ಬಾಗಲಕೋಟೆ: ಶಾಲಾ ಬಸ್ ಹಾಗೂ ಟ್ರ್ಯಾಕ್ಟರ್ ಮಧ್ಯೆ ಭೀಕರ ಅಪಘಾತ ಸಂಭವಿಸಿದ್ದು, ನಾಲ್ವರು ವಿದ್ಯಾರ್ಥಿಗಳು ಮೃಪಟ್ಟಿರುವ ಘಟನೆ ಬಾಗಲಕೋಟೆಯಲ್ಲಿ ನಡೆದಿದೆ. ಘಟನೆಯಲ್ಲಿ ನಾಲ್ವರು ಮಕ್ಕಳು ಮೃತಪಟ್ಟಿದ್ದು, ಎಂಟಕ್ಕೂ ಅಧಿಕ ಮಕ್ಕಳಿಗೆ ಗಾಯಗಳಾಗಿವೆ. ಮೃತರನ್ನು ಸಾಗರ್ ಕಡಕೋಳ(17), ಶ್ವೇತಾ(13), ಗೋವಿಂದ(13), ಬಸವರಾಜ(17) ಎಂದು ಗುರುತಿಸಲಾಗಿದೆ.
ಬಾಗಲಕೋಟೆಯ ಜಮಖಂಡಿ ತಾಲೂಕಿನ ಅಲಗೂರು ಗ್ರಾಮದ ಬಳಿ ಈ ಅಪಘಾತ ಸಂಭವಿಸಿದ್ದು, ಮೃತ ವಿದ್ಯಾರ್ಥಿಗಳು ಕವಟಗಿ ಗ್ರಾಮದ ಮೂಲದವರು ಎಂದು ತಿಳಿದು ಬಂದಿದೆ. ಮೃತರು ಆಲಗೂರು ಗ್ರಾಮದ ಬಳಿ ಇರುವ ಶ್ರೀ ವರ್ಧಮಾನ ಮಹಾವೀರ ಅಲ್ಪಸಂಖ್ಯಾತ ಶಿಕ್ಷಣ ಸಂಸ್ಥೆಯಲ್ಲಿ ವ್ಯಾಸಂಗ ಮಾಡುತ್ತಿದ್ದರು.
ಶಿಕ್ಷಣ ಸಂಸ್ಥೆಯ ವಾರ್ಷಿಕೋತ್ಸವ ಕಾರ್ಯಕ್ರಮಕ್ಕೆ ಮುಗಿಸಿಕೊಂಡು ಕವಟಗಿ ಗ್ರಾಮದ ಕಡೆ ಶಾಲಾ ಬಸ್ ನಲ್ಲಿ ಹೊರಡುವಾಗ ದುರಂತ ಸಂಭವಿಸಿದೆ. ರಾತ್ರಿ 12 ಗಂಟೆ ಸುಮಾರಿಗೆ ಅಪಘಾತ ಸಂಭವಿಸಿದೆ. ಸದ್ಯ ಘಟನೆಗೆ ನಿಖರ ಕಾರಣ ತಿಳಿದುಬಂದಿಲ್ಲ.


