ಹೊಳೆನರಸೀಪುರ: ಹಾಸನ ಜಿಲ್ಲೆಯ ಹೊಳೆನರಸೀಪುರ ಪಟ್ಟಣದ ಕೆಎಸ್ ಆರ್ ಟಿಸಿ ಬಸ್ ನಿಲ್ದಾಣಕ್ಕೆ ತಾಲ್ಲೂಕು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿಯ ಅಧ್ಯಕ್ಷರಾದ ಶಿವಕುಮಾರ್ ಅವರು ಇಂದು ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಈ ವೇಳೆ ಬಸ್ ನಿಲ್ದಾಣದ ಆವರಣದಲ್ಲಿ ಎಲ್ಲೆಂದರಲ್ಲಿ ಕಸ ಬಿದ್ದಿರುವುದು ಮತ್ತು ನಿರ್ವಹಣೆಯ ಕೊರತೆಯನ್ನು ಕಂಡ ಶಿವಕುಮಾರ್ ಅವರು ತೀವ್ರ ಅಸಮಾಧಾನ ವ್ಯಕ್ತಪಡಿಸಿದರು. ಸಾರ್ವಜನಿಕರು ದಿನನಿತ್ಯ ಬಳಸುವ ಈ ಪ್ರದೇಶದಲ್ಲಿ ನೈರ್ಮಲ್ಯ ಕಾಪಾಡದಿರುವುದಕ್ಕೆ ಅಧಿಕಾರಿಗಳನ್ನು ಮತ್ತು ಟೆಂಡರ್ ದಾರರನ್ನು ತರಾಟೆಗೆ ತೆಗೆದುಕೊಂಡರು. “ಪ್ರಯಾಣಿಕರ ಹಿತದೃಷ್ಟಿಯಿಂದ ಬಸ್ ನಿಲ್ದಾಣವನ್ನು ಪ್ರತಿ ಗಂಟೆಗೊಮ್ಮೆ ಕಡ್ಡಾಯವಾಗಿ ಸ್ವಚ್ಛಗೊಳಿಸಬೇಕು” ಎಂದು ಅವರು ಕಟ್ಟುನಿಟ್ಟಿನ ಸೂಚನೆ ನೀಡಿದರು.

ಶೌಚಾಲಯಗಳ ದುಸ್ಥಿತಿಗೆ ಗರಂ:
ನಿಲ್ದಾಣದ ಶೌಚಾಲಯಗಳಿಗೆ ಭೇಟಿ ನೀಡಿದ ಸಂದರ್ಭದಲ್ಲಿ ಅಲ್ಲಿನ ಧೂಳು ಮತ್ತು ಅವ್ಯವಸ್ಥೆಯನ್ನು ಕಂಡು ಅಧಿಕಾರಿಗಳ ವಿರುದ್ಧ ಕಿಡಿಕಾರಿದರು. ಶೌಚಾಲಯಗಳನ್ನು ಕೂಡಲೇ ಶುಚಿಗೊಳಿಸಿ ಸಾರ್ವಜನಿಕ ಬಳಕೆಗೆ ಯೋಗ್ಯವಾಗುವಂತೆ ಸಿದ್ಧಪಡಿಸಬೇಕು ಎಂದು ಆದೇಶಿಸಿದರು. ಇದೇ ವೇಳೆ ಪ್ರಯಾಣಿಕರೊಂದಿಗೆ ಚರ್ಚಿಸಿದ ಅವರು, ಬಸ್ ನಿಲ್ದಾಣದಲ್ಲಿ ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆ ಮಾಹಿತಿ ಪಡೆದರು.
ಈ ಸಂದರ್ಭದಲ್ಲಿ ಕೆಎಸ್ ಆರ್ ಟಿಸಿ ಘಟಕ ಅಧಿಕಾರಿ ಪಾಪನಾಯಕ್, ಸಮಿತಿ ಸದಸ್ಯರುಗಳಾದ ಗೋವಿಂದರಾಜು, ಯೋಗಣ್ಣ, ಶಿವರಾಜು, ಪ್ರಸನ್ನ ಕುಮಾರ್, ದೊಡ್ಡಳ್ಳಿ ಲೋಕೇಶ್ , ಮುಖಂಡರುಗಳಾದ ಚಿಗಳ್ಳಿ ಶಿವಣ್ಣ, ಹರೀಶ್ ಗೌಡ, ರಂಗಸ್ವಾಮಿ ಹಾಗೂ ಹಲವಾರು ಪ್ರಯಾಣಿಕರು ಹಾಜರಿದ್ದರು.
ವರದಿ: ಮಂಜು ಶ್ರವಣೂರು
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC


