ಕಿಡ್ನಿ ವೈಫಲ್ಯದಿಂದ ಬಳಲುತ್ತಿರುವ ಎಚ್.ಡಿ.ಕೋಟೆ ತಾಲ್ಲೂಕಿನ ಆನಗಟ್ಟಿ ಗ್ರಾಮದ 22 ವರ್ಷ ವಯಸ್ಸಿನ ಯುವತಿ ಗೌರಿ ಅವರ ಮನೆಗೆ ಜಿಲ್ಲಾ RCH ಅಧಿಕಾರಿಗಳಾದ ಡಾ. ಜಯಂತ್, ತಾಲ್ಲೂಕು ಆರೋಗ್ಯಾಧಿಕಾರಿ ಡಾ.ಟಿ.ರವಿಕುಮಾರ್ ಸಾರ್ವಜನಿಕ ಆಸ್ಪತ್ರೆ ಆಡಳಿತ ವೈದ್ಯಾಧಿಕಾರಿ ಡಾ.ಸೋಮಣ್ಣ ಭೇಟಿ ನೀಡಿ ಆರೋಗ್ಯ ವಿಚಾರಿಸಿದರು.
ಅವಳಿ ಜವಳಿ ಮಕ್ಕಳಲ್ಲಿ ಓರ್ವಳಾಗಿರುವ ಗೌರಿ ಆನಗಟ್ಟಿ ಗ್ರಾಮದ ಕಾಳಸ್ವಾಮಿ-ಮಣಿಯಮ್ಮ ದಂಪತಿಗಳ 10ನೇಯ ಮಗಳಾಗಿದ್ದಾಳೆ. ಒಡ ಹುಟ್ಟಿದ ಸಹೋದರಿ ಹಾಗೂ ಕುಟುಂಬದ ಇತರ ಸದಸ್ಯರು ಆರೋಗ್ಯದಿಂದ ಇದ್ದಾರೆ. ಆದ್ರೆ, ಗೌರಿ ಹುಟ್ಟಿ 15 ವರ್ಷಗಳ ನಂತರ ಅನಾರೋಗ್ಯಕ್ಕೆ ತುತ್ತಾಗಿದ್ದಳು. ಈಗ ಆಕೆ ಕೇವಲ 21 ಕೆ.ಜಿ. ತೂಕವಿದ್ದು, ಆಕೆಯ ಆರೋಗ್ಯ ಸ್ಥಿತಿ ಗಂಭೀರವಾಗಿದೆ.
ನಿಮ್ಮ ಮಗಳು ಆರೋಗ್ಯದ ನಿರ್ಣಾಯಕ ಹಂತಕ್ಕೆ ತಲುಪಿರೋದ್ರಿಂದ, ಮಗಳ ಆರೋಗ್ಯ ಸುಧಾರಿಸುವವರೆಗೂ ಎಚ್.ಡಿ.ಕೋಟೆ ಸಾರ್ವಜನಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯಲಿ ಅಂತ ಅಧಿಕಾರಿಗಳು ಗೌರಿಯ ತಂದೆ ಕಾಳಸ್ವಾಮಿ ಅವರಿಗೆ ಧೈರ್ಯ ತುಂಬಿದರು.
ನಿಮ್ಮಮಗಳ ಚಿಕಿತ್ಸೆಗೆ ಸಹಾಯ ಮಾಡಲು ನಾವು ಬದ್ಧರಾಗಿರುತ್ತೇವೆ, ಯಾವುದೇ ಸಮಯದಲ್ಲಾದರೂ ನೀವು ಬಂದು ಚಿಕಿತ್ಸೆ ಪಡೆದುಕೊಳ್ಳಬಹುದು ಎಂದು ಕುಟುಂಬಸ್ಥರಿಗೆ ವೈದ್ಯಾಧಿಕಾರಿಗಳು ಧೈರ್ಯ ನೀಡಿದರು.
ಈ ಸಂದರ್ಭದಲ್ಲಿ ಆರ್ ಬಿ ಎಸ್ ಕೆ ವೈದ್ಯಾಧಿಕಾರಿಗಳಾದ ಮೋಹನ್ ಕುಮಾರ್, ನಾಗೇಂದ್ರ, ರವಿರಾಜ್, ಭಾಗ್ಯಲಕ್ಷ್ಮಿ, ಅಂಗನವಾಡಿ ಮೇಲ್ವಿಚಾರಕರು,ಆಶಾ ಕಾರ್ಯಕರ್ತೆಯರು ಅಂಗನವಾಡಿ ಕಾರ್ಯಕರ್ತೆಯರು, ಇನ್ನಿತರರು ಹಾಜರಿದ್ದರು.
ವರದಿ: ಮಲಾರ ಮಹದೇವಸ್ವಾಮಿ


