ಚಿಕ್ಕಮಗಳೂರು: ನಗರದ ತಮಿಳು ಕಾಲೋನಿಯ ಕೇಂಬ್ರಿಡ್ಜ್ ಶಾಲೆ ಹಿಂಭಾಗದ ಶೆಡ್‍ವೊಂದರಲ್ಲಿ ಅಕ್ರಮವಾಗಿ ಗೋಹತ್ಯೆ ಮಾಡುತ್ತಿರುವ ಹಿನ್ನಲೆ ನಗರಸಭೆ ಅಧ್ಯಕ್ಷರ ನೇತೃತ್ವದ ಅಧಿಕಾರಿಗಳ ತಂಡ ದಾಳಿ ನಡೆಸಿ ಅನಧಿಕೃತ ಕಟ್ಟಡವನ್ನು ತೆರವುಗೊಳಿಸಿದೆ.
ಯುಜಿಡಿ, ಅಮೃತ್ ಕಾಮಗಾರಿ ಪರಿಶೀಲನೆಗೆಂದು ತೆರಳಿದಾಗ ಅನುಮಾನಗೊಂಡು ಕೇಂಬ್ರಿಡ್ಜ್ ಶಾಲೆ ಹಿಂಭಾಗದ ಶೆಡ್‍ಗೆ ತೆರಳಿ ಪರಿಶೀಲಿಸಿದಾಗ ಅಕ್ರಮವಾಗಿ ದನವನ್ನು ಕಡಿದಿರುವುದು ಬೆಳಕಿಗೆ ಬಂದಿದೆ ಎಂದು ನಗರಸಭೆ ಅಧ್ಯಕ್ಷ ವರಸಿದ್ದಿ ವೇಣುಗೋಪಾಲ್ ತಿಳಿಸಿದ್ದಾರೆ.
ನಗರದ 22 ನೇ ವಾರ್ಡ್‍ನಲ್ಲಿ ಎಂದಿನಿಂದ ನಗರಸಭೆಯಿಂದ ಸ್ವಚ್ಚತಾ ಅಭಿಯಾನ ಕೈಗೊಳ್ಳಲಾಗಿತ್ತು. ಗೋಹತ್ಯೆ ನಡೆದಿರುವುದು ಗೊತ್ತಾಗುತ್ತಿದ್ದಂತೆ ಆರೋಪಿತರು ತಪ್ಪಿಸಿಕೊಂಡು ಓಡಿಹೋಗಿದ್ದಾರೆ. ಸುಮಾರು 500 ಕೆ.ಜಿ ದನದ ಮಾಂಸ ಪತ್ತೆಯಾಗಿದೆ. ವಿರುದ್ದ ಗೋಹತ್ಯೆ ನಿಷೇಧ ಕಾಯ್ದೆ ಅಡಿ ಪ್ರಕರಣ ದಾಖಲಿಸಿ ಬಂಧಿಸಬೇಕು ಎಂದು ಅವರು ಒತ್ತಾಯಿಸಿದ್ದಾರೆ.
ಗೋಹತ್ಯೆ ಸಂಬಂಧವಾಗಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ಮಾಹಿತಿ ನೀಡಲಾಗಿದೆ. ನಗರದಲ್ಲಿ ಯಾವುದೇ ಅನಧಿಕೃತ ಶೆಡ್‍ಗಳು ನಿರ್ಮಿಸಿಕೊಂಡಲ್ಲಿ ಕೂಡಲೇ ತೆರವುಗೊಳಿಸಬೇಕು. ಇಲ್ಲವಾದಲ್ಲಿ ನಗರಸಭೆಯಿಂದ ತೆರವು ಮಾಡಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದ್ದಾರೆ.
ಪ್ರಧಾನಿ ನರೇಂದ್ರ ಮೋದಿಯವರ ಸ್ವಚ್ಚಭಾರತದ ಆಶಯದಂತೆ ನಗರದಲ್ಲಿ ಸ್ವಚ್ಚತಾ ಆಂದೋಲನವನ್ನು ಹಮ್ಮಿಕೊಂಡಿದ್ದು ಈಗಾಗಲೇ 28 ಕ್ಕೂ ಹೆಚ್ಚು ವಾರ್ಡ್‍ಗಳಲ್ಲಿ ಸ್ವಚ್ಚತೆ ಕೈಗೊಳ್ಳಲಾಗಿದೆ ಎಂದು ತಿಳಿಸಿದರು. ನಗರಸಭೆ ಪೌರಾಯುಕ್ತ ಬಿ.ಸಿ.ಬಸವರಾಜ್ ಮಾತನಾಡಿ, 22 ನೇ ವಾರ್ಡ್‍ನಲ್ಲಿ ಸ್ವಚ್ಚತಾ ಅಭಿಯಾನ ಕೈಗೊಳ್ಳಲಾಗಿತ್ತು. ಈ ವೇಳೆ ಕೇಂಬ್ರಿಡ್ ಶಾಲೆ ಹಿಂಭಾಗದ ಶೆಡ್‍ವೊಂದರಲ್ಲಿ ಶಬ್ದ ಕೇಳಿಬರುತ್ತಿತ್ತು. ಅನುಮಾನಗೊಂಡು ಪರಿಶೀಲನೆ ನಡೆಸಿದಾಗ ಅಕ್ರಮವಾಗಿ ದನವನ್ನು ಕಡಿದು ಮಾಂಸ ಮಾಡುತ್ತಿರುವುದು ಬೆಳಕಿಗೆ ಬಂದಿದೆ ಎಂದರು.
ನಗರದಲ್ಲಿ ಸುಮಾರು 15 ರಿಂದ 20 ಕಡೆಗಳಲ್ಲಿ ಅಕ್ರಮವಾಗಿ ದನವನ್ನು ಕಡಿದು ಮಾರಾಟ ಮಾಡುತ್ತಿರುವ ಮಾಹಿತಿ ಇದೆ. ಕೆಲವೆಡೆ ವಾಸದ ಮನೆಯ ಅನಧಿಕೃತ ಶೆಡ್‍ನಲ್ಲೂ ಗೋವಗಳನ್ನು ಕಡಿದು ಮಾಂಸ ಮಾರಾಟ ಮಾಡಲಾಗುತ್ತಿದೆ. ಇದಕ್ಕೆ ಪೊಲೀಸ್ ಇಲಾಖೆ ಸಹಕಾರ ನೀಡಿದ್ದಲ್ಲಿ ಅವುಗಳನ್ನು ಪತ್ತೆ ಹಚ್ಚಿ ತೆರವುಗೊಳಿಸಲಾಗುವುದು ಎಂದು ಹೇಳಿದರು.
ಈ ಸಂದರ್ಭದಲ್ಲಿ ನಗರಸಭೆ ಕಂದಾಯಾಧಿಕಾರಿ ಬಸವರಾಜ್, ಸ್ಯಾನಿಟೈಸರಿ ಸೂಪರ್‍ವೈಸರ್ ಅಣ್ಣಯ್ಯ, ರಮೇಶ್ ಸೇರಿದಂತೆ ಮತ್ತಿತರರು ಇದ್ದರು.
ವರದಿ: ಆಂಟೋನಿ ಬೇಗೂರು
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/JpBVbh0ffuQ4Xiseh6vKbz