ಬೆಂಗಳೂರು: ಸಾರ್ವಜನಿಕರಿಂದ ‘ಪಲ್ಲಕ್ಕಿ’ ಉತ್ಸವ ಹೆಸರಿನ ಐಷಾರಾಮಿ ಸ್ಲೀಪರ್ ಬಸ್ ಸೇವಗೆ ಉತ್ತಮ ಪ್ರತಿಕ್ರಿಯೆಗಳು ವ್ಯಕ್ತವಾಗುತ್ತಿದ್ದು, ಈ ಹಿನ್ನೆಲೆಯಲ್ಲಿ ಇನ್ನೂ 100 ಪಲ್ಲಕ್ಕಿ ಸ್ಲೀಪರ್ ಬಸ್ ಗಳ ಸೇರ್ಪಡೆಗೊಳಿಸಲು ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ ನಿರ್ಧರಿಸಿದೆ ಎಂದು ತಿಳಿದು ಬಂದಿದೆ.
ಬಸ್ ಗಳು ಬಜೆಟ್ ಸ್ನೇಹಿಯಾಗಿದ್ದು, ಸಾರ್ವಜನಿಕರಿಂದ ಉತ್ತಮ ಪ್ರತಿಕ್ರಿಯೆಗಳು ವ್ಯಕ್ತವಾಗುತ್ತಿವೆ.‘ಸಂತೋಷವು ಪ್ರಯಾಣಿಸುತ್ತಿದೆ’ ಎಂಬ ಅಡಿಬರಹದ ಅಡಿಯಲ್ಲಿ ಕಾರ್ಯನಿರ್ವಹಿಸುವ ಪಲ್ಲಕ್ಕಿ ಬಸ್ ಸೇವೆಗಳು ಪ್ರಾರಂಭವಾದಾಗಿನಿಂದ ಪೂರ್ಣ ಸಾಮರ್ಥ್ಯದೊಂದಿಗೆ ಸಂಚರಿಸುತ್ತಿವೆ.
ಅತ್ಯಾಧುನಿಕ ವ್ಯವಸ್ಥೆಗಳನ್ನು ಹೊಂದಿರುವ ‘ಪಲ್ಲಕ್ಕಿ’ ಉತ್ಸವ ಬಸ್ ಗಳಿಗೆ ಅಕ್ಟೋಬರ್ 7ರಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಬೆಂಗಳೂರಿನಲ್ಲಿ ಚಾಲನೆ ನೀಡಿದ್ದರು. ಕೆಎಸ್ ಆರ್ ಟಿಸಿಯು 40 ಬಸ್ ಗಳನ್ನು ರಸ್ತೆಗಿಳಿಸಿತ್ತು. ಪಲ್ಲಕ್ಕಿ ನಾನ್ ಎ.ಸಿ. ಸ್ಲೀಪರ್ ಬಸ್ ಆಗಿದ್ದು, 30 ಸ್ಲೀಪರ್ ಬರ್ತ್ ಹೊಂದಿದೆ.
ಕೆಎಸ್ ಆರ್ ಟಿಸಿ ಎಂಡಿ ಅನ್ಬು ಕುಮಾರ್ ಮಾತನಾಡಿ, “ಅಕ್ಟೋಬರ್ ನಲ್ಲಿ ಪಲ್ಲಕ್ಕಿ ಸ್ಲೀಪರ್ ಬಸ್ ಗಳನ್ನು ಪರಿಚಯಿಸಲಾಗಿತ್ತು. ಅಂದಿನಿಂದ ಇದು ಕೆಎಸ್ ಆರ್ ಟಿಸಿಯ ಅತ್ಯಂತ ಬೇಡಿಕೆಯ ಸೇವೆಗಳಲ್ಲಿ ಒಂದಾಗಿದೆ. ಈ ವರ್ಷ 40 ಬಸ್ಗಳನ್ನು ರಸ್ತೆಗಿಳಿಸಲಾಗಿತ್ತು. ಬಸ್ ಗಳಿಗೆ ಸಾರ್ವಜನಿಕರಿಂದ ಉತ್ತಮ ಪ್ರತಿಕ್ರಿಯೆಗಳು ಬಂದಿವೆ. ಹೀಗಾಗಿ ಈ ವರ್ಷ ಇನ್ನೂ 100 ಪಲ್ಲಕ್ಕಿ ಬಸ್ಗಳ ಸೇರ್ಪಡೆಗೊಳಿಸಲಾಗುವುದು ಎಂದು ಹೇಳಿದ್ದಾರೆ.


