ಬೆಂಗಳೂರು: ಅಭಿಮಾನ್ ಸ್ಟುಡಿಯೋವನ್ನು ಮುಟ್ಟುಗೋಲು ಹಾಕಿಕೊಳ್ಳಬೇಕೆಂದು ಅರಣ್ಯ ಇಲಾಖೆಯು, ಬೆಂಗಳೂರುನಗರ ಜಿಲ್ಲಾಧಿಕಾರಿಗೆ ಪತ್ರ ಬರೆದಿದೆ.
ಕಳೆದ ಆ.22ರಂದು ಅರಣ್ಯ ಇಲಾಖೆಯ ಉಪಸಂರಕ್ಷಣಾಧಿಕಾರಿ ರವೀಂದ್ರಕುಮಾರ್ ಅವರು, ಬೆಂಗಳೂರುನಗರ ಜಿಲ್ಲಾಧಿಕಾರಿ ಜಗದೀಶ್ ಅವರಿಗೆ ಪತ್ರ ಬರೆದಿದ್ದು, ನಿಯಮ ಉಲ್ಲಂಘನೆ ಮಾಡಿರುವ ಅಭಿಮಾನ್ ಸ್ಟುಡಿಯೋವನ್ನು ಮುಟ್ಟುಗೋಲು ಹಾಕಿಕೊಳ್ಳಬೇಕೆಂದು ನಿರ್ದೇಶನ ಮಾಡಿದ್ದಾರೆ.
ನಟ ಬಾಲಕೃಷ್ಣ ಅವರಿಗೆ 1970ರಲ್ಲಿ ಸ್ಟುಡಿಯೋ ನಿರ್ಮಾಣದ ಉದ್ದೇಶಕ್ಕೆ 20 ಎಕರೆ ಭೂಮಿಯನ್ನು 20 ವರ್ಷ ಲೀಸ್ ಗೆ ನೀಡಾಗಿತ್ತು. ನಂತರ ಭೋಗ್ಯದ ಅವಧಿ ವಿಸ್ತರಣೆ ಮಾಡಿಕೊಳ್ಳಲಾಗಿತ್ತು. 2004ರಲ್ಲಿ ಆರ್ಥಿಕ ಸಂಕಷ್ಟದ ನೆಪ ಹೇಳಿ ಬಾಲಕೃಷ್ಣ ಅವರ ಮಕ್ಕಳಾದ ಶ್ರೀನಿವಾಸ್ ಹಾಗೂ ಗಣೇಶ್ ಜಿಲ್ಲಾಧಿಕಾರಿಗಳ ಬಳಿ 10 ಎಕರೆ ಮಾರಲು ಒಪ್ಪಿಗೆ ಕೇಳಿದ್ದರು ಎನ್ನಲಾಗಿದೆ.
ಜಿಲ್ಲಾಧಿಕಾರಿಗಳ ವಿಶೇಷ ಅಧಿಕಾರ ಬಳಸಿ ಇದ್ದನ್ನು ಮಾರಾಟ ಮಾಡಲಾಗಿದೆ. ಮಾರಾಟದಿಂದ ಬಂದ ಹಣವನ್ನು ಸ್ಟುಡಿಯೋ ಅಭಿವೃದ್ಧಿಗೆ ಮಾತ್ರ ಬಳಕೆ ಮಾಡಿಕೊಳ್ಳುವುದಾಗಿ ಸರ್ಕಾರಕ್ಕೆ ತಿಳಿಸಿದ್ದರೆಂದು ತಿಳಿದುಬಂದಿದೆ.
ಆದರೆ ಈವರೆಗೆ ಸ್ಟುಡಿಯೋ ಯಥಾಸ್ಥಿತಿಯಲ್ಲೇ ಇದೆ. ಇದರ ಅಭಿವೃದ್ಧಿಯಾಗಿಲ್ಲ. ಈಗ ಬಾಲಕೃಷ್ಣ ಮೊಮಗ ಕಾರ್ತಿಕ್ ಈ ಜಮೀನನ್ನು ಮಾರಲು ಪ್ಲ್ಯಾನ್ ಮಾಡಿದ್ದರು. 1 ಎಕರೆಗೆ 14 ಕೋಟಿ ರೂಪಾಯಿಯಂತೆ ಮಾರಲು ಪ್ಲ್ಯಾನ್ ನಡೆದಿತ್ತು. ಈ ವಿಚಾರ ಅರಣ್ಯಾಧಿಕಾರಿಗೆ ಗೊತ್ತಾಗಿದೆ. ಹೀಗಾಗಿ, ಇದನ್ನು ವಶಕ್ಕೆ ಪಡೆಯುವಂತೆ ಅವರು ಜಿಲ್ಲಾಧಿಕಾರಿಗಳಿಗೆ ಕೋರಿದ್ದಾರೆ.
ಇದೇ ಆಗಸ್ಟ್ 7ರಂದು ರಾತ್ರೋರಾತ್ರಿ ಅಭಿಮಾನ್ ಸ್ಟುಡಿಯೋದಲ್ಲಿದ್ದ ಕನ್ನಡದ ಮೇರುನಟ ಸಾಹಸಸಿಂಹ ಡಾ. ವಿಷ್ಣುವರ್ಧನ್ ಅವರ ಸಮಾಧಿಯನ್ನು ಧ್ವಂಸ ಮಾಡಲಾಗಿತ್ತು. ಈ ಕಾರಣಕ್ಕೆ ಜಾಗವನ್ನು ಸರ್ಕಾರ ವಶಪಡಿಸಿಕೊಳ್ಳುವಂತೆ ಅರಣ್ಯ ಇಲಾಖೆ ಡಿಸಿ ಜಗದೀಶ್ ಅವರಿಗೆ ಪತ್ರ ಬರೆಯಲಾಗಿದೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC


