ಮಧುಗಿರಿ: ತುಮುಲ್ ಚುನಾವಣೆ ನಡೆದು 14 ತಿಂಗಳು ಕಳೆದಿದ್ದು ಸುಪ್ರೀಂ ಕೋರ್ಟಿನ ತೀರ್ಪಿನಿಂದಾಗಿ ಮತ್ತೆ ಕ್ಷೇತ್ರದ ಹೈನುಗಾರರ ಸೇವೆಗೆ ಮರಳುತ್ತಿರುವುದಕ್ಕೆ ಸಂತಸವಾಗಿದೆ ಎಂದು ನೂತನ ತುಮುಲ್ ನಿರ್ದೇಶಕ ಕೊಂಡವಾಡಿ ಚಂದ್ರಶೇಖರ್ ತಿಳಿಸಿದರು.
ಪಟ್ಟಣದ ತುಮುಲ್ ಕಚೇರಿಗೆ ಅಭಿಮಾನಿಗಳೊಂದಿಗೆ ಅದ್ದೂರಿಯಾಗಿ ಪ್ರವೇಶಿಸಿ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಚುನಾವಣೆಗೆ ಒಂದು ದಿನ ಮುಂಚೆ ಇದ್ದ ಅರ್ಹ ಮತದಾರರ ಪಟ್ಟಿಯಿಂದ ನನ್ನನ್ನು ಬಿಟ್ಟ ತುಮುಲ್ ಅಧಿಕಾರಿಗಳು ಹಿರಿಯ ಅಧಿಕಾರಿಗಳ ಹೆಸರು ಹೇಳಿ ನನಗೆ ಮೋಸ ಮಾಡಿದ್ದರು. ಆದರೆ ಹಿರಿಯ ಅಧಿಕಾರಿಗಳಿಂದ ಅಂತಹ ಯಾವುದೇ ಪ್ರಸ್ತಾವಣೆ ಇರಲಿಲ್ಲ. ಇದನ್ನು ನ್ಯಾಯಾಲಯದ ಗಮನಕ್ಕೆ ತಂದಾಗ ನನಗೆ ಮತದಾನದ ಹಕ್ಕು ಸಿಕ್ಕಿತು. ನಂತರ ಚುನಾವಣೆಯಲ್ಲಿ ಅನರ್ಹಗೊಂಡ ಡೇರಿಗಳ ಡೆಲಿಗೇಟ್ ಮತದಾರರನ್ನು ಅರ್ಹ ಎಂದು ಮತದಾರರ ಪಟ್ಟಿ ಮರು ಮುದ್ರಣವಾಯಿತು. ಇದು ಕೂಡ ಕಾನೂನು ಬಾಹಿರವಾಗಿದ್ದು ರಾಜ್ಯ ಉಚ್ಚ ನ್ಯಾಯಾಲಯದಲ್ಲಿ ಪ್ರಶ್ನಿಸಿದ್ದು ಅಲ್ಲೂ ನನ್ನ ಪರವಾಗಿ ನ್ಯಾಯವನ್ನು ಎತ್ತಿ ಹಿಡಿಯಲಾಯಿತು.
ಆದರೂ ವಿನಾಕಾರಣ ಗೊಂದಲದಿಂದ ಪ್ರಕರಣ ಮುಂದೆ ಹೋಗಿದ್ದು ಈಗ 14 ತಿಂಗಳ ವನವಾಸದ ನಂತರ ಏ.6 ರಂದು ಎದುರಾಳಿಯ ಮನವಿಯನ್ನು ವಜಾಗೊಳಿಸಿದೆ. ಈಗ ಅಧಿಕೃತವಾಗಿ ನಿರ್ದೇಶಕ ಸ್ಥಾನವನ್ನು ಪಡೆದುಕೊಂಡು ಬಂದಿದ್ದೇನೆ. ಮುಂದೆ ಕ್ಷೇತ್ರದ ಹೈನುಗಾರರ ಸಮಸ್ಯೆಗೆ ಧ್ವನಿಯಾಗಿ ಕೆಲಸ ಮಾಡುತ್ತೇನೆ. ನಾನು ನಂಬಿದ ಗೋಮಾತೆ ನನ್ನ ಕೈ ಹಿಡಿದಿದ್ದು ಸತ್ಯಕ್ಕೆ ಜಯ ಸಿಕ್ಕಿದೆ. ಮುಂದಿನ ದಿನಗಳಲ್ಲಿ ಜೆಡಿಎಸ್ ಪಕ್ಷ ಟಿಕೆಟ್ ನೀಡಿದರೆ ಶಾಸಕ ಸ್ಥಾನದ ಅಭ್ಯರ್ಥಿಯಾಗುವುದರಲ್ಲಿ ಯಾವುದೇ ಅನುಮಾನವಿಲ್ಲ, ಸ್ಪರ್ಧೆ ಮಾಡಲಿದ್ದೇನೆ ಎಂದರು.
ಪುರಸಭೆ ಮಾಜಿ ಸದಸ್ಯ ಜಗಣ್ಣ ಮಾತನಾಡಿ, ಕೊಂಡವಾಡಿ ಚಂದ್ರಶೇಖರ್ ಸೋತು ಗೆದ್ದಿದ್ದು ಐತಿಹಾಸಿಕ ಜಯ ದಾಖಲಿಸಿದ್ದಾರೆ. ಹೈನುಗಾರಿಕೆಗೆ ಜಿಲ್ಲೆಯಲ್ಲಿ ಪುನಶ್ಚೇತನ ನೀಡಿದ್ದು ರೈತರು ಅವರ ಮೇಲಿಟ್ಟಿರುವ ನಂಬಿಕೆಗೆ ಈ ಜಯ ಸಾಕ್ಷಿ ಎಂದರು.
ಜಿ.ಪಂ ಮಾಜಿ ಸದಸ್ಯ ಎಸ್.ಡಿ.ಕೃಷ್ಣಪ್ಪ ಮಾತನಾಡಿ, ಕ್ಷೇತ್ರದ ರೈತಪರ ಹಾಗೂ ಸ್ಥಳೀಯವಾಗಿ ಸಮರ್ಥ ನಾಯಕತ್ವವನ್ನು ಕೊಂಡವಾಡಿ ಚಂದ್ರಶೇಖರ್ ತುಂಬಲಿದ್ದಾರೆ. ಅವರ ಗೆಲುವು ಹೈನುಗಾರ ಕ್ಷೇತ್ರಕ್ಕೆ ಸಿಕ್ಕ ನ್ಯಾಯಯುತ ಗೆಲುವು ಎಂದರು.
ಸಿದ್ಧರಗಲ್ಲು ಡೇರಿ ಅಧ್ಯಕ್ಷ ಶ್ರೀನಿವಾಸ್ ಮಾತನಾಡಿ, ಕೊಂಡವಾಡಿ ಚಂದ್ರಶೇಖರ್ ರವರಿಗೆ ನೀಡಿದಷ್ಟು ತೊಂದರೆ ಬೇರೆ ಯಾರಿಗಾದರೂ ನೀಡಿದ್ದರೆ ನೆಲ ಕಚ್ಚುತ್ತಿದ್ದರು. ಅವರ ರೈತ ಪರ ನೀತಿಯೇ ಅವರಿಗೆ ಬೆಂಗಾವಲಾಗಿ ಗೆಲುವು ತಂದುಕೊಟ್ಟಿದೆ ಎಂದರು ಜೆಡಿಎಸ್ ತಾಲೂಕು ಅಧ್ಯಕ್ಷ ಬಸವರಾಜು ಮಾತನಾಡಿ ಸುಳ್ಳು ಊರೆಲ್ಲ ಸುತ್ತಿಕೊಂಡು ಬರಲು ಹೊರಟರೆ ಸತ್ಯ ಮನೆ ಬಾಗಿಲಲ್ಲೇ ಇರುತ್ತದೆ. ಕಾರಣ ಸತ್ಯದ ಜಾಗವೇ ಪುಣ್ಯಸ್ಥಳ ಹಾಗೆಯೇ ಸುಳ್ಳು ಎಷ್ಟು ಗೊಂದಲ ಮೂಡಿಸಿದರೂ ಸತ್ಯ ವಿಜೃಂಭಿಸಿದೆ ಎಂದರು.
ತಾ.ಪಂ. ಮಾಜಿ ಸದಸ್ಯ ದೊಡ್ಡಯ್ಯ ಮಾತನಾಡಿದರು. ಮುಖಂಡರಾದ ಸಿದ್ದಪ್ಪ, ಲಕ್ಷ್ಮೀನರಸಪ್ಪ, ಪುರಸಭೆ ಮಾಜಿ ಸದಸ್ಯ ನಾರಾಯಣ್, ಗ್ರಾ.ಪಂ. ಮಾಜಿ ಅಧ್ಯಕ್ಷ ನಾಗೇಶ್, ವಿಶ್ವಣ್ಣ, ಕಾಂತರಾಜು, ವೆಂಕಿ, ಬೋರ್ ವೆಲ್ ಕುಮಾರ್, ಆನಂದ್, ಸುಮುಖ ಚಂದ್ರಶೇಖರ್, ತುಮುಲ್ ತಾಲೂಕು ಮುಖ್ಯಸ್ಥರಾದ ರಂಜಿತ್, ವ್ಯವಸ್ಥಾಪಕ ಲಕ್ಷ್ಮೀಕಾಂತ್, ವಿಸ್ತರಣಾಧಿಕಾರಿ ದಿವಾಕರ್ ಸೇರಿದಂತೆ ಹಲವು ಡೇರಿಗಳ ಪದಾಧಿಕಾರಿಗಳು, ಅಭಿಮಾನಿಗಳು ಇದ್ದರು.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC


