ತುಮಕೂರು: ಅಯ್ಯಪ್ಪ ಸ್ವಾಮಿಯ ದರ್ಶನ ಮುಗಿಸಿ ಸಂಭ್ರಮದಿಂದ ಮರಳುತ್ತಿದ್ದ ಭಕ್ತರ ತಂಡವೊಂದು ಭೀಕರ ರಸ್ತೆ ಅಪಘಾತಕ್ಕೆ ಈಡಾಗಿದ್ದು, ಮಗು ಸೇರಿದಂತೆ ನಾಲ್ವರು ಸ್ಥಳದಲ್ಲೇ ಮೃತಪಟ್ಟಿರುವ ಹೃದಯವಿದ್ರಾವಕ ಘಟನೆ ತುಮಕೂರಿನ ಕೋರಾ ಸಮೀಪ ನಡೆದಿದೆ.
ಅಪಘಾತ ನಡೆದದ್ದು ಹೇಗೆ? ಶಬರಿಮಲೆಯಿಂದ ಕೊಪ್ಪಳ ಜಿಲ್ಲೆಯ ಯಲಬುರ್ಗಾಕ್ಕೆ ಹಿಂತಿರುಗುತ್ತಿದ್ದ ಭಕ್ತರಿದ್ದ ಕ್ರೂಸರ್ ವಾಹನವು, ತುಮಕೂರಿನ ರಾಷ್ಟ್ರೀಯ ಹೆದ್ದಾರಿ 48ರ ವಸಂತನರಸಾಪುರ ಕೈಗಾರಿಕಾ ಪ್ರದೇಶದ ಬಳಿ ರಸ್ತೆ ಬದಿಯಲ್ಲಿ ನಿಂತಿದ್ದ ಲಾರಿಗೆ ಹಿಂಬದಿಯಿಂದ ಜೋರಾಗಿ ಡಿಕ್ಕಿ ಹೊಡೆದಿದೆ. ಡಿಕ್ಕಿಯ ರಭಸಕ್ಕೆ ಕ್ರೂಸರ್ ವಾಹನದ ಮುಂಭಾಗ ಸಂಪೂರ್ಣ ಅಪ್ಪಚ್ಚಿಯಾಗಿದೆ.
ಭೀಕರ ಅಪಘಾತದಲ್ಲಿ ಸಾಕ್ಷಿ (7 ವರ್ಷ), ವೆಂಕಟೇಶಪ್ಪ (30 ವರ್ಷ), ಮಾರತಪ್ಪ (35 ವರ್ಷ), ಗವಿಸಿದ್ದಪ್ಪ (40 ವರ್ಷ) ಮೃತಪಟ್ಟವರು ಎಂದು ಗುರುತಿಸಲಾಗಿದೆ.
ಈ ದುರಂತದಲ್ಲಿ ಇತರ ಏಳು ಮಂದಿ ತೀವ್ರವಾಗಿ ಗಾಯಗೊಂಡಿದ್ದು, ಅವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿದೆ.
ತಂದೆಯ ಕಣ್ಣೀರು: ಅಪಘಾತದಲ್ಲಿ ಗಾಯಗೊಂಡಿರುವ ಮೃತ ಬಾಲಕಿ ಸಾಕ್ಷಿಯ ತಂದೆ ಉಲಗಪ್ಪ ಅವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಮಗಳನ್ನು ಕಳೆದುಕೊಂಡ ದುಃಖದಲ್ಲಿ ಕಣ್ಣೀರಿಡುತ್ತಿದ್ದಾರೆ. “ನಾವು ಒಟ್ಟಿಗೆ ಮಾಲೆ ಹಾಕಿದ್ದೆವು, ಕಳೆದ ವರ್ಷವೂ ಅವಳನ್ನು ಕರೆದುಕೊಂಡು ಹೋಗಿದ್ದೆ. ಈ ಬಾರಿ ಅಯ್ಯಪ್ಪನ ದರ್ಶನ ಮುಗಿಸಿ ಬರುವಾಗ ಹೀಗಾಗುತ್ತದೆ ಎಂದು ಅಂದುಕೊಂಡಿರಲಿಲ್ಲ” ಎಂದು ಅವರು ನೋವು ತೋಡಿಕೊಂಡಿದ್ದಾರೆ.
ಮೃತರೆಲ್ಲರೂ ಕೊಪ್ಪಳ ಜಿಲ್ಲೆಯ ಯಲಬುರ್ಗಾ ಮೂಲದವರಾಗಿದ್ದು, ಶಬರಿಮಲೆಗೆ ಹೋಗಿ ಸಂಭ್ರಮದಿಂದ ಮನೆಗೆ ಮರಳುವ ಮುನ್ನವೇ ವಿಧಿ ಅಟ್ಟಹಾಸ ಮೆರೆದಿದೆ. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲಿಸಿಕೊಂಡಿದ್ದಾರೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC


