ಬೆಂಗಳೂರು: ವಿಜಯಪುರ ಸೇರಿದಂತೆ ಇತರ ಜಿಲ್ಲೆಗಳಲ್ಲಿ ವಕ್ಫ್ ಬೋರ್ಡ್ ರೈತರಿಗೆ ನೋಟಿಸ್ ಕೊಟ್ಟಿರುವ ಹಿನ್ನೆಲೆಯಲ್ಲಿ ತಲೆದೋರಿರುವ ವಿವಾದವನ್ನು ಜೀವಂತವಾಗಿ ಇಡುವಂತೆ ಹಾಗೂ ನಿರಂತರವಾಗಿ ಪ್ರತಿಭಟನೆ ನಡೆಸುವಂತೆ ರಾಜ್ಯ ಬಿಜೆಪಿ ನಾಯಕರಿಗೆ ಅಮಿತ್ ಶಾ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ ಅಂತ ವರದಿಯಾಗಿದೆ.
ರಾಜ್ಯದಲ್ಲಿ ವಕ್ಫ್ ಬೋರ್ಡ್ ನೋಟಿಸ್ ವಿಚಾರ ಸಾಕಷ್ಟು ಸದ್ದು ಮಾಡುತ್ತಿದೆ. ಚನ್ನಪಟ್ಟಣ, ಶಿಗ್ಗಾವಿ ಹಾಗೂ ಸಂಡೂರು ಉಪ ಚುನಾವಣೆಯಲ್ಲೂ ವಕ್ಫ್ ಬೋರ್ಡ್ ನೋಟಿಸ್ ವಿಚಾರವನ್ನು ಬಿಜೆಪಿ ಹಾಗೂ ಜೆಡಿಎಸ್ ರಾಜಕೀಯ ಅಸ್ತ್ರವನ್ನಾಗಿ ಬಳಕೆ ಮಾಡುತ್ತಿದೆ. ಕಾಂಗ್ರೆಸ್ ನಾಯಕರ ವಿರುದ್ಧ ಜನಾಭಿಪ್ರಾಯ ರೂಪಿಸುವಲ್ಲೂ ಇದು ಅನುಕೂಲವಾಗಿದೆ ಎನ್ನಲಾಗಿದೆ.
ಕೇಂದ್ರ ಸರ್ಕಾರ ವಕ್ಫ್ ತಿದ್ದುಪಡಿ ಕಾಯ್ದೆಯನ್ನು ಜಾರಿಗೆ ತರಲು ಚಿಂತನೆ ನಡೆಸುತ್ತಿದೆ. ಇದರ ಸಾಧಕ ಬಾಧಕ ಪರಿಶೀಲನೆ ನಡೆಸಲು ಈಗಾಗಲೇ ಜಗದಾಂಬಿಕಾ ಪಾಲ್ ನೇತೃತ್ವದಲ್ಲಿ ಜಂಟಿ ಸಂಸದೀಯ ಸಮಿತಿಯನ್ನು ರಚನೆ ಮಾಡಲಾಗಿದೆ. ಈ ಸಮಿತಿ ವಿಜಯಪುರ ರೈತರಿಗೆ ವಕ್ಫ್ ನೋಟಿಸ್ ಹಿನ್ನೆಲೆಯಲ್ಲಿ ಸ್ಥಳಕ್ಕೆ ಭೇಟಿ ನೀಡಿ ರೈತರ ಅಹವಾಲು ಸ್ವೀಕಾರ ಮಾಡಿದೆ. ಕೇಂದ್ರ ಸಚಿವ ಅಮಿತ್ ಶಾ ಸೂಚನೆಯ ಮೇರೆಗೆ ಬಿಜೆಪಿ ನಾಯಕರು ಈ ಎಲ್ಲಾ ತಂತ್ರಗಾರಿಕೆಗಳನ್ನು ಪ್ರಯೋಗ ಮಾಡುತ್ತಿದ್ದಾರೆ ಎಂಬ ಮಾತುಗಳು ಬಿಜೆಪಿ ಪಾಳಯದಿಂದಲೇ ಕೇಳಿ ಬರುತ್ತಿದೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Gp0Feftn1c40sYuKY8HX2Q