ಮಾಜಿ ಸಿಎಂ ಬಿ.ಎಸ್ ಯಡಿಯೂರಪ್ಪ ಅವರ ವಿರುದ್ಧ ವಾಗ್ದಾಳಿ ನಡೆಸಿದ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಪರ ಮಾಜಿ ಸಚಿವ ವಿ.ಸೋಮಣ್ಣ ಬ್ಯಾಟ್ ಬೀಸಿದ್ದಾರೆ. ತುಮಕೂರಿನಲ್ಲಿ ಮಾತನಾಡಿದ ಮಾಜಿ ಸಚಿವ, ಯತ್ನಾಳ್ ಒಬ್ಬರು ಸುಸಂಸ್ಕೃತ ರಾಜಕಾರಣಿ, ನನ್ನ ನೋವು ನನಗೆ ಗೊತ್ತು, ಅವರ ನೋವು ಅವರಿಗೆ ಗೊತ್ತು ಹಾಗಾಗಿ ಅವರು ಮಾತನಾಡಿರಬಹುದು ಎಂದು ಹೇಳಿದ್ದಾರೆ.
ಸ್ವಪಕ್ಷದ ಮೇಲೆಯೇ ಬೇಸರಗೊಂಡ ಮಾಜಿ ಸಚಿವ ವಿ.ಸೋಮಣ್ಣ ಅವರ ಸಂಧಾನ ಪ್ರಯತ್ನ ಆರಂಭಿಸಿರುವ ದೆಹಲಿಯ ಬಿಜೆಪಿ ವರಿಷ್ಠರು ಅವರನ್ನು ಮಾತುಕತೆಗೆ ಆಹ್ವಾನಿಸಿದ್ದಾರೆ. ಆದರೆ, ಮಾತುಕತೆ ವೇಳೆ ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಅವರೂ ಉಪಸ್ಥಿತರಿರಬೇಕು. ವರಿಷ್ಠರ ಸಮ್ಮುಖದಲ್ಲಿ ಮುಖಾಮುಖಿ ಮಾತುಕತೆ ಆಗಲಿ ಎಂಬ ಪಟ್ಟು ಮುಂದಿಟ್ಟಿದ್ದಾರೆ ಎಂದು ಮೂಲಗಳಿಂದ ತಿಳಿದು ಬಂದಿದೆ.


