ರಾಜಧಾನಿ ದೆಹಲಿಯಲ್ಲಿ ಕಾಂಗ್ರೆಸ್ ಪಕ್ಷವು ಕೇಂದ್ರದ ಮೋದಿ ಸರ್ಕಾರದ ವಿರುದ್ಧ ಪ್ರತಿಭಟನೆ ಮತ್ತು ಮೆರವಣಿಗೆ ನಡೆಸುತ್ತಿದೆ. ರಾಹುಲ್ ಗಾಂಧಿ, ಪ್ರಿಯಾಂಕಾ ಗಾಂಧಿ ಸೇರಿದಂತೆ ಎಲ್ಲಾ ಕಾಂಗ್ರೆಸ್ ನಾಯಕರು ಸಂಸತ್ ಭವನ ಮತ್ತು ರಾಷ್ಟ್ರಪತಿ ಭವನದ ಕಡೆಗೆ ಕಪ್ಪು ಬಟ್ಟೆ ಧರಿಸಿ ಪ್ರತಿಭಟನೆ ಜಾಥಾ ಹೊರಟಿದ್ದರು. ಈ ವೇಳೆ ದೆಹಲಿ ಪೊಲೀಸರು ರಾಹುಲ್ ಗಾಂಧಿ ಸೇರಿದಂತೆ ಹಲವು ಕಾಂಗ್ರೆಸ್ ಸಂಸದರನ್ನು ವಶಕ್ಕೆ ಪಡೆದುಕೊಂಡಿದ್ದಾರೆ.
ದೆಹಲಿ ಪೊಲೀಸರ ಮೇಲೆ ಹಲ್ಲೆ ಆರೋಪ:
ಕಸ್ಟಡಿಗೆ ತೆಗೆದುಕೊಳ್ಳುವ ಮೊದಲು ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, “ಪಕ್ಷದ ಕಾರ್ಯಕರ್ತರ ಮೇಲೆ ದೆಹಲಿ ಪೊಲೀಸರು ಹಲ್ಲೆ ನಡೆಸಿದ್ದಾರೆ. ಹಣದುಬ್ಬರ ಮತ್ತು ನಿರುದ್ಯೋಗ ಸಮಸ್ಯೆಗಳ ವಿರುದ್ಧ ನಾವು ದನಿ ಎತ್ತುತ್ತಿದ್ದೇವೆ. ಆದರೆ ಪೊಲೀಸರು ನಮಗೆ ಮುಂದುವರೆಯಲು ಅವಕಾಶ ನೀಡಲಿಲ್ಲ” ಎಂದು ಹೇಳಿದ್ದಾರೆ.
“ಈ ಶಕ್ತಿಗಳನ್ನು ವಿರೋಧಿಸುವುದು ನಮ್ಮ ಕೆಲಸ. ಭಾರತೀಯ ಪ್ರಜಾಪ್ರಭುತ್ವವನ್ನು ರಕ್ಷಿಸುವುದು ನಮ್ಮ ಕೆಲಸ. ಹಣದುಬ್ಬರ ಮತ್ತು ನಿರುದ್ಯೋಗದಂತಹ ಜನರ ಸಮಸ್ಯೆಗಳನ್ನು ತೊಡೆದುಹಾಕುವುದು ನಮ್ಮ ಕೆಲಸ ಮತ್ತು ನಾವು ಅದನ್ನೇ ಮಾಡುತ್ತಿದ್ದೇವೆ” ಎಂದರು.
ಸಂಸತ್ ಭವನದಿಂದ ಪಕ್ಷದ ಸಂಸದರ ಮೆರವಣಿಗೆ ಪ್ರಾರಂಭವಾಗುವ ಮೊದಲು, ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಮೆರವಣಿಗೆಯಲ್ಲಿ ಸ್ವಲ್ಪ ಸಮಯ ಭಾಗಿಯಾಗಿದ್ದರು. ಪಕ್ಷದ ಸಂಸದರು ಕಪ್ಪು ಬಟ್ಟೆ ಧರಿಸಿ ಮೆರವಣಿಗೆ ಮಾಡುತ್ತಿದ್ದ ಸಂದರ್ಭದಲ್ಲಿ ವಿಜಯ್ ಚೌಕ್‌ನಲ್ಲಿಯೇ ಕಾಂಗ್ರೆಸ್ ಮುಖಂಡರನ್ನು ಪೊಲೀಸರು ತಡೆದಿದ್ದಾರೆ.
ಇನ್ನು ಈ ಘಟನೆ ಈ ಕುರಿತು ಟ್ವೀಟ್ ಮಾಡಿರುವ ರಾಹುಲ್ ಗಾಂಧಿ, “ಹಣದುಬ್ಬರ, ನಿರುದ್ಯೋಗ, ನೀತಿಗಳು ತಂದ ನಾಶದಿಂದ ಈ ಸರ್ವಾಧಿಕಾರಿ ಸರ್ಕಾರಕ್ಕೆ ಭಯವಾಗುತ್ತಿದೆ. ಸತ್ಯಕ್ಕೆ ಹೆದರುವವನು ಧ್ವನಿ ಎತ್ತುವವರಿಗೆ ಬೆದರಿಕೆ ಹಾಕುತ್ತಾನೆ” ಎಂದು ಹೇಳಿದ್ದಾರೆ.
ಇನ್ನು ಈ ಸಂದರ್ಭದಲ್ಲಿ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್ ಟ್ವೀಟ್ ಮಾಡಿ, ‘ಇಂದು ಮತ್ತೊಮ್ಮೆ ಕಾಂಗ್ರೆಸ್ ಸಂಸದರಿಗೆ ಹಣದುಬ್ಬರ, ನಿರುದ್ಯೋಗ ಮತ್ತು ಜಿಎಸ್‌ಟಿ ವಿರುದ್ಧ ಪ್ರತಿಭಟಿಸುವ ಪ್ರಜಾಸತ್ತಾತ್ಮಕ ಹಕ್ಕನ್ನು ತಡೆಯಲಾಗಿದೆ. ವಿಜಯ್ ಚೌಕ್ ನಲ್ಲಿ ನಮ್ಮನ್ನು ಪೊಲೀಸ್ ವ್ಯಾನ್‌ನಲ್ಲಿ ತುಂಬಿಸಲಾಯಿತು. ಒಂದು ವಿಷಯ ಸ್ಪಷ್ಟವಾಗಿದೆ, ಭಯಪಡುವವರು ಮಾತ್ರ ಹೆದರಿಸಲು ಪ್ರಯತ್ನಿಸುತ್ತಾರೆ” ಎಂದು ಹೇಳಿದ್ದಾರೆ.
ವರದಿ: ಆಂಟೋನಿ ಬೇಗೂರು
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/JpBVbh0ffuQ4Xiseh6vKbz