ತುರುವೇಕೆರೆ: ತಾಲ್ಲೂಕಿನ ದಂಡಿನಶಿವರ ಹೋಬಳಿಯ ಹಂಪಲಾಪುರ ಸಮೀಪದ ಜಮೀನಿನಲ್ಲಿ ದಲಿತರಿಗೆ ಮಂಜೂರಾಗಿರುವ ಭೂಮಿಯನ್ನು ಉಳುಮೆ ಮಾಡಲು ಬಿಡದೆ, ತಾಲ್ಲೂಕು ಆಡಳಿತ ಹಾಗೂ ಪೊಲೀಸರು ಒಕ್ಕಲೆಬ್ಬಿಸುತ್ತಿದ್ದಾರೆ ಎಂದು ಆರೋಪಿಸಿ ದಲಿತ ಸಂಘರ್ಷ ಸಮಿತಿ (ಡಿಎಸ್‌ಎಸ್) ನೇತೃತ್ವದಲ್ಲಿ ಸೋಮವಾರ ಬೃಹತ್ ಪ್ರತಿಭಟನೆ ನಡೆಸಲಾಯಿತು.
ದಲಿತ ರೈತರು ಹಲವು ವರ್ಷಗಳಿಂದ ಸಾಗುವಳಿ ಮಾಡುತ್ತಿದ್ದು, ಮಂಜೂರಾತಿ ಪತ್ರವನ್ನೂ ಹೊಂದಿದ್ದಾರೆ. ಆದರೆ, ಈ ಜಮೀನು ಅರಣ್ಯ ಇಲಾಖೆಗೆ ಸೇರಿದ್ದೆಂದು ಹೇಳಿ ತಾಲ್ಲೂಕು ಆಡಳಿತ ರೈತರನ್ನು ಅಲ್ಲಿಂದ ತೆರವುಗೊಳಿಸಲು ಪ್ರಯತ್ನಿಸುತ್ತಿದೆ ಎಂದು ಪ್ರತಿಭಟನಾಕಾರರು ದೂರಿದ್ದಾರೆ.
ಜಮೀನಿನಲ್ಲಿ ಕೆಲಸ ಮಾಡಲು ಬಂದಿದ್ದ ಟ್ರ್ಯಾಕ್ಟರ್‌ಗಳನ್ನು ದಂಡಿನಶಿವರ ಪೊಲೀಸರು ವಾಪಸ್ ಕಳುಹಿಸುವ ಮೂಲಕ ದಲಿತ ವಿರೋಧಿ ನೀತಿ ಅನುಸರಿಸುತ್ತಿದ್ದಾರೆ. ಮೇಲ್ವರ್ಗದವರು ಉಳುಮೆ ಮಾಡುವಾಗ ಯಾವುದೇ ಅಡ್ಡಿಪಡಿಸದ ಆಡಳಿತ, ದಲಿತರ ವಿಷಯದಲ್ಲಿ ಮಾತ್ರ ತಾರತಮ್ಯ ಮಾಡುತ್ತಿದೆ ಎಂದು ಆರೋಪಿಸಲಾಗಿದೆ.
ಸರ್ಕಾರ ದಲಿತರಿಗೆ ಮಂಜೂರಾದ ಜಮೀನಿನ ರಕ್ಷಣೆಗೆ ಆದೇಶ ನೀಡಿದ್ದರೂ ಸ್ಥಳೀಯ ಅಧಿಕಾರಿಗಳು ಅದನ್ನು ಪಾಲಿಸುತ್ತಿಲ್ಲ. ನ್ಯಾಯ ಸಿಗುವವರೆಗೂ ಜಮೀನಿನಲ್ಲಿಯೇ ಅಹೋರಾತ್ರಿ ಪ್ರತಿಭಟನೆ ಮುಂದುವರಿಸುವುದಾಗಿ ರೈತರು ಎಚ್ಚರಿಸಿದ್ದಾರೆ.
ಈ ಸಂದರ್ಭದಲ್ಲಿ ಡಿಎಸ್‌ಎಸ್ ಮುಖಂಡ ಕುಣಿಕೇನಹಳ್ಳಿ ಜಗದೀಶ್, ಜಿಲ್ಲಾ ಸಂಚಾಲಕ ರಾಮಾಂಜನಯ್ಯ ಹಾಗೂ ಹಂಪಲಾಪುರ ಭಾಗದ ನೂರಾರು ದಲಿತ ರೈತರು ಉಪಸ್ಥಿತರಿದ್ದರು.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC


