ಬೆಂಗಳೂರು: ಕರ್ನಾಟಕ ವಿಧಾನಸಭೆಯ ಜಂಟಿ ಅಧಿವೇಶನವು ಗುರುವಾರ ಅಭೂತಪೂರ್ವ ಬೆಳವಣಿಗೆಗೆ ಸಾಕ್ಷಿಯಾಯಿತು. ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರು ಅಧಿವೇಶನವನ್ನು ಉದ್ದೇಶಿಸಿ ಕೇವಲ ಎರಡೇ ಸಾಲುಗಳ ಭಾಷಣ ಮಾಡಿ ಹೊರನಡೆಯುವ ಮೂಲಕ ಅಚ್ಚರಿ ಮೂಡಿಸಿದರು.
ಜನವರಿ 22 ರಿಂದ ಆರಂಭವಾದ ವಿಶೇಷ ಅಧಿವೇಶನದ ಮೊದಲ ದಿನದಂದು ರಾಜ್ಯಪಾಲರು ಜಂಟಿ ಸದನವನ್ನು ಉದ್ದೇಶಿಸಿ ಸುದೀರ್ಘ ಭಾಷಣ ಮಾಡಬೇಕಿತ್ತು. ಆದರೆ, ವೇದಿಕೆಗೆ ಬಂದ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ, ಸ್ಪೀಕರ್ ಯು.ಟಿ. ಖಾದರ್ ಮತ್ತು ಇತರ ಗಣ್ಯರಿಗೆ ಶುಭಾಶಯ ಕೋರಿ, “ನನ್ನ ಸರ್ಕಾರವು ರಾಜ್ಯದ ಆರ್ಥಿಕ, ಸಾಮಾಜಿಕ ಮತ್ತು ಭೌತಿಕ ಅಭಿವೃದ್ಧಿಯನ್ನು ದ್ವಿಗುಣಗೊಳಿಸಲು ಬದ್ಧವಾಗಿದೆ. ಜೈ ಹಿಂದ್, ಜೈ ಕರ್ನಾಟಕ” ಎಂದು ಹೇಳಿ ಕೇವಲ ಎರಡು ನಿಮಿಷಗಳಲ್ಲಿ ಭಾಷಣ ಮುಗಿಸಿದರು.
ರಾಜ್ಯಪಾಲರ ಈ ನಡೆಯಿಂದ ಆಕ್ರೋಶಗೊಂಡ ಕಾಂಗ್ರೆಸ್ ಶಾಸಕರು, ಬಿ.ಕೆ. ಹರಿಪ್ರಸಾದ್ ನೇತೃತ್ವದಲ್ಲಿ ಸದನದ ಬಾವಿಗಿಳಿದು ಪ್ರತಿಭಟನೆ ನಡೆಸಿದರು. ರಾಜ್ಯಪಾಲರು ಪೂರ್ಣ ಭಾಷಣ ಓದದೆ ನಿರ್ಗಮಿಸುತ್ತಿರುವುದನ್ನು ಖಂಡಿಸಿ ಧಿಕ್ಕಾರ ಕೂಗಿದ ಶಾಸಕರು, ಅವರನ್ನು ಅಡ್ಡಗಟ್ಟಲು ಯತ್ನಿಸಿದರು. ಸರ್ಕಾರದ ವಿರುದ್ಧ ರಾಜ್ಯಪಾಲರ ಈ ಅಸಮಾಧಾನ ಮತ್ತು ಅಧಿವೇಶನದಲ್ಲಿ ನಡೆದ ಈ ಹೈಡ್ರಾಮಾ ರಾಜಕೀಯ ವಲಯದಲ್ಲಿ ತೀವ್ರ ಚರ್ಚೆಗೆ ಕಾರಣವಾಗಿದೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC


