ಸರಗೂರು: ನಮ್ಮ ನಡೆ–ನುಡಿಗಳೆ ನಮ್ಮ ಧರ್ಮವನ್ನು ಹೇಳುತ್ತಿವೆ. ಅದನ್ನು ಅರ್ಥ ಮಾಡಿಕೊಂಡು ಸಮಾಜದಲ್ಲಿ ನುಡಿದು ನಡೆಯಬೇಕು. ಧರ್ಮಾಚರಣೆಯಿಂದ ಸುಖ–ಸಂಪತ್ತು ಲಭಿಸುತ್ತದೆ. ಸತ್ಯ ನಾರಾಯಣ ಪೂಜೆ ಮಾಡುವುದರಿಂದ ಇಷ್ಟಾರ್ಥಗಳು ದೊರೆಯುತ್ತವೆ ಎಂದು ಸೌಮ್ಯ ಅನೀಲ್ ಚಿಕ್ಕಮಾದು ಹೇಳಿದರು.
ತಾಲೂಕಿನ ಕೊತ್ತೇಗಾಲ ಗ್ರಾ.ಪಂ. ವ್ಯಾಪ್ತಿಯ ಕೊತ್ತೆಗಾಲ ಗ್ರಾಮದಲ್ಲಿ ಸೋಮವಾರದಂದು ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ. ಟ್ರಸ್ಟ್ ಹುಲ್ಲಹಳ್ಳಿ ಯೋಜನೆ ಮುಳ್ಳೂರು ವಲಯದ ವತಿಯಿಂದ ಗುಜ್ಜಮ್ಮ ದೇವಸ್ಥಾನದ ಆವರಣದಲ್ಲಿ ಸಾಮೂಹಿಕ ಸತ್ಯನಾರಾಯಣ ಪೂಜಾ ಹಾಗೂ ಧಾರ್ಮಿಕ ಸಭಾ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ತಂತ್ರಜ್ಞಾನ ವೇಗವಾಗಿ ಬೆಳೆದಂತೆ ಇಂದಿನ ಯುವ ಜನಾಂಗದಲ್ಲಿ ಧಾರ್ಮಿಕ ನಂಬಿಕೆಗಳು ಆಚರಣೆಗಳು ಕಡಿಮೆಯಾಗುತ್ತಿದೆ.ಮಕ್ಕಳಿಗೆ ಸಣ್ಣ ವಯಸ್ಸಿನಲ್ಲಿಯೇ ಸಂಸ್ಕಾರಯುತ ಜೀವನ ಮೌಲ್ಯಗಳ ಬಗ್ಗೆ ತಿಳುವಳಿಕೆ ನೀಡುವಲ್ಲಿ ಪೋಷಕರ ಪಾತ್ರ ಅತ್ಯಂತ ಮಹತ್ವದ್ದಾದದ್ದು ಎಂದು ತಿಳಿಸಿದರು.
ಮನುಷ್ಯ ಧರ್ಮದ ದಾರಿಯಲ್ಲಿ ನಡೆದಾಗ ಭಗವಂತನ ಅನುಗ್ರಹ ಪ್ರಾಪ್ತವಾಗುತ್ತದೆ. ಧರ್ಮಸ್ಥಳದ ಧರ್ಮಾಧಿಕಾರಿಗಳು ಪ್ರತಿ ಹಳ್ಳಿ ಹಳ್ಳಿಗಳಲ್ಲಿ ಇಂತಹ ಪೂಜಾ ಕಾರ್ಯಕ್ರಮಗಳನ್ನು ನಡೆಸಿ ಜನರಲ್ಲಿ ಧಾರ್ಮಿಕ ಜಾಗೃತಿಯನ್ನು ಮೂಡಿಸುತ್ತಿದ್ದು, ಇವತ್ತಿನ ದಿನ ಶಾಲೆಯ ಆವರಣದಲ್ಲಿ ವಿದ್ಯಾರ್ಥಿಗಳು ಹಾಗೂ ಪೋಷಕರೊಂದಿಗೆ ಈ ಕಾರ್ಯಕ್ರಮ ನಡೆದಿರುವುದು ಅತ್ಯಂತ ಅರ್ಥ ಪೂರ್ಣವಾದದ್ದು ಎಂದರು.
ನಂತರ ಮಾಜಿ ಜಿಪಂ ಸದಸ್ಯ ಪಿ.ರವಿ ಮಾತನಾಡಿ, ಧರ್ಮಸ್ಥಳದ ಧರ್ಮಾಧಿಕಾರಿಗಳ ಮಾರ್ಗದರ್ಶನದಲ್ಲಿ ಪ್ರತಿ ದಿನ ನೂರಾರು ಸಾಮಾಜಿಕ ಆರ್ಥಿಕ ಶೈಕ್ಷಣಿಕ ಹಾಗೂ ಧಾರ್ಮಿಕ ಕಾರ್ಯಕ್ರಮಗಳು ಹಳ್ಳಿ ಹಳ್ಳಿಗಳಲ್ಲಿ ನಡೆಯುತ್ತಿದೆ. ಇದರಿಂದ ಎಷ್ಟೋ ಕುಟುಂಬಗಳು ನೆರವನ್ನು ಪಡೆದುಕೊಂಡಿದೆ. ಈ ಸಂಸ್ಥೆ ಮಾಡುತ್ತಿರುವ ಪ್ರತಿಯೊಂದು ಕೆಲಸವೂ ಸಮಾಜಮುಖಿಯಾಗಿದೆ ಎಂದು ತಿಳಿಸಿದರು.
ಪಡುವಲ ವಿರಕ್ತ ಮಠದ ಶ್ರೀ ಮಹದೇವಸ್ವಾಮೀಜಿಗಳು ಮಾತನಾಡಿ, ಧರ್ಮಸ್ಥಳ ಯೋಜನೆಯು ಗ್ರಾಮೀಣ ಪ್ರದೇಶದಲ್ಲಿ ಆರ್ಥಿಕ ಸ್ವಾವಲಂಬನೆಯ ಜೊತೆಗೆ ಜನರಲ್ಲಿ ಧಾರ್ಮಿಕ ಚಿಂತನೆಗಳ ಹಾಗೂ ಜಾಗೃತಿಯನ್ನು ಮೂಡಿಸುತ್ತಿದೆ. ಸಾಮೂಹಿಕ ಪೂಜೆ ಶ್ರೇಷ್ಠವಾದದ್ದು. ಮೊಬೈಲ್ ದಾಖಲಾಗುತ್ತಿರುವ ಇಂದಿನ ಮಕ್ಕಳಿಗೆ ಇಂತಹ ಧಾರ್ಮಿಕ ಕಾರ್ಯಕ್ರಮಗಳ ಬಗ್ಗೆ ಹರಿವು ಮೂಡಿಸುವ ಅನಿವಾರ್ಯತೆ ಇವತ್ತಿನ ದಿನ ಖಂಡಿತವಾಗಲೂ ಇದೆ ಎಂದು ಆಶೀವಚನ ನೀಡಿದರು.
ಏಕಕಾಲದಲ್ಲಿ 250 ಜೋಡಿ ಭಕ್ತರು ಸತ್ಯನಾರಾಯಣ ಪೂಜಾ ನೆರವೇರಿಸಿ ಭಕ್ತಿ ಸಮರ್ಪಿಸಿದರು. ಶಾಲಾ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.ಅನ್ನದಾನ ಪ್ರಸಾದ ಏರ್ಪಡಿಸಿದರು.
ಈ ಸಂದರ್ಭದಲ್ಲಿ ಸತ್ಯನಾರಾಯಣ ಪೂಜಾ ಸಮಿತಿ ಅಧ್ಯಕ್ಷ ಎಂ.ಮಂಜುನಾಥ, ಧರ್ಮಸ್ಥಳ ಪ್ರಾದೇಶಿಕ ನೀರ್ದೇಶಕ ಜಯಂತ್ ಪೂಜಾರಿ, ಜಿಲ್ಲಾ ನೀರ್ದೇಶಕ ವಿ.ವಿಜಯಕುಮಾರ್ ನಾಗನಾಳ್, ಜೈನ್ ಸಮುದಾಯದ ಮುಖಂಡ ಸೋಮ ಪ್ರಭು, ಗ್ರಾಪಂ ಅಧ್ಯಕ್ಷ ಕುಮಾರ್, ಪಿಡಿಓ ನಾಗೇಂದ್ರ, ಗ್ರಾಪಂ ಉಪಾಧ್ಯಕ್ಷೆ ಶೋಭಾ ಸುಂದರ್, ನಾಯಕ ಸಮಾಜದ ತಾಲ್ಲೂಕು ಅಧ್ಯಕ್ಷ ಪುರದಕಟ್ಟೆ ಬಸವರಾಜು, ವೀರಶೈವ ಮಹಾಸಭಾ ಅಧ್ಯಕ್ಷ ವೀರಭದ್ರಪ್ಪ, ನಾಮಧಾರಿಗೌಡ ಸಮಾಜದ ಅಧ್ಯಕ್ಷ ವಿನೋದ್ ಕುಮಾರ್, ಜಿಲ್ಲಾ ಕುರುಬ ಸಮಾಜದ ಅಧ್ಯಕ್ಷ ಶಿವಪ್ಪ ಕೋಟೆ, ಆದಿ ಕರ್ನಾಟಕ ಮಹಾಸಭಾ ಅಧ್ಯಕ್ಷ ಇಟ್ನ ರಾಜಣ್ಣ, ಗಾಣಿಗ ಸಮಾಜದ ಅಧ್ಯಕ್ಷ ಶಿವಲಿಂಗಶಟ್ಟರು, ಬಾಬು ಜಗಜೀವನರಾಂ ವಿಚಾರ ವೇದಿಕೆ ಅಧ್ಯಕ್ಷರಾದ ತಿಮ್ಮಯ್ಯ, ನಾಗಣ್ಣ, ಉಪ್ಪಾರ ಸಮಾಜ ಅಧ್ಯಕ್ಷ ಮಹದೇವ, ರಾಜೇಂದ್ರಕುಮಾರ್, ನಾಗೇಂದ್ರ ಕುಮಾರ್ , ಗಣೇಶ್ ನಾಯಕ, ನಂಜಪ್ಪ, ರತ್ನಯ್ಯ, ಗಣೇಶ್, ರವಿ, ನರಸಿಂಹಮೂರ್ತಿ, ಡಿ ಧನ್ಯಕುಮಾರ್, ಭೀಮನಾಯಕ, ಚಿನ್ನಮ್ಮ, ಚುಲುವಪ್ಪ, ಇನ್ನೂ ಮುಖಂಡರು ಹಾಗೂ ಮುಳ್ಳೂರು ವಲಯದ ಗ್ರಾಮದ ಕೊತ್ತೇಗಾಲ, ಗೊಂತಗಾಲಹುಂಡಿ, ಕಟ್ಟೆಹುಣಸೂರು, ಚಾಮಲಾಪುರ, ಕಂದೇಗಾಲ ಹಾದನೂರು, ಕಂದಲಿಕೆ, ಎಂ.ಸಿ. ತಳಲು, ಚನ್ನಗುಂಡಿ, ಮುಳ್ಳೂರು ಒಕ್ಕೂಟ ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು.
ವರದಿ: ಹಾದನೂರು ಚಂದ್ರ
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC


