ಕೃಷ್ಣರಾಜಪೇಟೆ: ನಮ್ಮ ಪೂರ್ವಿಕರು ಆಚರಿಸಿಕೊಂಡು ಬರುತ್ತಿರುವ ಗಣೇಶೋತ್ಸವ ಹಬ್ಬವು ಹಿಂದೂ ಮುಸ್ಲಿಂ ಭಾವೈಕ್ಯತೆಯ ಸಂಕೇತವಾಗಿದೆ ಎಂದು ಪೊಲೀಸ್ ಇನ್ಸ್ಪೆಕ್ಟರ್ ಆನಂದೇಗೌಡ ಅಭಿಪ್ರಾಯ ವ್ಯಕ್ತಪಡಿಸಿದರು.
ಕೃಷ್ಣರಾಜಪೇಟೆ ಪಟ್ಟಣದ ನಾಗಮಂಗಲ ರಸ್ತೆಯಲ್ಲಿರುವ ಗಣಪತಿ ಪೆಂಡಾಲ್ ನಲ್ಲಿ ಹಿಂದೂ ಮುಸ್ಲಿಮರು ಶ್ರದ್ಧಾ ಭಕ್ತಿಯಿಂದ ಗಣೇಶೋತ್ಸವ ಆಚರಿಸಿದ್ದು, ಈ ಕಾರ್ಯಕ್ರಮವನ್ನುದ್ದೇಶಿಸಿ ಅವರು ಮಾತನಾಡಿದರು.
ಸ್ವಾತಂತ್ರ್ಯ ಹೋರಾಟಗಾರ ಬಾಲಗಂಗಾಧರ ತಿಲಕ್ ಅವರು, ಸ್ವಾತಂತ್ರ್ಯ ಪೂರ್ವದಲ್ಲಿ ಗಣೇಶೋತ್ಸವವನ್ನು ಸ್ವಾತಂತ್ರ್ಯ ಪ್ರೇಮಿಗಳನ್ನು ಎಚ್ಚರಿಸಲು ಸಂಪರ್ಕ ಸೇತುವೆಯಾಗಿ ಗಣೇಶನನ್ನು ಆರಾಧಿಸಿ ಉತ್ಸವ ಮಾಡಿದರು. ಇಂದಿನ ದಿನಮಾನದಲ್ಲಿ ಒಡೆದ ಮನಸ್ಸುಗಳನ್ನು ಒಗ್ಗೂಡಿಸಲು, ಹಿಂದೂ ಮುಸ್ಲಿಂ ಬಾಂಧವರಲ್ಲಿ ಭಾವೈಕ್ಯತೆಯ ಸಂದೇಶವನ್ನು ಸಾರಲು ಗಣೇಶೋತ್ಸವ ಸಂಪರ್ಕ ಸೇತುವೆಯಾಗಿ ಕೆಲಸ ಮಾಡುತ್ತಿದೆ. ಇಂದು ಕೃಷ್ಣರಾಜಪೇಟೆ ಪಟ್ಟಣದ ಎಲ್ಲ ಮುಸ್ಲಿಂ ಯುವಕ ಬಂದವರು ಗಣೇಶನನ್ನ ಪೂಜೆ ಮಾಡಿ, ಮಜ್ಜಿಗೆ ಪಾನಕ ಜ್ಯೂಸ್ ವಿತರಿಸಿ ಪರಸ್ಪರ ಶುಭಾಶಯಗಳು ವಿನಿಮಯ ಮಾಡಿಕೊಳ್ಳುತ್ತಿರುವುದು ಇಡೀ ನಾಗರಿಕ ಸಮಾಜವೇ ಮೆಚ್ಚುವ ಸಂಗತಿ ಆಗಿದೆ ಎಂದು ಆನಂದೇಗೌಡ ಹೇಳಿದರು.
ಕೆ.ಆರ್.ಪೇಟೆ ಪಟ್ಟಣ ಪೊಲೀಸ್ ಠಾಣೆಯ ಸಬ್ ಇನ್ಸ್ಪೆಕ್ಟರ್ ನವೀನ್, ಕೃಷ್ಣರಾಜಪೇಟೆ ಪುರಸಭೆ ಮಾಜಿ ಅಧ್ಯಕ್ಷ ಕೆ.ಟಿ.ಗಂಗಾಧರ್, ತಾಲೂಕು ಬಿಜೆಪಿ ಅಧ್ಯಕ್ಷ ಸಾರಂಗಿ ನಾಗಣ್ಣ, ಪುರಸಭೆ ಮಾಜಿ ಅಧ್ಯಕ್ಷ ಕೆ.ಗೌಸ್ ಖಾನ್, ಸದಸ್ಯ ಹೇಮಂತ್ ಕುಮಾರ್, ಸದಸ್ಯರಾದ ಡಿ.ಪ್ರೇಮಕುಮಾರ್, ಕೆ.ಸಿ. ಮಂಜುನಾಥ್, ಹೆಚ್.ಆರ್. ಲೋಕೇಶ್, ಸಾಬಿದ್ ಖಾನ್, ಸೌದಿ ಫಯಾಜ್, ಸೈಯ್ಯದ್ ಜಮೀಲ್, ಮುಖ್ಯಾಧಿಕಾರಿ ರಾಜು ಕೆ.ವಠಾರ ಸೇರಿದಂತೆ ನೂರಾರು ಯುವಕ ಮುಸ್ಲಿಂ ಬಾಂಧವರು ಭಾಗವಹಿಸಿದ್ದರು.
ಗಣೇಶೋತ್ಸವ ಸಮಾರಂಭವನ್ನು ಶ್ರದ್ಧಾ ಭಕ್ತಿಯಿಂದ ಆಚರಿಸಿ ಸಾರ್ವಜನಿಕರಿಗೆ ಮಜ್ಜಿಗೆ ಪಾನಕ, ಜ್ಯೂಸ್ ವಿತರಿಸಿ ಸಂಭ್ರಮಿಸಿದರು.
ವರದಿ: ಮಂಜು, ಶ್ರವಣೂರು
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Gp0Feftn1c40sYuKY8HX2Q