ಹೆಚ್.ಡಿ.ಕೋಟೆ: ತಾಲೂಕಿನ ಹಂಪಾಪುರ ಗ್ರಾಮದಲ್ಲಿರುವ ಕ್ಲಾಸಿಕ್ ಲಿಟಲ್ ಬಡ್ಸ್ ಶಾಲೆಯಲ್ಲಿ ಶನಿವಾರ ನಡೆದ ಉಚಿತ ಆರೋಗ್ಯ ತಪಾಸಣೆ ಶಿಬಿರದಲ್ಲಿ ಸುಮಾರು 500ಕ್ಕೂ ಹೆಚ್ಚು ಶಿಬಿರಾರ್ಥಿಗಳು ಪಾಲ್ಗೊಂಡು ಆರೋಗ್ಯ ತಪಾಸಣೆಗೆ ಒಳಗಾದರು.
ಕ್ಲಾಸಿಕ್ ಲಿಟಲ್ ಬಡ್ಸ್ ಎಜುಕೇಷನ್ ಟ್ರಸ್ಟ್, ಮೈಸೂರಿನ ಬಸವ ಅಕ್ಯು ಅಕಾಡೆಮಿ, ರೋಟರಿ ಸಂಸ್ಥೆಯಿಂದ ನಡೆದ ಆರೋಗ್ಯ ತಪಾಸಣೆಯಲ್ಲಿ ಹೈ ಬಿಪಿ, ಅಜೀರ್ಣ, ನಿದ್ರಾಹೀನತೆ, ಅಲರ್ಜಿ, ಅಸ್ತಮಾ, ಕೂದಲು ಉದುರುವಿಕೆ, ಮೊಡವೆ ಸಮಸ್ಯೆ, ಮಂಡಿನೋವು, ಥೈರಾಯ್ಡ್, ಫೈಲ್ಸ್, ಬೆನ್ನುನೋವು ಸೇರಿದಂತೆ ಚರ್ಮದ ಕಾಯಿಗಳಿಗೆ ನುರಿತ ತಜ್ಞರು ಕಲರ್ ಥೆರಪಿ, ಅಕ್ಯುಫ್ರೆಸರ್, ಸೀಡ್ ಥೆರಪಿ ನಡೆಸಿ, ಔಷಧಿ ರಹಿತ ಚಿಕಿತ್ಸೆ ನೀಡಿದರು.
ಆರೋಗ್ಯವೇ ಭಾಗ್ಯ: ಶಾಲಾ ಆವರಣದಲ್ಲಿ ನಡೆದ ವೇದಿಕೆ ಕಾರ್ಯಕ್ರಮದಲ್ಲಿ ಮಾದಾಪುರ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ.ಚಂದ್ರಕಲಾ ಮಾತನಾಡಿ, ಆಹಾರ ಕ್ರಮ ಬದಲಾವಣೆಯಿಂದ ಆನೇಕ ರೋಗಗಳು ಮನುಷ್ಯನ ದೇಹವನ್ನು ಸೇರಿಕೊಳ್ಳುತ್ತಿವೆ. ಒಮ್ಮೆ ಅನಾರೋಗ್ಯಕ್ಕೆ ತುತ್ತಾದರೆ ಚೇತರಿಸಿಕೊಳ್ಳುವುದು ತುಂಬಾ ಕಷ್ಟ. ಹೀಗಾಗಿ ಆರೋಗ್ಯವಂತರಾಗಿರಲು ಎಲ್ಲರೂ ಪಣ ತೊಡಬೇಕು. ಆರೋಗ್ಯವೇ ಭಾಗ್ಯ ಎಂಬುದನ್ನು ಮರೆಯಬಾರದು. ಜೀವನ ಶೈಲಿ ಉತ್ತಮವಾಗಿದ್ದರೆ ಮಾತ್ರ ಉತ್ತಮ ಆರೋಗ್ಯ ಕಾಣಲು ಸಾಧ್ಯ ಎಂದು ಕಿವಿಮಾತು ಹೇಳಿದರು.
ಬಸವ ಅಕ್ಯು ಅಕಾಡೆಮಿಯ ಚಿಕಿತ್ಸಾ ತಜ್ಞ ಸೈಯದ್ ಅಬ್ಜಲ್ ಪಾಷಾ ಮಾತನಾಡಿ, ಕಳಪೆ, ರಾಸಾಯನಿಕ ಆಹಾರ ಪದಾರ್ಥಗಳಿಗೆ ಮಾರು ಹೋಗಬಾರದು. ಬದಲಿಗೆ ದೇಶಿ ಆಹಾರ ಪದಾರ್ಥಗಳಿಗೆ ಹೆಚ್ಚಿನ ಒತ್ತು ನೀಡಬೇಕು. ಗುಣಮಟ್ಟದ ಆಹಾರ ಸೇವಿಸಿದರೆ ಮಾತ್ರ ಆರೋಗ್ಯವಂತ ಮನುಷ್ಯನನ್ನು ಕಾಣಬಹುದು. ಈ ನಿಟ್ಟಿನಲ್ಲಿ ಎಲ್ಲರೂ ಮುಂದಾಗಬೇಕು ಎಂದು ಹೇಳಿದರು.
ಶನೇಶ್ವರ ಚಾರಿಟಬಲ್ ಟ್ರಸ್ಟ್ ಅಧ್ಯಕ್ಷ ಕುಮಾರಸ್ವಾಮಿ ಕಾರ್ಯಕ್ರಮ ಉದ್ಘಾಟಿಸಿದರು. ಮೈಸೂರಿನ ಹಿರಿಯ ಲೇಖಕಿ ವಾಣಿ ಸುಬ್ಬಯ್ಯ ಮಾತನಾಡಿದರು. ಬಸವ ಅಕ್ಯು ಅಕಾಡೆಮಿಯ ಚಿಕಿತ್ಸಾ ತಜ್ಞರಾದ ನವೀನ್ ಕುಮಾರ್, ಕೃಷ್ಣಕುಮಾರ್, ಕ್ಲಾಸಿಕ್ ಲಿಟಲ್ ಬಡ್ಸ್ ಎಜುಕೇಷನ್ ಟ್ರಸ್ಟ್ ಅಧ್ಯಕ್ಷ ನರಸಿಂಹರಾಜು, ಶಾಲಾ ಮುಖ್ಯ ಶಿಕ್ಷಕಿ ದೀಪಾ, ಸಹ ಶಿಕ್ಷಕಿಯರಾದ ಸೌಮ್ಯ, ಅಪ್ಸನಾ, ರಂಜಿತಾ, ರೋಚಿಣಿ, ಕೆ.ಎನ್.ದೀಪಾಶ್ರೀ, ಸುಮಾ, ಲೇಖನ್‌ಕುಮಾರ್, ಸಂಸ್ಥೆ ಉಪಾಧ್ಯಕ್ಷ ಸಿದ್ದರಾಜು, ಬಸವ ಅಕ್ಯು ಅಕಾಡೆಮಿಯ ಪದಾಧಿಕಾರಿಗಳು, ಶಿಬಿರಾರ್ಥಿಗಳು ಹಾಜರಿದ್ದರು.
ವರದಿ: ಮಲಾರ ಮಹದೇವಸ್ವಾಮಿ
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Bc4BbJiZ9pF3L0M4QgZdQ4