ಅಹಮದಾಬಾದ್: ಗುಜರಾತ್ ವಿಧಾನಸಭೆ ಚುನಾವಣೆಗೆ ಸಿದ್ಧತೆ ನಡೆಸುತ್ತಿರುವ ಆಮ್ ಆದ್ಮಿ ಪಕ್ಷದ ಕಚೇರಿ ಮೇಲೆ ಪೊಲೀಸರು ದಾಳಿ ನಡೆಸಿದ್ದಾರೆ. ಈ ದಾಳಿ ರಾಜಕೀಯ ವಾಕ್ಸಮರಕ್ಕೆ ಕಾರಣವಾಗಿದೆ.
ಪೊಲೀಸರ ದಾಳಿ ಕುರಿತು ಪ್ರತಿಕ್ರಿಯೆ ನೀಡಿರುವ ಆಮ್ ಆದ್ಮಿ ಪಕ್ಷ ಗುಜರಾತ್‌ನಲ್ಲಿ ಎಎಪಿ ಪಕ್ಷಕ್ಕೆ ಸಿಗುತ್ತಿರುವ ಜನ ಬೆಂಬಲ ಕಂಡು ಬಿಜೆಪಿ ಆತಂಕಗೊಂಡಿದೆ. ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅಹಮದಾಬಾದ್‌ಗೆ ಬಂದಾಗಲೇ ಈ ದಾಳಿ ನಡೆಸಲಾಗಿದೆ ಎಂದು ದೂರಿದೆ.
ಪೊಲೀಸರ ದಾಳಿ ಕುರಿತು ಅರವಿಂದ್ ಕೇಜ್ರಿವಾಲ್ ಪ್ರತಿಕ್ರಿಯೆ ನೀಡಿದ್ದು, “ಪಕ್ಷದ ಕಚೇರಿಯಲ್ಲಿರುವ ನಾಯಕರು, ಕಾರ್ಯಕರ್ತರು ಪ್ರಮಾಣಿಕರು. ಕಚೇರಿಯಲ್ಲಿ ಪೊಲೀಸರಿಗೆ ಏನೂ ಸಿಕ್ಕಿಲ್ಲ” ಎಂದು ಹೇಳಿದ್ದಾರೆ.
ಎಎಪಿ ಕಚೇರಿ ಮೇಲೆ ದಾಳಿ ಏಕೆ ನಡೆಸಲಾಗಿದೆ?. ದಾಳಿಯ ವೇಳೆ ಸಿಕ್ಕಿರುವುದು ಏನು? ಎಂಬ ಬಗ್ಗೆ ಗುಜರಾತ್ ಪೊಲೀಸರು ಯಾವುದೇ ಮಾಹಿತಿ ನೀಡಿಲ್ಲ. ಆದರೆ, ಈ ದಾಳಿ ಎಎಪಿ ಮತ್ತು ಬಿಜೆಪಿ ನಡುವೆ ರಾಜ್ಯದಲ್ಲಿ ವಾಕ್ಸಮರಕ್ಕೆ ಕಾರಣವಾಗಿದೆ.
“ದೆಹಲಿ ಬಳಿಕ ಗುಜರಾತ್‌ನಲ್ಲಿಯೂ ದಾಳಿಗಳು ಆರಂಭವಾಗಿವೆ. ದೆಹಲಿಯಲ್ಲಿ ಏನೂ ಸಿಗಲಿಲ್ಲ, ಗುಜರಾತ್‌ನಲ್ಲಿಯೂ ಏನೂ ಸಿಕ್ಕಿಲ್ಲ. ನಾವು ಪ್ರಮಾಣಿಕರು” ಎಂದು ಅರವಿಂದ್ ಕೇಜ್ರಿವಾಲ್ ಹಿಂದಿಯಲ್ಲಿ ಟ್ವೀಟ್ ಮಾಡಿದ್ದಾರೆ.
ಗುಜರಾತ್ ಬಿಜೆಪಿ ಘಟಕದ ವಿರುದ್ಧ ಅರವಿಂದ್ ಕೇಜ್ರಿವಾಲ್ ವಾಗ್ದಾಳಿ ನಡೆಸಿದ್ದು, “ಎರಡು ಗಂಟೆಗಳ ಕಾಲ ಪರಿಶೀಲನೆ ನಡೆಸಿದರೂ ಪಕ್ಷದ ಕಚೇರಿಯಲ್ಲಿ ಪೊಲೀಸರಿಗೆ ಏನೂ ಸಿಕ್ಕಿಲ್ಲ. ಗುಜರಾತ್‌ನಲ್ಲಿ ಬಿಜೆಪಿ ಅಧಿಕಾರ ದುರುಪಯೋಗ ಮಾಡಿಕೊಳ್ಳುತ್ತಿದೆ. ಪಕ್ಷಕ್ಕೆ ಸಿಗುತ್ತಿರುವ ಬೆಂಬಲ ನೋಡಿ ಅವರು ಆತಂಕಗೊಂಡಿದ್ದಾರೆ” ಎಂದು ಹೇಳಿದ್ದಾರೆ.
ಎಎಪಿಯ ಗುಜರಾತ್ ಘಟಕ ಟ್ವೀಟ್ ಮಾಡಿ, “ದೆಹಲಿ ಬಳಿಕ ಅವರು ಈಗ ಗುಜರಾತ್‌ನಲ್ಲಿ ದಾಳಿ ನಡೆಸಿದ್ದಾರೆ. ಅದು ದೆಹಲಿ ಆಗಲಿ, ಗುಜರಾತ್ ಆಗಲಿ ಅವರಿಗೆ ಏನೂ ಸಿಗುವುದಿಲ್ಲ” ಎಂದು ಹೇಳಿದೆ.
ಗುಜರಾತ್ ವಿಧಾನಸಭೆ ಚುನಾವಣೆ ಈ ವರ್ಷದ ಅಂತ್ಯದಲ್ಲಿ ನಡೆಯಲಿದೆ. ಪಕ್ಷಗಳು ಈಗಾಗಲೇ ತಯಾರಿ ಆರಂಭಿಸಿವೆ. ಗುಜರಾತ್ ಚುನಾವಣೆಗೆ ಎಎಪಿ ಈಗಾಗಲೇ ಅಭ್ಯರ್ಥಿಗಳನ್ನು ಘೋಷಣೆ ಮಾಡುತ್ತಿದೆ. ಅರವಿಂದ್ ಕೇಜ್ರಿವಾಲ್ ರಾಜ್ಯದಲ್ಲಿ ಪ್ರಚಾರವನ್ನು ಸಹ ಪ್ರಾರಂಭಿಸಿದ್ದಾರೆ.
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/JpBVbh0ffuQ4Xiseh6vKbz