಗೊಮ್ಮೆ ಕಡ್ಡಾಯಗೊಳಿಸಬೇಕು.
6) ಜೀತವಿಮುಕ್ತರ ಸಮಗ್ರ ಪುನರ್ವಸತಿಗೆ ಸರ್ಕಾರ ಈ ಸಾಲಿನ ಬಜೆಟ್ ನಲ್ಲಿ 500 ಕೋಟಿ ಅನುದಾನ ಮೀಸಲಿಡಬೇಕು.
7) 2014 ರಿಂದ 2024 ರವರೆಗೆ ಬಿಡುಗಡೆಯಾಗಿ ಪುನರ್ವಸತಿ ಸಿಗದೆ ಕಂಗಾಲಾಗಿರುವ ಸರಗೂರು ತಾಲ್ಲೂಕಿನ 131 ಮಂದಿಗೆ ಶೀಘ್ರ ಪರಿಹಾರ, ಪುನರ್ವಸತಿ ಕಲ್ಪಿಸಬೇಕು.
8) ಸರಗೂರು ತಾಲ್ಲೂಕಿನ 28 ಮಂದಿಗೆ ಮಾಶಾಸನ ಕೊಡಿಸಿಕೊಡಬೇಕು.
9) 2015ನೇ ಸಾಲಿನಲ್ಲಿ ಬಿಡುಗಡೆ ಹೊಂದಿರುವ ಸರಗೂರು ತಾಲ್ಲೂಕಿನ 15 ಮಂದಿಗೆ ತಾತ್ಕಾಲಿಕ ಪರಿಹಾರ ಒದಗಿಸಬೇಕು.
ಈ ಸಂದರ್ಭದಲ್ಲಿ ಹೋಬಳಿ ಸಂಚಾಲಕ ನಟರಾಜು, ಶ್ರೀನಿವಾಸ, ಒಕ್ಕೂಟದ ಮುಖಂಡರಾದ ಮೊಳೆಯೂರು ಕಾವಲ್ ನಾಗೇಂದ್ರ,ಪುಟ್ಟರಾಚಯ್ಯ ಕೊತ್ತೇಗಾಲ, ಮಂಜು ಕೊತ್ತೇಗಾಲ, ನಿಂಗರಾಜುನಾಯಕ, ನಿಂಗಯ್ಯ, ಸುನಂದ, ನಾರಾಯಣ ನಾಯಕ, ಸವಿತಾ, ದಸಂಸ (ಅಂಬೇಡ್ಕರ್ ವಾದ) ತಾ ಸಂಚಾಲಕ ಕೂಡಗಿ ಗೋವಿಂದರಾಜು, ಇನ್ನೂ ಮುಖಂಡರು ಸೇರಿದಂತೆ ಭಾಗಿಯಾಗಿದ್ದರು.
ವರದಿ: ಹಾದನೂರು ಚಂದ್ರ
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC


