ಕೊರಟಗೆರೆ: ತಾಲ್ಲೂಕಿನ ಗೊರವನಹಳ್ಳಿ ಮಹಾಲಕ್ಷ್ಮೀ ದೇವಾಲಯದಲ್ಲಿ ಕಾರ್ತಿಕ ಮಾಸದ ಅಂಗವಾಗಿ ಬ್ರಹ್ಮ ರಥೋತ್ಸವ, ಮುತ್ತಿನ ಪಲ್ಲಕ್ಕಿ ಉತ್ಸವ ಹಾಗೂ ಲಕ್ಷದೀಪೋತ್ಸವ ಶುಕ್ರವಾರ ವಿಜೃಂಭಣೆಯಿಂದ ನೆರವೇರಿತು.
ತಾಲ್ಲೂಕು, ಜಿಲ್ಲೆ ಸೇರಿದಂತೆ ರಾಜ್ಯದ ವಿವಿಧ ಜಿಲ್ಲೆ ಹಾಗೂ ನೆರೆ ರಾಜ್ಯಗಳಾದ ಆಂಧ್ರ ಪ್ರದೇಶ, ತೆಲಂಗಾಣ, ತಮಿಳುನಾಡಿನಿಂದ ಬಂದ ಭಕ್ತರು ಕಾರ್ಯಕ್ರಮಕ್ಕೆ ಸಾಕ್ಷಿಯಾದರು.
ದೇವಾಲಯದಲ್ಲಿ ಆಡಳಿತ ಮಂಡಳಿಯಿಂದ ಮುಂಜಾನೆಯಿಂದ ವಿವಿಧ ಹೋಮ, ಅಭಿಷೇಕ ಹಾಗೂ ವಿಶೇಷ ಪೂಜಾ ಕೈಂಕರ್ಯ ಏರ್ಪಡಿಸಲಾಗಿತ್ತು. ಕಾರ್ಯಕ್ರಮದ ಅಂಗವಾಗಿ ಮಧ್ಯಾಹ್ನ 12.35 ಗಂಟೆಗೆ ಬೆಳ್ಳಿರಥೋತ್ಸವ, ಪ್ರಾಕಾರೋತ್ಸವ ನಡೆಯಿತು. ದೇಗುಲ ಆವರಣದಲ್ಲಿ ದೀಪಾಲಂಕಾರ, ಹೂವಿನ ಅಲಂಕಾರ ಮಾಡಲಾಗಿತ್ತು. ರಥೋತ್ಸವದಲ್ಲಿ ಚಿಟ್ಟಿ ಮೇಳ, ಮಂಗಳವಾದ್ಯ, ಚಂಡೆ ವಾದ್ಯ ಸೇರಿದಂತೆ ವಿವಿಧ ಜನಪದ ಕಲಾತಂಡಗಳು ಭಾಗವಹಿಸಿದ್ದರು.
ದೀಪೋತ್ಸವಕ್ಕೆ ಸಿದ್ಧರಬೆಟ್ಟದ ವೀರಭದ್ರಶಿವಾಚಾರ್ಯ ಸ್ವಾಮೀಜಿ, ಎಲೆರಾಂಪುರದ ಹನುಮಂತನಾಥ ಸ್ವಾಮೀಜಿ ದೀಪ ಬೆಳಗುವ ಮೂಲಕ ಚಾಲನೆ ನೀಡಿದರು. ನೂರಾರು ಭಕ್ತರು ದೀಪ ಹಚ್ಚುವ ಮೂಲಕ ಭಕ್ತಿ ಸಮರ್ಪಿಸಿದರು. ಗೊರವನಹಳ್ಳಿ, ನರಸಯ್ಯನಪಾಳ್ಯ, ಗೊಲ್ಲರಟ್ಟಿ ಗ್ರಾಮಸ್ಥರಿಂದ ಆರತಿ ಉತ್ಸವ ಏರ್ಪಡಿಸಲಾಗಿತ್ತು.
ಟ್ರಸ್ಟ್ ಅಧ್ಯಕ್ಷ ಬಿ.ಜಿ.ವಾಸುದೇವ್, ಕಾರ್ಯದರ್ಶಿ ಆರ್.ಮುರಳಿಕೃಷ್ಣ, ಖಜಾಂಚಿ ಆರ್.ಜಗದೀಶ್, ಧರ್ಮದರ್ಶಿಗಳಾದ ಟಿ.ಎಸ್.ಲಕ್ಷ್ಮಿಕಾಂತ್, ಟಿ.ಆರ್.ನಟರಾಜು, ಎಸ್.ಶ್ರೀಪ್ರಸಾದ್, ರವಿರಾಜ ಅರಸ್, ಜಿ.ಎಲ್.ಮಂಜುನಾಥ್, ಓಂಕಾರೇಶ್, ಚಿಕ್ಕನರಸಯ್ಯ, ವಿ.ಬಾಲಕೃಷ್ಣ, ನರಸರಾಜು, ಲಕ್ಷ್ಮೀನರಸಯ್ಯ, ಎನ್.ಜಿ.ನಾಗರಾಜು ಹಾಜರಿದ್ದರು.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC


