ಬೆಂಗಳೂರಿನ ನಗರದ ಮಲ್ಲಿಗೇನಹಳ್ಳಿ ಸಮೀಪದ ತುಂಗಾ ಮೇಲ್ದಂಡೆ ಇಲಾಖೆಗೆ ಸೇರಿದ ಜಾಗದಲ್ಲಿ ಅಕ್ರಮವಾಗಿ ಕಟ್ಟಿಕೊಂಡಿರುವ ಮನೆಗಳನ್ನು ನೀರಾವರಿ ಇಲಾಖೆಯವರು ಪೊಲೀಸರ ನೆರವಿನೊಂದಿಗೆ ತೆರವುಗೊಳಿಸಿದರು.
ಈ ವೇಳೆ ಪ್ರತಿಭಟನಾನಿರತ ನಿವಾಸಿಗಳು ಪ್ರತಿಭಟನೆ ನಡೆಸಿದರು ಕೆಲವರು ತುಂಗಾ ಮೇಲ್ದಂಡೆ ಮೇಲಿಂದ ಹಾರಲೂ ಸಹ ಪ್ರಯತ್ನ ಪಟ್ಟರು. ಆದರೆ ಅಧಿಕಾರಿಗಳು ಮಾತ್ರ ಕೆಲ ಮನೆಗಳನ್ನ ಒಡೆದು ಇನ್ನುಳಿದವರಿಗೆ ವಾರ್ನಿಂಗ್ ಮಾಡಿ ತೆರಳಿದರು.
ಮಲ್ಲಿಗೇನಹಳ್ಳಿ ಸಮೀಪದ ಅಂಬೇಡ್ಕರ್ ಕಾಲೋನಿಯಲ್ಲಿ ನೀರಾವರಿ ಇಲಾಖೆಯ ತುಂಗಾ ಮೇಲ್ದಂಡೆ ಯೋಜನೆಯ ಬಫರ್ ಜೋನ್ ನಲ್ಲಿ ಸುಮಾರು 5 ಎಕರೆ 3 ಗುಂಟೆ ಜಾಗ ಒತ್ತುವರಿ ಆಗಿದ್ದೆ. ಹೈಕೋರ್ಟ್ ಇತ್ತೀಚೆಗೆ ಆದೇಶ ನೀಡಿ ನೀರಾವರಿ ಇಲಾಖೆಯ ಜಮೀನಿನ ಒತ್ತುವರಿ ತೆರವು ಮಾಡಬೇಕೆಂದು ಆದೇಶ ನೀಡಿತ್ತು. ಈ ಹಿನ್ನಲೆ ಸೋಮವಾರ ಮನೆ ತೆರವು ಕಾರ್ಯಾಚರಣೆಗೆ ಅಧಿಕಾರಿಗಳು ಕಾರ್ಯಪ್ರವೃತ್ತರಾದರು.
ನೀರಾವರಿ ಇಲಾಖೆಗೆ ಸೇರಿದ 5 ಎಕರೆ 3 ಗುಂಟೆ ಜಾಗದಲ್ಲಿ ಸುಮಾರು 200 ಮನೆಗಳನ್ನು ಹಕ್ಕಿಪಿಕ್ಕಿ, ಎಸ್ ಸಿ ಹಾಗೂ ಎಸ್ ಟಿ ಸಮುದಾಯದ ಜನಾಂಗದವರು ನಿರ್ಮಿಸಿಕೊಂಡಿದ್ದರು. ಇದರಲ್ಲಿ 120 ಮನೆಗಳು ಅನಧಿಕೃತ ಜಾಗದಲ್ಲಿವೆ. ಈ ಹಿಂದೆ ಜಾಗ ತೆರವುಗೊಳಿಸುವಂತೆ ನೀರಾವರಿ ಇಲಾಖೆ ನೋಟೀಸ್ ನೀಡಿದ್ದರೂ ಯಾವುದೇ ಉತ್ತರ ನೀಡಿಲ್ಲದ್ದ ಕಾರಣ ಅಧಿಕಾರಿಗಳು ಪೊಲೀಸ್ ಇಲಾಖೆ ನೆರವಿನೊಂದಿಗೆ ತೆರವು ಕಾರ್ಯಾಚರಣೆ ನಡೆಸಿದರು.
ಮಾತಿನ ಚಕಮಕಿ:
ಮನೆ ತೆರವು ಕಾರ್ಯಾಚರಣೆ ವಿರೋಧಿಸಿ ದಲಿತ ಸಂಘರ್ಷ ಸಮಿತಿ ಮುಖಂಡರು ಸ್ಥಳದಲ್ಲಿ ಧರಣಿ ನಡೆಸಿದರು. ಈಗಾಗಲೇ ಈ ಮನೆಗಳಿಗೆ ವಿದ್ಯುತ್ ಸಂಪರ್ಕ ನೀಡಲಾಗಿದ್ದು, ಕಳೆದ 7-8 ವರ್ಷಗಳಿಂದ ವಿದ್ಯುತ್ ನೀಡಲಾಗಿದೆ. ಆಧಾರ್ ಕಾರ್ಡ್, ಪಡಿತರ ಚೀಟಿ, ಮತದಾರ ಚೀಟಿ ನೀಡಿದ್ದು, ಇಲ್ಲಿ ಸರ್ಕಾರದ ಅಂಗನವಾಡಿ ಕೂಡ ಇದೆ ಎಂದು ಸ್ಥಳೀಯರು ಹೇಳಿದರು. ಆದರೂ, ನಿರಾವರಿ ಇಲಾಖೆ ಸುಮಾರು ಪೊಲೀಸರ ನೆರವಿನೊಂದಿಗೆ ತೆರವಿಗೆ ಮುಂದಾದಾಗ ತೀವ್ರ ಆಕ್ರೋಶ ವ್ಯಕ್ತಪಡಿಸಿದರು.
ಪ್ರತಿಭಟನಾನಿರತರ ಜೊತೆ ಮಾತನಾಡಿದ ಎಕ್ಸಿಕ್ಯೂಟಿವ್ ಇಂಜಿನಿಯರ್ ಸುರೇಶ್, ನೀವು ತಡೆ ನೀಡಲು ಕೋರ್ಟ್‌ನಿಂದ ತಡೆಯಾಜ್ಣೆ ತಂದಿಲ್ಲ. ಹಾಗಾಗಿ ತೆರವುಗೊಳಿಸುತ್ತಿದ್ದೇವೆ. ಕರ್ತವ್ಯಕ್ಕೆ ಅಡ್ಡಿಪಡಿಸಬೇಡಿ ಎಂದು ಮನವಿ ಮಾಡಿದರು.
20 ನಿಮಿಷ ಕಾಲಾವಕಾಶ ಕೊಟ್ಟ ಅಧಿಕಾರಿಗಳು:
ಮನೆ ತೆರವು ಕಾರ್ಯಾಚರಣೆಗೆ ಅಡ್ಡಿಪಡಿಸದಂತೆ ನೀರಾವರಿ ಇಲಾಖೆ ಅಧಿಕಾರಿಗಳು ಪ್ರತಿಭಟನಾನಿರತ ಸ್ಥಳೀಯ ನಿವಾಸಿಗಳಿಗೆ 20 ನಿಮಿಷ ಕಾಲಾವಕಾಶ ನೀಡಿದರು. ಆದರೆ ಸ್ಥಳೀಯ ಜೆಸಿಬಿ ಯಂತ್ರಗಳ ಮುಂದೆ ಮಲಗಿ ಕಾರ್ಯಾಚರಣೆಗೆ ಅಡ್ಡಿಪಡಿಸಿದರು. ಅಧಿಕಾರಿಗಳು ಯಾವುದಕ್ಕೂ ಬಗ್ಗದೆ ಮನೆ ತೆರವು ಕಾರ್ಯಾಚರಣೆ ನಡೆಸಿದರು. ಖಾಲಿ ಇರುವ 4 ಮನೆಗಳನ್ನು ನೆಲಸಮಗೊಳಿಸಿದ್ದು, ವಾಸವಿರುವವರಿಗೆ 15 ದಿನದ ಗಡುವು ನೀಡಿ ಕಾರ್ಯಾಚರಣೆ ಮುಂದೂಡಲಾಗಿದೆ. ಪ್ರತಿಭಟನೆ ಕೈಗೊಂಡು ತೆರವು ಕಾರ್ಯಾಚರಣೆಗೆ ಅಡ್ಡಿಪಡಿಸಿದವರನ್ನು ಪೊಲೀಸರು ವಾಹನದಲ್ಲಿ ಕರೆದೊಯ್ದರು.
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/JpBVbh0ffuQ4Xiseh6vKbz


