ಗುಬ್ಬಿ: ತಾಲೂಕು ಕಚೇರಿಯ ಭೂ ಮಾಪನ ಇಲಾಖೆಯ ಅಧಿಕಾರಿಗಳ ಬೇಜವಾಬ್ದಾರಿಯಿಂದಾಗಿ ಖ್ಯಾತ ರಂಗಕರ್ಮಿ ಹಾಗೂ ರಾಜ್ಯಸಭೆಯ ಮಾಜಿ ಸದಸ್ಯೆ ಬಿ. ಜಯಶ್ರೀ ಅವರು ಕಚೇರಿಗೆ ಅಲೆದಾಡುವಂತಾದ ಘಟನೆ ಗುರುವಾರ ನಡೆದಿದೆ. ರಂಗ ಚಟುವಟಿಕೆಗಾಗಿ ಜಮೀನು ದಾನ ನೀಡಲು ಮುಂದಾದ ಅವರಿಗೆ ಇಲಾಖೆಯ ಸರ್ವೇಯರ್ ಉದ್ಧಟತನದ ಉತ್ತರ ನೀಡಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.
ಜಿ.ವಿ.ಮಾಲತಮ್ಮ ಆರ್ಟ್ ಟ್ರಸ್ಟ್ ಹೆಸರಿನಲ್ಲಿ ರಂಗ ಚಟುವಟಿಕೆಗಳನ್ನು ನಡೆಸಲು ಬಿ. ಜಯಶ್ರೀ ಅವರು ತಮ್ಮ ಸ್ವಂತ ಜಮೀನಿನ ಪೈಕಿ 5 ಗುಂಟೆ ಜಮೀನನ್ನು ದಾನವಾಗಿ ನೀಡಲು ನಿರ್ಧರಿಸಿದ್ದಾರೆ. ಈ ಪ್ರಕ್ರಿಯೆಗೆ ಅಗತ್ಯವಾದ ಜಮೀನು ಖಾತೆ ಮತ್ತು ಸರ್ವೇ ಕೆಲಸಕ್ಕಾಗಿ ಕಳೆದ ಒಂದು ತಿಂಗಳಿನಿಂದ ಅವರು ಪ್ರಯತ್ನಿಸುತ್ತಿದ್ದಾರೆ. ಇದಕ್ಕಾಗಿ ಈಗಾಗಲೇ ಮೂರು ಬಾರಿ ಅರ್ಜಿ ಸಲ್ಲಿಸಿ, ನಿಯಮಾನುಸಾರ 3,500 ರೂ. ಶುಲ್ಕವನ್ನೂ ಪಾವತಿಸಿದ್ದಾರೆ.
ಸರ್ವೇಯರ್ ಉದ್ಧಟತನ:
ಸರ್ವೇ ಕೆಲಸಕ್ಕಾಗಿ ಗುರುವಾರ ಬೆಳಿಗ್ಗೆ ಬರುವಂತೆ ಸರ್ವೇಯರ್ ಶಿವಾನಂದ್ ಅವರು ಸಮಯ ನಿಗದಿಪಡಿಸಿದ್ದರು. ಅವರ ಮಾತಿನಂತೆ ಬಿ. ಜಯಶ್ರೀ ಹಾಗೂ ರಂಗತಜ್ಞ ಆನಂದರಾಜ್ ಅವರು ಬೆಂಗಳೂರಿನಿಂದ ಗುಬ್ಬಿ ಕಚೇರಿಗೆ ಬಂದಿದ್ದರು. ಆದರೆ, ಸ್ಥಳದಲ್ಲಿ ಇಲ್ಲದ ಸರ್ವೇಯರ್ ಶಿವಾನಂದ್, ದೂರವಾಣಿ ಮೂಲಕ ಸಂಪರ್ಕಿಸಿದಾಗ ಅತ್ಯಂತ ಬೇಜವಾಬ್ದಾರಿಯಿಂದ ವರ್ತಿಸಿದ್ದಾರೆ ಎನ್ನಲಾಗಿದೆ.
“ನಮಗೆ ಮೇಲಾಧಿಕಾರಿಗಳ ಕೆಲಸ ಮುಖ್ಯ, ನಿಮ್ಮ ಕೆಲಸವಲ್ಲ. ಫೋನ್ ಕರೆ ಬಂದಿದೆ, ಹಾಗಾಗಿ ಬೇರೆಡೆ ಸರ್ವೇಗೆ ಹೋಗುತ್ತಿದ್ದೇನೆ” ಎಂದು ಹಾರಿಕೆ ಉತ್ತರ ನೀಡಿದ್ದಾರೆ ಎಂದು ಜಯಶ್ರೀ ಅವರು ಬೇಸರ ವ್ಯಕ್ತಪಡಿಸಿದ್ದಾರೆ.
ಮಾಜಿ ಸಂಸದೆಯ ಆಕ್ರೋಶ:
ಕಚೇರಿಯ ಅವ್ಯವಸ್ಥೆಯ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ ಬಿ. ಜಯಶ್ರೀ ಅವರು, “ಮಾಜಿ ಸಂಸದೆಯಾದ ನನಗೇ ಇಂತಹ ಪರಿಸ್ಥಿತಿ ಬಂದಿದೆ ಎಂದರೆ, ಇನ್ನು ಸಾಮಾನ್ಯ ರೈತನ ಕಥೆ ಏನು? ಮೂರು ಬಾರಿ ಶುಲ್ಕ ಕಟ್ಟಿ, ಹೇಳಿದ ಸಮಯಕ್ಕೆ ಬಂದರೂ ಕೆಲಸ ಮಾಡಿಕೊಡದೆ ಉದ್ಧಟತನ ತೋರುವ ಇಂತಹ ಸರ್ವೇಯರ್ ಅನ್ನು ಬ್ಲಾಕ್ ಲಿಸ್ಟ್ಗೆ ಸೇರಿಸಬೇಕು” ಎಂದು ಒತ್ತಾಯಿಸಿದರು.
ಸ್ಥಳದಲ್ಲಿ ಸಂಧಾನ:
ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಧಾವಿಸಿದ ಸರ್ವೇಯರ್ ದಿನೇಶ್ ಮತ್ತು ಬಾಹುಬಲಿ ಅವರು ಪರಿಸ್ಥಿತಿಯನ್ನು ತಿಳಿಗೊಳಿಸಲು ಪ್ರಯತ್ನಿಸಿದರು. ಬಳಿಕ ಮತ್ತೋರ್ವ ಸರ್ವೇಯರ್ ರಂಗಸ್ವಾಮಿ ಅವರಿಂದ ಸಹಿ ಪಡೆಯುವ ಪ್ರಕ್ರಿಯೆ ನಡೆಯಿತು. ಸಹಾಯಕ ನಿರ್ದೇಶಕ ತಿಮ್ಮಯ್ಯ ಅವರೊಂದಿಗೆ ದೂರವಾಣಿಯಲ್ಲಿ ಮಾತನಾಡಿದ ಜಯಶ್ರೀ ಅವರು, ಕನಿಷ್ಠ ಶಿಷ್ಟಾಚಾರ ಪಾಲಿಸದ ಇಲಾಖೆಯ ನಡೆಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿ ಅಲ್ಲಿಂದ ನಿರ್ಗಮಿಸಿದರು.
ವರದಿ: ಮಂಜುಸ್ವಾಮಿ ಎಂ.ಎನ್.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC


