ಶಾಲಾ ಮಕ್ಕಳ ಬಸ್ ಚಾಲನೆ ಮಾಡುತ್ತಿರುವ ವೇಳೆ ಚಾಲಕನಿಗೆ ಹೃದಯಾಘಾತವಾಗಿದೆ. ಸಮಯಪ್ರಜ್ಞೆಯಿಂದ ಬಸ್ಸಿನಲ್ಲಿದ್ದ ಶಾಲಾ ಮಕ್ಕಳ ಜೀವ ಉಳಿಸಿ ಕೊನೆಗೆ ಬಸ್ಸಿನಲ್ಲೇ ಚಾಲಕ ಮೃತಪಟ್ಟ ಮನಕಲಕುವ ಘಟನೆ ತಮಿಳುನಾಡಿನಲ್ಲಿ ಸಂಜೆ ನಡೆದಿದೆ.
ತಿರುಪುರ್ ಜಿಲ್ಲೆಯ ಗಂಗೇಯಂ ನಿವಾಸಿಯಾದ ಮಲಯಪ್ಪನ್ ಮೃತಪಟ್ಟ ವ್ಯಕ್ತಿ ಎಂದು ಗುರುತಿಸಲಾಗಿದೆ. ಮಲಯಪ್ಪನ್ ವೆಲ್ಲಕೋಯಿಲ್‌ನಲ್ಲಿರುವ ಖಾಸಗಿ ಶಾಲೆಯ ಬಸ್ಸಿನ ಚಾಲಕರಾಗಿ ಕರ್ತವ್ಯ ನಿರ್ವಹಿಸುತ್ತಿದ್ದರು.
ಗುರುವಾರ ಸಂಜೆ ಮಕ್ಕಳನ್ನು ಮನೆಗೆ ಬಿಡಲು ಹೊರಟಿದ್ದಾರೆ. ಈ ವೇಳೆ ಬಸ್ ವೆಲ್ಲಕೋಯಿಲ್-ಕರೂರ್ ರಾಷ್ಟ್ರೀಯ ಹೆದ್ದಾರಿಯಲ್ಲಿ ಚಲಿಸುತ್ತಿದ್ದ ವೇಳೆ ಚಾಲಕನಿಗೆ ತೀವ್ರವಾದ ಎದೆನೋವು ಕಾಣಿಸಿಕೊಂಡಿದೆ, ಕೂಡಲೇ ಎಚ್ಚೆತ್ತ ಚಾಲಕ ಮಲಯಪ್ಪನ್ ಬಸ್ಸನ್ನು ರಸ್ತೆ ಬದಿಯಲ್ಲಿ ನಿಲ್ಲಿಸಿದ್ದಾರೆ. ಬಳಿಕ ಬಸ್ಸಿನ ಸೀಟ್ ನಲ್ಲಿ ಕುಳಿತಲ್ಲೇ ಹೃದಯಾಘಾತಕ್ಕೆ ಒಳಗಾಗಿದ್ದಾರೆ. ಆ ಬಳಿಕ ಅಲ್ಲಿನ ಸ್ಥಳೀಯರು ಬಸ್ ಚಾಲಕನನ್ನು ಹತ್ತಿರದ ಆಸ್ಪತ್ರೆಗೆ ಕರೆದೊಯ್ದರು. ಆದರೆ ಯಾವುದೇ ಪ್ರಯೋಜನವಾಗಲಿಲ್ಲ. ಪರಿಶೀಲಿಸಿದ ವೈದ್ಯರು ಮಲಯಪ್ಪನ್ ಮೃತಪಟ್ಟಿರುವುದಾಗಿ ತಿಳಿಸಿದ್ದಾರೆ.
ಸಾವಿನ ದವಡೆಯಲ್ಲೂ ಮಲಯಪ್ಪನ್ ಶಾಲಾ ಬಸ್ಸಿನಲ್ಲಿದ್ದ ಮಕ್ಕಳ ಜೀವ ಉಳಿಸುವಲ್ಲಿ ಸಮಯ ಪ್ರಜ್ಞೆ ಮೆರೆದಿರುವುದಕ್ಕೆ ಸಾರ್ವಜನಿಕರು ಸೇರಿದಂತೆ ಮಕ್ಕಳ ಪೋಷಕರು ಶ್ಲಾಘಿಸಿದ್ದಾರೆ, ಅಷ್ಟು ಮಾತ್ರವಲ್ಲದೆ ತಮಿಳುನಾಡು ಮುಖ್ಯಮಂತ್ರಿ ಎಂ.ಕೆ ಸ್ಟಾಲಿನ್ ಅಗಲಿದ ಮಲಯಪ್ಪನ್ ಕುಟುಂಬಕ್ಕೆ ಸಂತಾಪ ಸೂಚಿಸಿದ್ದಾರೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296
ಯೂಟ್ಯೂಬ್ ಗೆ ಸಬ್ಸ್ ಕ್ರೈಬ್ ಆಗಿ: https://www.youtube.com/channel/UCtrQuDOToxHu8dzMaHjoYXA