ಕೊರಟಗೆರೆ : ಕಣ್ಣಿನ ಸಮಸ್ಯೆಗಳು ನಮ್ಮ ದೈನಂದಿನ ಜೀವನದ ಮೇಲೆ ದೊಡ್ಡ ಪರಿಣಾಮ ಬೀರುತ್ತವೆ. ಸರಿಯಾದ ಸಮಯದಲ್ಲಿ ತಪಾಸಣೆ ಮಾಡಿಸಿಕೊಳ್ಳುವುದು ಬಹಳ ಮುಖ್ಯ ಎಂದು ಹಾಲಪ್ಪ ಪೌಂಡೇಷನ್ ಅಧ್ಯಕ್ಷರಾದ ಮುರುಳಿಧರ ಹಾಲಪ್ಪ ತಿಳಿಸಿದರು.
ಕೊರಟಗೆರೆ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಆಯೋಜಿಸಲಾದ ಹಾಲಪ್ಪ ಪೌಂಡೇಷನ್ ವತಿಯಿಂದ ಸತ್ಯ ಸಾಯಿಬಾಬ 100ನೇ ಜನ್ಮ ವರ್ಧಂತಿ ಪ್ರಯುಕ್ತ ಆಯೋಜಿಸಲಾದ ಕಣ್ಣಿನ ತಪಾಸಣೆ ಶಿಬಿರ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ವಿದ್ಯಾರ್ಥಿಗಳು ಮೊಬೈಲ್ ಬಳಕೆ ನಿಷೇಧಿಸುವುದರಿಂದ ಆರೋಗ್ಯದ ಮೇಲೆ ಬೀರುವ ದುಷ್ಪಾರಿಣಾಮವನ್ನು ತಪ್ಪಿಸಬಹುದು ಜೊತೆಗೆ ಶಿಕ್ಷಣದಲ್ಲಿ ಉನ್ನತ ಪ್ರಗತಿ ಸಾಧಿಸಬಹುದು. ದೇಶದ ಪ್ರಗತಿಗೆ ಹೆಣ್ಣುಮಕ್ಕಳ ಪಾತ್ರ ಪ್ರಮುಖವಾಗಿದೆ. ಸ್ಪರ್ಧಾತ್ಮಕ ಪರೀಕ್ಷೆಯತ್ತ ವಿದ್ಯಾರ್ಥಿಗಳು ಹೆಚ್ಚಿನ ಗಮನಹರಿಸಿ ದಿನಪತ್ರಿಕೆ ಓದುವ ಹವ್ಯಾಸ ಹೆಚ್ಚಾಗಿ ಬೆಳೆಸಿಕೊಳ್ಳಬೇಕು ಎಂದು ಹೇಳಿದರು.
ಅಮೆರಿಕಾದ ಡಾ.ನಿತೀನ್ ಶಾ ಶಿಬಿರ ಉದ್ದೇಶಿಸಿ ಮಾತನಾಡಿ, ವಿದ್ಯಾರ್ಥಿಗಳಲ್ಲಿ ಕಣ್ಣಿನ ಸಮಸ್ಯೆ ಇದ್ದಲ್ಲಿ ನಿರ್ಲಕ್ಷ ತೋರದೆ ಶಿಬಿರದಲ್ಲಿ ಪರೀಕ್ಷೆ ಮಾಡಿಸಿ ವೈದ್ಯರ ಸಲಹೆ ಪಡೆಯುವುದು ಸೂಕ್ತ. ದೃಷ್ಠಿ ದೋಷದಿಂದ ಟಾಪರ್ ವಿದ್ಯಾರ್ಥಿಗಳು ಶಿಕ್ಷಣದ ಕಡೆ ಗಮನಹರಿಸುವುದು ಕಡಿಮೆಯಾಗಿದೆ. ಇಂಡಿಯಾ ಮತ್ತು ಅಮೆರಿಕಾದಲ್ಲಿ ದೃಷ್ಠಿದೋಷದ ಸಮಸ್ಯೆಗೆ ಒಳಪಟ್ಟ ವಿದ್ಯಾರ್ಥಿಗಳನ್ನು ಹೆಚ್ಚಾಗಿ ನೋಡುತ್ತಿರುವುದು ಬೇಸರದ ಸಂಗತಿ ಎಂದು ಅಸಾಮಾಧಾನ ವ್ಯಕ್ತಪಡಿಸಿದರು.
ಡಾ.ಪಣೀಂದ್ರ ಮಾತನಾಡಿ, ವಿದ್ಯಾರ್ಥಿಗಳು ಅನಗತ್ಯವಾಗಿ ಮೊಬೈಲ್ ಬಳಸುವುದನ್ನು ಕಡಿಮೆ ಮಾಡಬೇಕು. ಕಣ್ಣು ಸುರಕ್ಷಿತವಾಗಿ ಕಾಪಾಡಿಕೊಳ್ಳುವುದು ನಿಮ್ಮೆಲ್ಲರ ಜವಾಬ್ದಾರಿ, ಶಿಬಿರದ ಪ್ರಯೋಜನವನ್ನು ಪ್ರತಿ ವಿದ್ಯಾರ್ಥಿ ಪಡೆಯಬೇಕು ಎಂದು ಸಲಹೆ ನೀಡಿದರು.
2 ತಿಂಗಳಲ್ಲಿ 1 ಲಕ್ಷ ವಿದ್ಯಾರ್ಥಿಗಳಿಗೆ ತಪಾಸಣೆ:
ಸತ್ಯ ಸಾಯಿಬಾಬ ಜನ್ಮ ವರ್ಧಂತಿ ಪ್ರಯುಕ್ತ ಕಳೆದ 2 ತಿಂಗಳಲ್ಲಿ ತುಮಕೂರು ಜಿಲ್ಲೆ 10 ತಾಲೂಕಿನಲ್ಲಿ ಈಗಾಗಲೇ ಒಂದು ಲಕ್ಷಕ್ಕೂ ಹೆಚ್ಚಿನ ವಿದ್ಯಾರ್ಥಿಗಳಲ್ಲಿ ಉಚಿತವಾಗಿ ಕಣ್ಣಿನ ತಪಾಸಣೆ ಮಾಡಿ ಅಗತ್ಯವಿರುವ ಮಕ್ಕಳಿಗೆ ಕನ್ನಡಕ ವಿತರಣೆ ಮಾಡಲಾಗಿದೆ ಎಂದು ಹಾಲಪ್ಪ ಪೌಂಡೇಷನ್ ಪ್ರಮುಖರು ಕಾರ್ಯಕ್ರಮದಲ್ಲಿ ತಿಳಿಸಿದರು.
ಈ ಕಾರ್ಯಕ್ರಮದಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಅರಕೆರೆ ಶಂಕರ್, ಪ.ಪಂ ಮುಖ್ಯಾಧಿಕಾರಿ ಉಮೇಶ್, ತಾ.ಪಂ ಸಹಾಯಕ ನಿರ್ದೇಶಕ ಸುನೀಲ್, ತಾ.ಪಂ ಯೋಜನಾಧಿಕಾರಿ ಮಧುಸೂಧನ್, ಸಿದ್ದರಬೆಟ್ಟ ರೋಟರಿ ಅಧ್ಯಕ್ಷ ಬಾಲಾಜಿ ದರ್ಶನ್, ಕಾಲೇಜಿನ ಪ್ರಾಶುಂಪಾಲ ನಾಗರಾಜು, ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಜಯಮ್ಮ ಸೇರಿದಂತೆ ಕಾಲೇಜಿನ ಬೋಧಕೇತರ ಸಿಬ್ಬಂದಿ ವರ್ಗ ಹಾಜರಿದ್ದರು.
ವರದಿ: ಮಂಜುಸ್ವಾಮಿ ಎಂ.ಎನ್.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC


