ಬಿಬಿಎಂಪಿ ವ್ಯಾಪ್ತಿಯಲ್ಲಿ ‘ಗೃಹಲಕ್ಷ್ಮಿ’ ಯೋಜನೆ ಜಾರಿಗೊಳಿಸಲು ಎಲ್ಲಾ ವಾರ್ಡ್ ಕಚೇರಿಗಳಲ್ಲಿ ನೋಂದಣಿ ವ್ಯವಸ್ಥೆ ಮಾಡಲು ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಸೂಚನೆ ನೀಡಿದ್ದಾರೆ.
ಪಾಲಿಕೆಯ ಎಲ್ಲಾ ವಾರ್ಡ್ ಕಚೇರಿಗಳಲ್ಲಿ ಸಹಾಯ ಕೇಂದ್ರಗಳನ್ನು ತೆರೆದು ‘ಗೃಹಲಕ್ಷ್ಮಿ’ ಯೋಜನೆ ಫಲಾನುಭವಿಗಳು ನೋಂದಾಯಿಸಿಕೊಳ್ಳಲು ಅವಕಾಶ ಕಲ್ಪಿಸಬೇಕು. ಈ ನಿಟ್ಟಿನಲ್ಲಿ ವಲಯ ಮಟ್ಟದ ಅಧಿಕಾರಿಗಳು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಜೊತೆ ಸಮನ್ವಯ ಸಾಧಿಸಬೇಕು.
ಕಂದಾಯ ವಿಭಾಗದ ಉಪ ಆಯುಕ್ತರಾದ ಲಕ್ಷ್ಮೀದೇವಿ ಅವರನ್ನು ನೋಡಲ್ ಅಧಿಕಾರಿಯನ್ನಾಗಿ ನೇಮಿಸಲಾಗಿದೆ ಎಂದು ವರ್ಚ್ಯುಯಲ್ ಸಭೆಯಲ್ಲಿ ವಲಯ ಆಯುಕ್ತರಿಗೆ ತಿಳಿಸಿದರು. ಯೋಜನೆಗೆ ಅರ್ಜಿ ಸಲ್ಲಿಸುವ ಸಂಬಂಧ ಪ್ರತ್ಯೇಕ ಸಿಬ್ಬಂದಿಯನ್ನು ನಿಯೋಜಿಸಬೇಕು. ಆನ್‌ಲೈನ್ ಮೂಲಕ ಅರ್ಜಿ ನೋಂದಾಯಿಸಿಕೊಳ್ಳುವ ಫಲಾನುಭವಿಗಳಿಗೆ ಮಂಜೂರಾತಿ ಪತ್ರ ನೀಡಲು ತರಬೇತಿ ನೀಡಬೇಕು ಎಂದರು.
ಪ್ರತಿ ವಾರ್ಡ್ ಕಚೇರಿ ಮುಂಭಾಗವೂ ‘ಗೃಹಲಕ್ಷ್ಮಿ’ ಯೋಜನೆ ನೋಂದಣಿ ಕೇಂದ್ರ ಎಂಬ ಬ್ಯಾನರ್ ಅಳವಡಿಸಬೇಕು. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ವತಿಯಿಂದ ಆಡಿಯೊ, ವಿಡಿಯೊ ಕ್ಲಿಪ್ಸ್ ಪಡೆದು ನಗರದ ಜನದಟ್ಟಣೆ ಪ್ರದೇಶ, ಕೊಳೆಗೇರಿಗಳಲ್ಲಿ ಹೆಚ್ಚಿನ ಪ್ರಚಾರ ನೀಡಬೇಕು.ಎಲ್ಲ ಫಲಾನುಭವಿಗಳು ನೋಂದಣಿ ಮಾಡಿಕೊಳ್ಳುವಂತೆ ಕ್ರಮವಹಿಸಲು ಅಧಿಕಾರಿಗಳಿಗೆ ಸೂಚನೆ ನೀಡಿದರು.
ವೆಬ್‌ಸೈಟ್‌ನಲ್ಲಿ ಮಾಹಿತಿ ವಾರ್ಡ್ ಕಚೇರಿಗಳಲ್ಲಿ ಸಹಾಯ ಕೇಂದ್ರಗಳ ವಿಳಾಸ, ಇತರೆ ಮಾಹಿತಿಯನ್ನು ಪಾಲಿಕೆಯ ವೆಬ್‌ಸೈಟ್‌ನಲ್ಲಿ ಪ್ರಕಟಿಸಲು ಅಧಿಕಾರಿಗಳಿಗೆ ತುಷಾರ್ ಗಿರಿನಾಥ್ ಆದೇಶಿಸಿದರು.
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/IHoly2pCaZPEkuV6RjAGNC
ಯೂಟ್ಯೂಬ್ ಚಾನೆಲ್ Subscribe ಮಾಡಿ: https://www.youtube.com/channel/UCtrQuDOToxHu8dzMaHjoYXA


