ತುಮಕೂರು: ಜಿಲ್ಲೆಯಲ್ಲಿ ಗೃಹಲಕ್ಷ್ಮಿ ಯೋಜನೆಯ 6,19,767 ಫಲಾನುಭವಿಗಳ ಪೈಕಿ 11,585 ಮಂದಿ ಮೃತಪಟ್ಟಿದ್ದು. ಅವರ ಖಾತೆಗೂ ಹಣ ಸಂದಾಯವಾಗುತ್ತಿದೆಯೇ? ಎಂಬುದನ್ನು ಪರಿಶೀಲಿಸಬೇಕು ಎಂದು ರಾಜ್ಯ ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿ ಉಪಾಧ್ಯಕ್ಷ, ವಿಧಾನ ಪರಿಷತ್ ಸದಸ್ಯ ದಿನೇಶ್ ಗೂಳಿಗೌಡ ಸೂಚಿಸಿದರು.
ನಗರದ ಜಿ.ಪಂ ಕಚೇರಿಯಲ್ಲಿ ಶುಕ್ರವಾರ ನಡೆದ ಜಿಲ್ಲಾ ಮಟ್ಟದ ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದರು.
ಗೃಹಲಕ್ಷ್ಮಿ ಯೋಜನೆಯಡಿ ಇದುವರೆಗೆ 72,549.07 ಕೋಟಿ ಹಣ ಜಮಾ ಆಗಿದೆ. ನೋಂದಣಿಯಾದವರ ಪೈಕಿ ಐಟಿ, ಜಿಎಸ್ ಟಿ ಇತರೆ ಸಮಸ್ಯೆಯಿಂದ 10,276 ಮಂದಿ ಯೋಜನೆಯಿಂದ ಹೊರಗುಳಿದಿದ್ದಾರೆ. ಇದನ್ನು ಸರಿಪಡಿಸಬೇಕು ಎಂದು ನಿರ್ದೇಶಿಸಿದರು.
ಸರ್ಕಾರ ಕಳೆದ 21 ತಿಂಗಳಲ್ಲಿ ಐದು ಗ್ಯಾರಂಟಿ ಯೋಜನೆಗಳಿಗೆ 798 ಸಾವಿರ ಕೋಟಿ ವ್ಯಯ ಮಾಡಿದೆ. ಜಿಲ್ಲೆಗೆ ಇದುವರೆಗೂ 4,701 ಕೋಟಿ ಬಿಡುಗಡೆ ಮಾಡಿದೆ. ಯೋಜನೆಯ ಹಣ ದುರುಪಯೋಗ ಆಗದಂತೆ, ಎಲ್ಲೂ ಅಪಸ್ವರ ಬಾರದಂತೆ ನೋಡಿಕೊಳ್ಳಬೇಕು. ಗ್ಯಾರಂಟಿ ಕುರಿತು ಪ್ಲೆಕ್ಸ್, ಬ್ಯಾನರ್ ಅಳವಡಿಸಬೇಕು ಎಂದರು.
ಕಾಳಸಂತೆಯಲ್ಲಿ ಅನ್ನ ಭಾಗ್ಯ ಅಕ್ಕಿ ಮಾರಾಟ ಮಾಡುತ್ತಿರುವುದನ್ನು ತಡೆಯಬೇಕು. ಗೋದಾಮುಗಳಲ್ಲಿ ಪಡಿತರ ದಾಸ್ತಾನು ಅಚ್ಚುಕಟ್ಟಾಗಿ ನಿರ್ವಹಿಸಬೇಕು. ತೂಕದಲ್ಲಿ ವ್ಯತ್ಯಾಸ ಆಗದಂತೆ ನೋಡಿಕೊಳ್ಳಬೇಕು ಎಂದು ಹೇಳಿದರು.
ಜಿ.ಪಂ ಸಿಇಒ ಜಿ.ಪ್ರಭು, ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿ ಜಿಲ್ಲಾ ಅಧ್ಯಕ್ಷ ಜಿ.ಚಂದ್ರಶೇಖರಗೌಡ, ಉಪಾಧ್ಯಕ್ಷರಾದ ಹನುಮಂತಯ್ಯ, ನರಸೀಯಪ್ಪ, ಅಂಬರೀಶ್, ಶಿವಪ್ರಸಾದ್, ಪಂಚಾಕ್ಷರಿ ಇತರರು ಹಾಜರಿದ್ದರು.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC