ಸೋಲದೇವನಹಳ್ಳಿ ಠಾಣೆ ವ್ಯಾಪ್ತಿಯಲ್ಲಿ ರೂಪದರ್ಶಿ ವಿದ್ಯಾಶ್ರೀ (25) ಆತ್ಮಹತ್ಯೆ ಮಾಡಿಕೊಂಡಿದ್ದು, ಈ ಸಂಬಂಧ ಜಿಮ್ ತರಬೇತುದಾರ ಅಕ್ಷಯ್ ನನ್ನು (27) ಪೊಲೀಸರು ಬಂಧಿಸಿದ್ದಾರೆ.
‘ಕೆಂಪಾಪುರದ ನಿವಾಸಿ ವಿದ್ಯಾಶ್ರೀ, ಜುಲೈ 21ರಂದು ತಮ್ಮ ಮನೆಯಲ್ಲಿ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮನೆಯಲ್ಲಿ ಮರಣ ಪತ್ರ ಸಿಕ್ಕಿದೆ. ಮದುವೆಯಾಗುವುದಾಗಿ ಹೇಳಿ ವಂಚಿಸಿ ಆತ್ಮಹತ್ಯೆಗೆ ಪ್ರಚೋದನೆ ನೀಡಿರುವ ಆರೋಪದಡಿ ಪ್ರಕರಣ ದಾಖಲಿಸಿಕೊಂಡು ಸ್ನೇಹಿತ ಅಕ್ಷಯ್ ನನ್ನು ಬಂಧಿಸಲಾಗಿದೆ’ ಎಂದು ಪೊಲೀಸ್ ಮೂಲಗಳು ಹೇಳಿವೆ.
‘ಎಂಸಿಎ ಪದವೀಧರರಾದ ವಿದ್ಯಾಶ್ರೀ, ನಗರದ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದರು. ಅದರ ಜೊತೆ, ರೂಪದರ್ಶಿಯೂ ಆಗಿದ್ದರು. ‘ಮಿಸ್ ಆಂಧ್ರ’ ಕಿರೀಟವನ್ನೂ ಪಡೆದಿದ್ದರು. ಕೆಂಪಾಪುರದಲ್ಲಿ ತಾಯಿ ಜೊತೆ ವಾಸವಿದ್ದರು’ ಎಂದು ಮೂಲಗಳು ತಿಳಿಸಿವೆ.
‘ಆರೋಪಿ ಅಕ್ಷಯ್, ಮಂಡ್ಯದವ. ಪೋಷಕರ ಜೊತೆ ನಗರಕ್ಕೆ ಬಂದಿದ್ದ. ಬಸವೇಶ್ವರ ನಗರದಲ್ಲಿರುವ ಜಿಮ್ ನಲ್ಲಿ ತರಬೇತುದಾರನಾಗಿ ಕೆಲಸ ಮಾಡುತ್ತಿದ್ದ. ಈತನ ಕುಟುಂಬ ಸದ್ಯ ಕೆಂಗೇರಿ ಗೇಟ್ ಪ್ರದೇಶದಲ್ಲಿ ವಾಸವಿದೆ’ ಎಂದು ಹೇಳಿವೆ.
ಫೇಸ್‌ಬುಕ್‌ನಲ್ಲಿ ಸ್ನೇಹ: ‘ಸಾಮಾಜಿಕ ಮಾಧ್ಯಮ ಫೇಸ್ ಬುಕ್ ನಲ್ಲಿ ವಿದ್ಯಾಶ್ರೀ ಖಾತೆ ತೆರೆದಿದ್ದರು. ಅವರ ಖಾತೆಗೆ ಆರೋಪಿ ಅಕ್ಷಯ್ 2021ರಲ್ಲಿ ಫ್ರೆಂಡ್ ರಿಕ್ವೆಸ್ಟ್ ಕಳುಹಿಸಿದ್ದ. ಅದನ್ನು ವಿದ್ಯಾಶ್ರೀ ಸ್ವೀಕರಿಸಿದ್ದರು. ‘ನಾನು ನಿಮ್ಮ ಅಭಿಮಾನಿ’ ಎಂಬುದಾಗಿ ಹೇಳಿಕೊಂಡು ಮಾತನಾಡಲಾರಂಭಿಸಿದ್ದ ಅಕ್ಷಯ್, ವಿದ್ಯಾಶ್ರೀ ಸ್ನೇಹ ಸಂಪಾದಿಸಿದ್ದ’ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
‘ವಿದ್ಯಾಶ್ರೀ ಹಾಗೂ ಅಕ್ಷಯ್, ಪರಸ್ಪರ ಪ್ರೀತಿಸಲಾರಂಭಿಸಿದ್ದರು. ಹಲವು ಬಾರಿ ಭೇಟಿ ಸಹ ಆಗಿದ್ದರು. ಮದುವೆಯಾಗುವುದಾಗಿ ಹೇಳಿದ್ದ ಆರೋಪಿ, ವಿದ್ಯಾಶ್ರೀ ಕಡೆಯಿಂದ ಕೆ 1.76 ಲಕ್ಷ ಸಾಲ ಪಡೆದಿದ್ದ. ಜೊತೆಗೆ, ಲೈಂಗಿಕವಾಗಿ ಬಳಸಿಕೊಂಡಿದ್ದ’ ಎಂದು ಹೇಳಿವೆ.
ಹಣ ವಾಪಸು ಕೇಳಿದ್ದಕ್ಕೆ ಕಿರುಕುಳ: ‘ವಿದ್ಯಾಶ್ರೀ ಹಾಗೂ ಅಕ್ಷಯ್ ನಡುವೆ ಇತ್ತೀಚೆಗೆ ಮನಸ್ತಾಪ ಉಂಟಾಗಿತ್ತು. ತಾವು ನೀಡಿರುವ ಹಣವನ್ನು ವಾಪಸು ಕೊಡುವಂತೆ ವಿದ್ಯಾಶ್ರೀ ಒತ್ತಾಯಿಸಿದ್ದರು. ಅದಕ್ಕೆ ಒಪ್ಪದ ಆರೋಪಿ, ಕಿರುಕುಳ ನೀಡಲಾರಂಭಿಸಿದ್ದ. ಖಾಸಗಿ ಫೋಟೊಗಳನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಹರಿಬಿಡುವುದಾಗಿ ಬೆದರಿಸಲಾರಂಭಿಸಿದ್ದ’ ಎಂದು ತಿಳಿಸಲಾಗಿದೆ.
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/IHoly2pCaZPEkuV6RjAGNC
ಯೂಟ್ಯೂಬ್ ಚಾನೆಲ್ Subscribe ಮಾಡಿ: https://www.youtube.com/channel/UCtrQuDOToxHu8dzMaHjoYXA


